ಗೋಣಿಕೊಪ್ಪಲು, ಜೂ. 9:ಆದಿವಾಸಿ ಸಮುದಾಯಗಳ ಕೃಷಿ ಚಟುವಟಿಕೆಗೆ ಅನುಕೂಲವಾಗಲು ತೋಡುತ್ತಿದ್ದ ಕೆರೆ ಅಭಿವೃದ್ಧಿಗೆ ಅರಣ್ಯ ಇಲಾಖೆಯ ವನಪಾಲಕರು ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಆಕ್ರೋಶ ಗೊಂಡ ಆದಿವಾಸಿಗಳು ತಿತಿಮತಿ, ಮತ್ತಿಗೋಡು, ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.

ಚನ್ನಯ್ಯನಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚನ್ನಂಗಿ ಗ್ರಾಮದ ಚಿಕ್ಕ ರೇಷ್ಮೆ ಗಿರಿಜನ ಹಾಡಿಯಲ್ಲಿ ಇರುವ ಆದಿವಾಸಿಗಳ ಕುಟುಂಬಗಳಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲು ಸರ್ಕಾರದಿಂದ ಸಣ್ಣ ನೀರಾವರಿ ಇಲಾಖೆಯ ಮೂಲಕ ಕೆರೆ ಅಭಿವೃದ್ಧಿ ಕಾರ್ಯ ಆರಂಭಗೊಂಡಿತ್ತು. ಕೆರೆ ಕೆಲಸ ಆರಂಭವಾಗುತ್ತಿದ್ದಂತೆ ಈ ಭಾಗಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ವನ ಪಾಲಕರು ಈ ಜಾಗವು ವನ್ಯ ಜೀವಿ ವಿಭಾಗಕ್ಕೆ ಸೇರಿರುವುದರಿಂದ ಕೆರೆ ಅಭಿವೃದ್ಧಿ ಪಡಿಸಲು ಅವಕಾಶ ನೀಡುವುದಿಲ್ಲ ಎಂದು ಆಕ್ಷೇಪಿಸಿ ಕಾಮಗಾರಿಯನ್ನು ತಡೆ ಹಿಡಿದಿದ್ದಾರೆ.

ಇದರಿಂದ ಆಕ್ರೋಶಗೊಂಡ ಆದಿವಾಸಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಜಾಗ ಖಾಲಿ ಮಾಡಿದ್ದರು. ಎಷ್ಟೇ ಬಾರಿ ದೂರವಾಣಿ ಮೂಲಕ ಕರೆ ಮಾಡಿ ವಿವರ ಬಯಸಿದರಾದರೂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂಧನೆ ನೀಡಲಿಲ್ಲ ಇದರಿಂದ ಅಸಮದಾನಗೊಂಡ ಗ್ರಾಮದ ಆದಿವಾಸಿಗಳು ತಿತಿಮತಿ ಮತ್ತಿಗೋಡು ಸಮೀಪವಿರುವ ಅರಣ್ಯ ಕಚೇರಿಗೆ ತೆರಳಿ ತಮ್ಮ ಅಸಮದಾನವನ್ನು ಹೊರ ಹಾಕಿ ಪ್ರತಿಭಟಿಸಿದರು.

ಚಿಕ್ಕ ರೇಷ್ಮೆ: ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸುವಂತೆ ಒತ್ತಾಯಿಸಿದರಾದರೂ ಯಾವುದೇ ಅಧಿಕಾರಿಗಳು ಆದಿವಾಸಿಗಳ ಕೂಗಿಗೆ ಸ್ಪಂದÀನೆ ನೀಡಿಲ್ಲ. ಕೆರೆ ಅಭಿವೃದ್ಧಿಗೆ ಅಡ್ಡಿಪಡಿಸಬಾರದು. ಕೃಷಿ ಚಟುವಟಿಕೆಗೆ ಅನುಕೂಲ ಕಲ್ಪಿಸಬೇಕು ತಪ್ಪಿದಲ್ಲಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿ 15 ದಿನಗಳ ಗಡುವು ನೀಡಿ ತೆರಳಿದ್ದಾರೆ. ಈ ಸಂದರ್ಭ ಆದಿವಾಸಿ ಮುಖಂಡರುಗಳಾದ ಜೆ.ಕೆ. ರಾಮು, ಬಿ.ಕೆ. ಸಿದ್ದಪ್ಪ, ವೈ.ಸಿ. ತಮ್ಮಯ್ಯ, ಪಿ.ಕೆ.ಮಲ್ಲ, ವೈ.ಪಿ.ರಾಜು, ಪಿ.ಜೆ.ಸೋಮ, ಜೆಡಿ.ರಾಜ, ವೈ.ಎಂ. ರವಿ, ಕೆ.ಎಸ್. ಮಣಿ, ಪಿ.ಎನ್. ಅಶೋಕ್, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

-ಹೆಚ್.ಕೆ. ಜಗದೀಶ್