ಕುಶಾಲನಗರ ಹಾಗೂ ಸುತ್ತಮುತ್ತ ಭೂಮಾಫಿಯಾ ದಂಧೆ
ಕುಶಾಲನಗರ, ಜೂ. 10: ಕೊಡಗು ಜಿಲ್ಲೆಯಲ್ಲಿ ಶೀಘ್ರಗತಿಯಲ್ಲಿ ಅಭಿವೃದ್ಧಿ ಕಾಣುತ್ತಿರುವ ಕುಶಾಲ ನಗರ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸರಕಾರಿ ಆಸ್ತಿಗಳು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿರುವುದು ಪ್ರಸಕ್ತ ದಿನಗಳ ಬೆಳವಣಿಗೆಯಾಗಿದೆ. ಭೂ ಮಾಫಿಯಾ ತನ್ನ ಕರಾಳ ಹಸ್ತವನ್ನು ಪಟ್ಟಣದಲ್ಲಿ ವಿಸ್ತರಿಸಿರುವುದೇ ಈ ಅವಾಂತರಕ್ಕೆ ಕಾರಣ ಎನ್ನಬಹುದು. ಕುಶಾಲನಗರ ಪಟ್ಟಣದ ವಿವಿಧೆಡೆ ಭೂದಂಧೆ ನಿರಂತರವಾಗಿ ನಡೆಯುತಿದ್ದು ಪಟ್ಟಿ ದಿನಕಳೆದಂತೆ ಬೆಳೆಯುತ್ತಿದೆ.
ಕೆಲವು ಕಾಣದ ಕೈಗಳ ಪರೋಕ್ಷ ಬೆಂಬಲದೊಂದಿಗೆ ಕೆಲವು ಪಂಚಾಯಿತಿ ಅಧಿಕಾರಿಗಳು ಶಾಮೀಲಾಗಿ ಸರಕಾರಿ ಆಸ್ತಿಯ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿರುವುದು ಈ ಎಲ್ಲಾ ಅವಾಂತರಗಳಿಗೆ ಪ್ರಮುಖ ಕಾರಣವಾಗಿದೆ.
ಕುಶಾಲನಗರದ ಬೈಚನಹಳ್ಳಿ ವ್ಯಾಪ್ತಿಯಲ್ಲಿ ಪಟ್ಟಣದ ಹೃದಯ ಭಾಗದಲ್ಲಿರುವ ಕಾವೇರಿ ಬಡಾವಣೆಯ ಪಟ್ಟಣ ಪಂಚಾಯಿ ತಿಯ ಅಂಗಡಿ ಮಳಿಗೆಗಳು ಖಾಸಗಿ ವ್ಯಕ್ತಿಗಳ ವಶಕ್ಕೆ ಹೋಗುವ ಪರಿಸ್ಥಿತಿಗೆ ಕೆಲವು ಅಧಿಕಾರಿಗಳೇ ಪರೋಕ್ಷ ಕಾರಣವಾಗುತ್ತಿರುವ ಆರೋಪಗಳು ಕೇಳಿಬಂದಿದೆ.
ಮೂರು ದಶಕಗಳ ಹಿಂದೆ ಅಂದಾಜು 80 ಲಕ್ಷ ರೂಗಳ ವೆಚ್ಚದಲ್ಲಿ 20 ಕ್ಕೂ ಅಧಿಕ ಅಂಗಡಿ ಮಳಿಗೆಗಳನ್ನು ಪಂಚಾಯಿತಿ ವತಿಯಿಂದ ನಿರ್ಮಾಣ ಗೊಳಿಸಲಾಗಿದ್ದು ಇದೀಗ ಈ ಕೆಲವು ಮಳಿಗೆಗಳಲ್ಲಿ ಅಕ್ರಮವಾಗಿ ವ್ಯಾಪಾರ ವಹಿವಾಟು ನಡೆಯುತ್ತಿರುವುದು ಕಾಣಬಹುದು. ಮಳಿಗೆ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ಬಾಡಿಗೆ ವಸೂಲಿ ಮಾಡುತ್ತಿರುವ ದಂಧೆಗಳು ಕೂಡ ಹುಟ್ಟಿಕೊಂಡಿದ್ದು ಸರಕಾರದ ಬೊಕ್ಕಸಕ್ಕೆ ವಾರ್ಷಿಕ ಲಕ್ಷಾಂತರ ರೂಗಳ ನಷ್ಟ ಉಂಟಾಗುತ್ತಿದೆ.
ಕುಶಾಲನಗರ ಪಟ್ಟಣದ ಬಹುತೇಕ ಬಡಾವಣೆಗಳ ಮೂಲ ನಕ್ಷೆಗಳ ಕಡತಗಳು ಕೂಡ ಪಟ್ಟಣ ಪಂಚಾಯಿತಿಯಲ್ಲಿ ನಾಪತ್ತೆ ಯಾಗಿರುವ ಬಗ್ಗೆ ಪಂಚಾಯಿತಿಯ ಈ ಹಿಂದಿನ ಅಧಿಕಾರಿಗಳು ಲಿಖಿತವಾಗಿ ತಿಳಿಸಿದ್ದು ಈ ಬಗ್ಗೆ ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ. ಬಹುತೇಕ ಸಾರ್ವಜನಿಕ ಹಿತಾಸಕ್ತಿಗಾಗಿ ಮೀಸಲಿರಿಸಿರುವ ಜಾಗ ಹಾಗೂ ಉದ್ಯಾನವನಗಳನ್ನು ಕಬಳಿಸಿರುವ ದಾಖಲೆಗಳೇ ಇಲ್ಲಿ ಅಧಿಕವಾಗಿ ಕಂಡುಬರುತ್ತಿವೆ. ಮಾಹಿತಿಯ ಕೊರತೆಯೊಂದಿಗೆ ನಿವೇಶನ ಖರೀದಿಸಿರುವ ಮಾಧ್ಯಮ ವರ್ಗದವರೂ ಈ ಮೂಲಕ ವಂಚನೆಗೊಳಗಾಗಿ ಮುಂದಿನ ದಿನಗಳಲ್ಲಿ ತಮ್ಮ ನೆಲೆಯನ್ನು ಕಳೆದುಕೊಳ್ಳಬೇಕಾದ ದುಸ್ಥಿತಿಯೂ ಕುಶಾಲನಗರದಲ್ಲಿ ಸೃಷ್ಠಿಯಾಗಲಿದೆ.
ಕುಶಾಲನಗರ ಸಮೀಪದ ಅತ್ತೂರು ಅರಣ್ಯ ವಲಯದಲ್ಲಿ ಸುಮಾರು 66 ಎಕರೆ ಅರಣ್ಯ ಪ್ರದೇಶವನ್ನು ಕಬಳಿಸುವ ಹುನ್ನಾರ ಸಂದರ್ಭ ‘ಶಕ್ತಿ’ ಆ ಬಗ್ಗೆ ವರದಿ ಪ್ರಕಟಿಸಿದ ಬೆನ್ನಲ್ಲೇ ಅರಣ್ಯ ಸೇರಿದಂತೆ ನೂರಾರು ಕೋಟಿ ಬೆಲೆಬಾಳುವ ಆಸ್ತಿಯೊಂದು ಇನ್ನೂ ಉಳಿದಿದೆ.
ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಮಡಿಕೇರಿ ರಸ್ತೆಯಲ್ಲಿ ಕಂಡುಬರುವ ತಾವರೆಕೆರೆಯನ್ನು ಮಣ್ಣು ಹಾಕಿ ಮುಚ್ಚುವ ಮೂಲಕ ಖಾಸಗಿ ಲೇಔಟ್ ಮಾಲೀಕರು ಮತ್ತು ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ಕೆರೆ ನಾಶಕ್ಕೆ ಮುಂದಾದ ಸಂದರ್ಭ ಶಕ್ತಿಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಅಂದಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ತಕ್ಷಣ ಸಾವಿರಾರು ಲೋಡ್‍ಗಳಷ್ಟು ಮಣ್ಣನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗುವು ದರೊಂದಿಗೆ ಕೆರೆಯ ಅಸ್ತಿತ್ವವನ್ನು ಉಳಿಸಿರುವುದನ್ನು ಸ್ಮರಿಸಬಹುದು.
ಪಟ್ಟಣ ಪಂಚಾಯಿತಿಯ ಹಳೆಯ ಕಚೇರಿ ಮುಂಭಾಗದಲ್ಲಿರುವ ಪಂಚಾಯಿತಿಗೆ ಸೇರಿದ ಕೋಟಿಗಟ್ಟಲೆ ಬೆಲೆಬಾಳುವ ಜಾಗ, ವಿವಿಧ ಬಡಾವಣೆಗಳ ಸಾರ್ವಜನಿಕ ಉಪಯೋಗಕ್ಕೆ ಮೀಸಲಾದ ಉದ್ಯಾನವನ, ಸಾರ್ವಜನಿಕ ರಸ್ತೆಯನ್ನು ಕಬಳಿಸಿರುವುದು, ಕೆಲವೆಡೆ ಮಾರಾಟ ಮಾಡಿರುವುದು, ಪಂಚಾಯಿತಿ ಮಾರುಕಟ್ಟೆ ಜಾಗ, ಖಾಸಗಿ ಬಸ್ ನಿಲ್ದಾಣದ ವ್ಯಾಪ್ತಿಯಲ್ಲಿ ಒತ್ತುವರಿ, ಮೈಸೂರು ರಸ್ತೆಯ ಕೋಟಿಗಟ್ಟಲೆ ಬೆಲೆಬಾಳುವ ಜಾಗವೊಂದನ್ನು ಬೆಂಗಳೂರಿನ ವ್ಯಕ್ತಿಗೆ ಪರಭಾರೆ ಮಾಡಿರುವುದು ಇದೀಗ ಇದಕ್ಕೆ ಇನ್ನೊಂದು ಭೂಮಾಫಿಯ ದಂಧೆ ಸೇರಿಕೊಂಡಿರುವ ಬಗ್ಗೆ ಕೂಡ ಸ್ಥಳೀಯರು ಆರೋಪಗಳನ್ನು ಮಾಡುತ್ತಿರುವುದು ಕಂಡುಬಂದಿದೆ.
ಇವೆಲ್ಲಾ ಅವ್ಯವಹಾರವನ್ನು ಪತ್ತೆಹಚ್ಚಲು ತಕ್ಷಣ ಜಿಲ್ಲಾಧಿಕಾರಿಗಳು ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ್ ಒಂದನ್ನು ರಚಿಸಿ ಭೂದಂಧೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಎಲ್ಲಾ ಸರಕಾರಿ ಜಾಗಗಳನ್ನು ವಶಪಡಿಸಿ ಕೊಂಡು ಅವುಗಳ ಹದ್ದುಬಸ್ತು ಮಾಡಲು ಕಾರ್ಯಾಚರಣೆ ಕೈಗೊಳ್ಳಬೇಕಾಗಿದೆ.
ಪಟ್ಟಣದಲ್ಲಿ ಈ ರೀತಿಯ ಬೆಳವಣಿಗೆಯಾಗಿದ್ದರೆ ನೆರೆಯ ಮುಳ್ಳುಸೋಗೆ ವ್ಯಾಪ್ತಿಯಲ್ಲಿ ದೇವಾಲಯವೊಂದಕ್ಕೆ ಸೇರಿದ ಎಕರೆಗಟ್ಟಲೆ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿರುವ ಪ್ರಕರಣವೊಂದು ಚರ್ಚೆಗೆ ಗ್ರಾಸವಾಗಿದೆ.
ಈ ನಡುವೆ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆದ್ದಾರಿ ಬದಿಯಲ್ಲಿ ಅಕ್ರಮವಾಗಿ ಕಟ್ಟಡಗಳು ತಲೆ ಎತ್ತುತ್ತಿದ್ದು ಈ ಬಗ್ಗೆ ಕ್ರಮಕೈಗೊಳ್ಳುವಲ್ಲಿ ಕೂಡ ಪಟ್ಟಣ ಪಂಚಾಯ್ತಿ ವಿಫಲವಾಗಿದೆ. ರಸ್ತೆ ಬದಿಯ ಚರಂಡಿ ಸೇರಿದಂತೆ ಕಟ್ಟಡಗಳ ನಿರ್ಮಾಣವಾದರೂ ಪಂಚಾಯಿತಿ ಅಧಿಕಾರಿಗಳು ಮೌನವಹಿಸುತ್ತಿರುವುದು ನಾಗರಿಕರ ಆಕ್ರೋಷಕ್ಕೆ ಕಾರಣವಾಗಿದೆ.
ಪಟ್ಟಣದ ಮುಖ್ಯರಸ್ತೆಯಲ್ಲಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಬಹುಮಹಡಿ ಕಟ್ಟಡಗಳು ನಿರ್ಮಾಣಗೊಂಡಿದ್ದು ಈ ಬಗ್ಗೆ ಪಂಚಾಯಿತಿ ಆಡಳಿತ ಮೌನ ವಹಿಸಿದೆ ಎಂದು ದೂರಿದ್ದಾರೆ.
ವಾಣಿಜ್ಯ ಕಟ್ಟಡಗಳಿಂದ ದಿನನಿತ್ಯ ಲಕ್ಷಗಟ್ಟಲೆ ಕಲುಷಿತ ತ್ಯಾಜ್ಯ ಮಿಶ್ರಿತ ನೀರು ಚರಂಡಿ ಮೂಲಕ ನೇರವಾಗಿ ನದಿ ಸೇರುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ವಾಣಿಜ್ಯ ಕಟ್ಟಡಗಳಿಂದ ಮಲಿನ ನೀರು ಹೊರಬರುವ ಸಂದರ್ಭ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಗೆ ಎಸ್‍ಟಿಪಿ ಘಟಕ ನಿರ್ಮಾಣ ಕಡ್ಡಾಯವಾಗಿದ್ದರೂ ಇದನ್ನು ಅನುಷ್ಠಾನಗೊಳಿಸುವಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎನ್ನುವುದು ಜನತೆಯ ದೂರಾಗಿದೆ.
- ವನಿತಾ ಚಂದ್ರಮೋಹನ್