ಮಡಿಕೇರಿ, ಜೂ. 9: ತಾ.4 ಹಾಗೂ 5 ರಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರ ಜಿಲ್ಲಾ ಪ್ರವಾಸದ ಸಂದರ್ಭ, ಜಿಲ್ಲೆಯ ‘ಕೊರೊನಾ ವಾರಿಯರ್ಸ್’ಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭ ಸರಕಾರದ ನಿಯಮ ಉಲ್ಲಂಘಿಸಿ ಸುಮಾರು 200 ಮಂದಿಗೆ ಔತಣಕೂಟವನ್ನು ಮಡಿಕೇರಿ ನಗರದ ಕೆಳಗಿನ ಕೊಡವ ಸಮಾಜ ಹಾಗೂ ಹೊರವಲಯದ ಮೆಡಿಕಲ್ ಕಾಲೇಜಿನಲ್ಲೂ ಏರ್ಪಡಿಸಲಾಗಿತ್ತು. 200ಕ್ಕೂ ಹೆಚ್ಚು ಮಂದಿ ಸಾಮಾಜಿಕ ಅಂತರವನ್ನು ಅಕ್ಷರಶಃ ಗಾಳಿಗೆ ತೂರಿ, ಮೈಮರೆತ್ತಿದ್ದು, ನ್ಯಾಯವಾದಿ ಕೃಷ್ಣಮೂರ್ತಿಯವರು ಈ ಔತಣಕೂಟವನ್ನು ಖಂಡಿಸಿದ್ದಾರೆ.
ಈ ಸಂಬಂಧ 'ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಯವರಿಗೆ’ ಪತ್ರದ ಮೂಲಕ ದೂರು ನೀಡಿರುವ ಅವರು, ಸಾರ್ವಜನಿಕರಿಗೆ ಒಂದು ನ್ಯಾಯ, ಸಚಿವರುಗಳಿಗೆ ಒಂದು ನ್ಯಾಯ ಸರಿಯಲ್ಲ. ಈ ಹಿಂದೆ ಜಿಲ್ಲೆಯ ಸುಮಾರು 150 ಪತ್ರಕರ್ತರಿಗೆ ನಗರದ ಹೊಟೇಲ್ ಒಂದರಲ್ಲಿ ತಾ.5 ರಂದು ಔತಣಕೂಟವನ್ನು ಸಚಿವರು ಏರ್ಪಡಿಸಿದ್ದರು. 50ಕ್ಕೂ ಅಧಿಕ ಮಂದಿ ಸೇರುವ ಈ ಔತಣಕೂಟವು ಕಾನೂನು ಬಾಹಿರವಾಗಿದೆ. ಔತಣಕೂಟ ನಡೆಸಿದರೆ ಕಾನೂನು ಹೋರಾಟ ನಡೆಸುವುದಾಗಿ ತಾವು ಸಾಮಾಜಿಕ ಜಾಲತಾಣದ ಮೂಲಕ ಜಿಲ್ಲಾಡಳಿತವನ್ನು ಎಚ್ಚರಿಸಿದ್ದು, ಔತಣಕೂಟವನ್ನು ಮುಂದೂಡ ಲಾಯಿತು.
ಆದರೆ, ಇದೀಗ ‘ಕೊರೊನಾ ವಾರಿಯರ್ಸ್’ ಸನ್ಮಾನ ನೆಪದಲ್ಲಿ ಮೇಲ್ಕಂಡ ಎರಡು ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿ ಔತಣಕೂಟ ವನ್ನು ನಡೆಸಲಾಗಿದೆ. ಔತಣಕೂಟದ ಚಿತ್ರ ಹಾಗೂ ಸುದ್ದಿ ರಾಜ್ಯ ಪತ್ರಿಕೆಯೊಂದರಲ್ಲೂ ಪ್ರಕಟವಾಗಿದ್ದು, ಇದರ ಪ್ರಕಾರ ಸಚಿವ ವಿ.ಸೋಮಣ್ಣ ಸೇರಿದಂತೆ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಕೆಲ ಜಿಲ್ಲಾ ಪಂಚಾಯತ್ ಸದಸ್ಯರು, ನಗರಸಭೆ ಸಿಬ್ಬಂದಿ, ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಔತಣಕೂಟದಲ್ಲಿ ಪಾಲ್ಗೊಂಡಿರುತ್ತಾರೆ. ಆದ್ದರಿಂದ ಶೀಘ್ರದಲ್ಲೇ ಈ ಔತಣಕೂಟ ಏರ್ಪಡಿಸಿದ್ದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿದೆ. ಇಲ್ಲವಾದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲು ಏರಬೇಕಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.