ಮಡಿಕೇರಿ, ಜೂ. 9: ಸರ್ಕಾರ ದೇವಸ್ಥಾನ, ಮಸೀದಿ, ಚರ್ಚ್ ತೆರೆಯಲು ಅವಕಾಶ ನೀಡಿದ್ದು, ಸರ್ಕಾರದ ನಿರ್ದೇಶನಗಳನ್ನು ಚಾಚು ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದ್ದಾರೆ.

ನಗರದ ಜಿ.ಪಂ.ಸಭಾಂಗಣದಲ್ಲಿ ವಿವಿಧ ದಾರ್ಮಿಕ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ದೇವಸ್ಥಾನ, ಮಸೀದಿ, ಚರ್ಚ್‍ಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ಪ್ರಸಾದ ಮತ್ತು ತೀರ್ಥಕ್ಕೆ ಅವಕಾಶವಿಲ್ಲ. ಅಂತರ ಕಾಯ್ದುಕೊಂಡು ಪ್ರಾರ್ಥಿಸಬೇಕು. ಮಾಸ್ಕ್ ಹಾಕುವುದು, ಥರ್ಮಲ್ ಸ್ಕ್ಯಾನರ್ ಮತ್ತು ಸ್ಯಾನಿಟೈಸರ್ ಬಳಸುವುದು ಕಡ್ಡಾಯ ಎಂದು ತಿಳಿಸಿದರು.

ಮುಸ್ಲಿಂ ಸಮಾಜದ ಮಹಮ್ಮದ್ ಅನೀಫ್ ಅವರು ಪ್ರಾರ್ಥನಾ ಸಂದರ್ಭದಲ್ಲಿ ಒಬ್ಬೊರಿಗೊಬ್ಬರು ಹತ್ತಿರವಾಗುವುದರಿಂದ ಸದ್ಯಕ್ಕೆ ಮಸೀದಿಗಳಲ್ಲಿ ಪ್ರಾರ್ಥನೆ ಸಂಬಂಧ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.

ಕ್ರೈಸ್ತ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ಬೇಬಿಮ್ಯಾಥ್ಯೂ ಸರ್ಕಾರದ ನಿರ್ದೇಶನವನ್ನು ಚಾಚು ತಪ್ಪದೇ ಪಾಲಿಸಲಾಗುವುದು ಎಂದು ತಿಳಿಸಿದರು.

ಕ್ರೈಸ್ತ ಧರ್ಮದ ಹೇಮಚಂದ್ರ ಕುಮಾರ್ ಅವರು ಚರ್ಚ್‍ಗಳಲ್ಲಿ ಮದುವೆ ಸಂದರ್ಭ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿ ಬಗ್ಗೆ ಮಾಹಿತಿ ನೀಡುವಂತೆ ಕೋರಿದರು. ಭಾಗಮಂಡಲದ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ ಮಾಡಬೇಕು ಎಂಬುದು ಕೇಳಿ ಬಂದಿತು. ತಲಕಾವೇರಿ-ಭಾಗಮಂಡಲ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ, ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ಇತರರು ಇದ್ದರು.