ಸೋಮವಾರಪೇಟೆ,ಜೂ.8: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ 23 ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರಪೇಟೆ ಪ.ಪಂ. ವ್ಯಾಪ್ತಿಯಲ್ಲಿ ರೂ. 20 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಬಾಣಾವರ ರಸ್ತೆ ಸಮೀಪದ ಬಡಾವಣೆ ರಸ್ತೆ, ಬೇಳೂರು ರಸ್ತೆ ಶಾಲೆಯ ಮುಂಭಾಗ, ಪೊಲೀಸ್ ವಸತಿ ಗೃಹದ ರಸ್ತೆ, ಶವಾಗಾರದ ಮುಂಭಾಗದಲ್ಲಿ ಪೂರ್ಣಗೊಂಡಿರುವ ಕಾಂಕ್ರಿಟ್ ರಸ್ತೆಗಳನ್ನು ಉದ್ಘಾಟಿಸಿ ರಂಜನ್ ಮಾತನಾಡಿದರು.
ಕೊರೊನಾ ಸಂಕಷ್ಟದ ನಡುವೆಯೂ ರಾಜ್ಯ ಸರ್ಕಾರ ಕೊಡಗಿನ ಅಭಿವೃದ್ಧಿಗೆ ಅನುದಾನ ಒದಗಿಸುತ್ತಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ನಿರ್ವಹಿಸಲು ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ನಿರ್ದೇಶನ ನೀಡಿದರು.
ರಾಜ್ಯ ಸರ್ಕಾರದ ವಿಶೇಷ ಅನುದಾನದಡಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ನಗರೋತ್ಥಾನ ಯೋಜನೆಯಡಿ 2 ಕೋಟಿ, ವಿಶೇಷ ಪ್ಯಾಕೇಜ್ನಡಿ 1 ಕೋಟಿ, ಎಸ್ಎಫ್ಸಿ ಯೋಜನೆ ಯಡಿ 1 ಕೋಟಿ ಸೇರಿದಂತೆ ಒಟ್ಟು 4 ಕೋಟಿ ಅನುದಾನ ಒದಗಿಸಲಾಗಿದೆ. ರಸ್ತೆ, ಚರಂಡಿ ಸೇರಿದಂತೆ ಇನ್ನೂ 23 ಕಾಮಗಾರಿ ಗಳು ಬಾಕಿಯಿದ್ದು, ತಕ್ಷಣ ಪೂರ್ಣಗೊಳಿಸಬೇಕು ಎಂದು ರಂಜನ್ ಸೂಚಿಸಿದರು.
ಈ ಸಂದರ್ಭ ಪ.ಪಂ. ಸದಸ್ಯರುಗಳಾದ ಪಿ.ಕೆ. ಚಂದ್ರು, ನಳಿನಿ ಗಣೇಶ್, ಜೀವನ್, ನಾಗರತ್ನ, ಬಿ.ಸಿ. ವೆಂಕಟೇಶ್, ಬಿ.ಆರ್. ಮಹೇಶ್, ನಾಮ ನಿರ್ದೇಶನ ಸದಸ್ಯರಾದ ಎಸ್.ಮಹೇಶ್, ಶರತ್ಚಂದ್ರ, ಎಸ್.ಆರ್. ಸೋಮೇಶ್, ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯ ನಿರೀಕ್ಷಕ ಉದಯಕುಮಾರ್, ಅಭಿಯಂತರ ಹೇಮಂತ್, ಮಾಜೀ ಅಧ್ಯಕ್ಷೆ ಲೀಲಾ ನಿರ್ವಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.