ಸೋಮವಾರಪೇಟೆ, ಜೂ. 9: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು ಸಂಯೋಜಿತ)ದ ಪದಾಧಿಕಾರಿಗಳು ತಾಲೂಕು ಪಂಚಾಯಿತಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
14ನೇ ಹಣಕಾಸು ಆಯೋಗದ ಹಣದಲ್ಲಿ ಸಿಬ್ಬಂದಿ ವೇತನ ನೀಡಬೇಕು. ಇಲ್ಲಿಯವರೆಗೆ ವೇತನ ನೀಡದೇ ಇರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಸರ್ಕಾರಿ ಆದೇಶದಂತೆ ತೆರಿಗೆ ವಸೂಲಾತಿ ಶೇ.40 ಹಣದಲ್ಲಿ ಬಾಕಿ ಉಳಿದ ವೇತನ ಪಾವತಿಸಬೇಕು. ಇಎಫ್‍ಎಂಎಸ್‍ಗೆ ಬಾಕಿ ಉಳಿದ ಪ್ರಕರಣಗಳನ್ನು ಸರ್ಕಾರಿ ಆದೇಶದಂತೆ ಸೇರ್ಪಡೆ ಮಾಡಬೇಕು ಎಂದು ಸಂಘದ ಅಧ್ಯಕ್ಷ ಭರತ್ ಒತ್ತಾಯಿಸಿದರು.
ಇದರೊಂದಿಗೆ 23.7.2019ರ ಆದೇಶದಂತೆ ಎಲ್ಲಾ ಸಿಬ್ಬಂದಿಗಳನ್ನು ಅನುಮೋದನೆ ನೀಡಬೇಕು. ಎಲ್ಲರಿಗೂ ಸೇವಾ ಪುಸ್ತಕ ತೆರೆಯಬೇಕು. ಪಂಪ್ ಆಪರೇಟರ್ ಗಳಿಂದ ಕರವಸೂಲಿಗಾರ ಹುದ್ದೆಗೆ ಬಡ್ತಿ ನೀಡಬೇಕು. ಸರ್ಕಾರದ ಆದೇಶದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭ ಸಂಘದ ತಾಲೂಕು ಅಧ್ಯಕ್ಷ ನವೀನ್, ಕಾರ್ಯದರ್ಶಿ ವಿಜಯ್, ಖಜಾಂಚಿ ಎಂ.ಎ. ಅಮೀರ್, ಪದಾಧಿಕಾರಿ ಗಳಾದ ಮಹಾಲಿಂಗ, ಬಾಬು, ರಾಜು, ಬಾಪು ಜೋಸ್, ಇಂದ್ರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.