ಮಡಿಕೇರಿ, ಜೂ. 9: ಕೊರೊನಾ ವೈರಾಣು ಅಕ್ಷರಶಃ ವಿಶ್ವವನ್ನು ನಲುಗಿಸಿದೆ. ಭಾರತ ಎರಡು ತಿಂಗಳು ಕೊರೊನಾ ವಿರುದ್ಧ ಅಚ್ಚು ಕಟ್ಟಾಗಿ ಕಾರ್ಯನಿರ್ವಹಿಸಿದೆ. ಈ ಸುಸಂದರ್ಭದಲ್ಲಿ ನನಗೊಂದು ಹಳೆಯ ಗಾದೆ ನೆನಪಾಗುತ್ತದೆ. ‘ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ’ ಹೆಚ್ಚು ಕಡಿಮೆ ಈ ಗಾದೆ ಮಾತಿಗೂ ನಮ್ಮ ಕೊಡಗಿನ ಪ್ರಸ್ತುತ ಸ್ಥಿತಿಗೂ ಹೋಲಿಕೆ ಇದೆ.
ಜೂನ್ ಒಂದಕ್ಕೆ ಶೇ. 90ರಷ್ಟು ಲಾಕ್ಡೌನ್ ಸಡಿಲಿಸಿದ್ದೇ ಸಡಿಲಿಸಿದ್ದು. ಜನ ಸಾಮಾನ್ಯರು ಮಾಸ್ಕನ್ನು, ಸಾಮಾಜಿಕ ಅಂತರವನ್ನು, ಸ್ಯಾನಿಟೈಸರ್ ಅನ್ನು ಅಕ್ಷರಶಃ ಮರೆತು ಮೆರೆದಾಡತೊಡಗಿದ್ದಾರೆ. ವಿಪರ್ಯಾಸ ಎಂದರೆ ಕೊರೊನಾ ಸೋಂಕಿತರ ಸಂಖ್ಯೆ ದಿನೆ ದಿನೇ ದೇಶದಾದ್ಯಂತ ದುಪ್ಪಟ್ಟಾಗುತ್ತಿದೆ. ಮಾಸ್ಕ್ ಧರಿಸದೆ ಓಡಾಡಿದರೆ, ಸಾಮಾಜಿಕ ಅಂತರಕ್ಕೆ ಧಕ್ಕೆ ತಂದರೆ ತಲೆಗೆ ನೂರು ರೂ ದಂಡ ಎನ್ನುವ ಕಾನೂನು ಕೇವಲ ಕಾನೂನು ಕಾಗದಕ್ಕೆ ಸೀಮಿತವಾಗಿದೆ.
ಕೊಡಗಿನಲ್ಲಿ ಗಮನಿಸುವುದಾದರೆ ಜನಸಾಮಾನ್ಯರು ಮಾಸ್ಕ್ ಇಲ್ಲದೆ ಹಲವೆಡೆ ರಾಜಗಾಂಭೀರ್ಯದೊಡನೆ ಓಡಾಡುತ್ತಿದ್ದಾರೆ. ಈಗಾಗಲೇ ಕೊಡಗಿನಲ್ಲಿ ಪ್ರವಾಸೋದ್ಯಮ ತೆರೆಯಲ್ಪಟ್ಟಿದೆ. ಬೆಂಗಳೂರು ಸೇರಿದಂತೆ ಕೊರೊನಾದಿಂದ ಬಂಧಿಖಾನೆ ವಾತಾವರಣದಲ್ಲಿ ತಿಂಗಳುಗಳನ್ನು ಕಳೆದು ಬೇಸತ್ತಿರುವ ಜನ ಕೊಡಗಿನತ್ತ ಮುಖ ಮಾಡಿದ್ದಾರೆ. ಅವರು ಬಂದು ಇಲ್ಲಿನ ಸ್ಥಳೀಯರ ನಿರ್ಲಕ್ಷ್ಯವನ್ನು ಮೈಗೂಡಿಸಿಕೊಂಡು ನಮ್ಮವರಂತೆ ಮಾಸ್ಕ್ ಇಲ್ಲದೆ, ಒಬ್ಬರಿಗೊಬ್ಬರು ಅಂಟಿಕೊಂಡು ಓಡಾಡಿ ಅದರಿಂದಾಗುವ ಅಪಾಯಕ್ಕೆ ಹೊಣೆಗಾರರಾಗುವ ಪರಿಸ್ಥಿತಿಯು ಉದ್ಭವವಾಗಿದೆ. ಇಲಾಖೆಗಳು ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕ್ರಮವನ್ನು ಕಠಿಣಗೊಳಿಸಬೇಕಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಓ ಅಧಿಕಾರಿಗಳಿಗೆ ಉನ್ನತಮಟ್ಟದಿಂದ ಜನಜಾಗೃತಿ ಮೂಡಿಸುವ ಹಾಗೂ ಸುರಕ್ಷತೆಗೆ ಒತ್ತುಕೊಡುವ ಮಹತ್ತರ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ವಿಪರ್ಯಾಸ ಎಂದರೆ ಕೆಲವೊಂದು ಕಛೇರಿ ಮುಂಗಟ್ಟುಗಳಲ್ಲಿ ಜವಾಬ್ದಾರಿಯುತ ಅಧಿಕಾರಿಗಳು, ಸಿಬ್ಬಂದಿಗಳೇ ಮಾಸ್ಕ್ ಅನ್ನು ಧರಿಸದೆ ಕಾಣಸಿಗುತ್ತಾರೆ.
ದಂಡ ಹಾಕಬೇಕಿರುವವರು, ಕಾನೂನು ಪಾಲಕರು, ಜಿಲ್ಲಾಡಳಿತ ದಂಡ ವಿಧಿಸುವ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಬೇಕಿದೆ. ಜನಸಾಮಾನ್ಯರು ಈ ಕುರಿತು ಸ್ವಹಿತಾಸಕ್ತಿಯಿಂದ ವರ್ತಿಸಬೇಕಿದೆ. ಒಂದು ಸಣ್ಣ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಅಪಾಯಕ್ಕೆ ಆಹ್ವಾನವಿಟ್ಟಂತೆ.
-ಶ್ರೀಧರ್ ನೆಲ್ಲಿತ್ತಾಯ