ಶ್ರೀಮಂಗಲ, ಜೂ. 8: ಜಿಲ್ಲಾಧಿಕಾರಿಯವರು ಜಿಲ್ಲೆಯ ಹಿತದೃಷ್ಟಿಯಿಂದ ಕೊಡಗಿನಲ್ಲಿ ಪ್ರವಾಸೋದ್ಯಮದ ಮೇಲೆ ನಿರ್ಬಂಧವನ್ನು ಮುಂದುವರಿಸ ಬೇಕೆಂದು ಶ್ರೀಮಂಗಲದ ಸಂಘ ಸಂಸ್ಥೆಯ ಪ್ರಮುಖರು ಆಗ್ರಹಿಸಿದ್ದಾರೆ.ಶ್ರೀಮಂಗಲದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ಅವರು ಮಾತನಾಡಿ ಪ್ರವಾಸಿಗರ ಆಗಮನಕ್ಕೆ ಅವಕಾಶ ನೀಡಿದರೆ ಜಿಲ್ಲಾಡಳಿತ ಇದುವರೆಗೆ ಕೈಗೊಂಡ ಕೆಲಸವೆಲ್ಲವು ನೀರಿಗೆ ಹೋಮ ಹಾಕಿದಂತೆ ಆಗಲಿದೆ. ಕೊಡಗಿನಲ್ಲಿ ಕೋವಿಡ್ ಪ್ರಕರಣ ಕೇವಲ 3 ಇರುವುದರಿಂದ ಅತ್ಯಧಿಕ
(ಮೊದಲ ಪುಟದಿಂದ) ಪ್ರಕರಣವಿರುವ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಸುರಕ್ಷಿತ ಪ್ರದೇಶ ಅರಸಿ ಇಲ್ಲಿನ ಹೋಂ ಸ್ಟೇ, ರೆಸಾರ್ಟ್, ಗೆಸ್ಟ್ ಹೌಸ್ಗಳಿಗೆ ಪ್ರವಾಸಿಗರು ಬರಲಿದ್ದಾರೆ. ಇದರಿಂದ ಕೋವಿಡ್ ಸೋಂಕು ಹೊತ್ತು ಜಿಲ್ಲೆಗೆ ಪ್ರವಾಸಿಗರು ಆಗಮಿಸುವ ಸಾಧ್ಯತೆ ಹೆಚ್ಚಿದೆ. ಹೋಂ ಸ್ಟೇ, ರೆಸಾರ್ಟ್, ಗೆಸ್ಟ್ ಹೌಸ್ಗಳಲ್ಲಿ ತಂಗುವ ಪ್ರವಾಸಿಗರಿಂದ ಜಿಲ್ಲೆಯ ಮೂಲೆಮೂಲೆಗೆ ಕೋವಿಡ್ - 19 ಸೋಂಕು ಹರಡುವ ಅಪಾಯ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶ್ರೀಮಂಗಲ ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ವಕೀಲ ಮಚ್ಚಮಾಡ ಕಾರ್ಯಪ್ಪ ಅವರು ಮಾತನಾಡಿ ಸದ್ಯದ ಪರಿಸ್ಥಿತಿಯಲ್ಲಿ ಕೊಡಗಿನಲ್ಲಿ ಕೋವಿಡ್ 19 ನಿಯಂತ್ರಣದಲ್ಲಿದೆ. ಮುಂದೆಯು ಸಹ ಪ್ರವಾಸೋದ್ಯಮಕ್ಕೆ “ವರ್ಕ್ ಫ್ರಮ್ ಹೋಂ” ಮಾಡುತ್ತಿರುವವರು ಅಧಿಕ ಕೋವಿಡ್ ಪ್ರಕರಣ ಇರುವ ಹೊರ ಜಿಲ್ಲೆ, ರಾಜ್ಯದಿಂದ ಕೊಡಗಿನ ಹೋಂ ಸ್ಟೇಗಳಿಗೆ ಆಗಮಿಸಿ ಉಳಿದುಕೊಂಡು ಕೆಲಸ ನಿರ್ವಹಿಸುವ ಸಾಧ್ಯತೆ ಇದೆ. ಹೋಂ ಸ್ಟೇ ನಡೆಸುವ ಕುಟುಂಬಗಳಲ್ಲಿ ವಯೋವೃದ್ಧರು, ಮಕ್ಕಳು ಕುಟುಂಬ ಸಹಿತ ವಾಸವಿದ್ದು ಪ್ರವಾಸಿಗರು ಹೋಂ ಸ್ಟೇಗಳಿಗೆ ಆಗಮಿಸುವುದರಿಂದ ಸ್ಥಳೀಯ ಜನರಿಗೂ ಸೋಂಕು ಹರಡುವ ಅಪಾಯವಿದೆ ಆದ್ದರಿಂದ ಕೊಡಗಿನ ಜನರ ಆರೋಗ್ಯ ದೃಷ್ಟಿಯಿಂದ ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಸೋದ್ಯಮಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಆಗ್ರಹಿಸಿದರು.
ಕೊಡಗು ಬೆಳೆಗಾರರ ಒಕ್ಕೂಟದ ಶ್ರೀಮಂಗಲ ಹೋಬಳಿ ಅಧ್ಯಕ್ಷ ಕಾಳೀಮಾಡ ತಮ್ಮು ಮುತ್ತಣ್ಣ ಅವರು ಮಾತನಾಡಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಿದರೆ, ಜಿಲ್ಲೆಯಲ್ಲಿ ಲಂಗು ಲಗಾಮು ಇಲ್ಲದೆ ಪ್ರವಾಸಿಗರು ವರ್ತಿಸುತ್ತಾರೆ. ಶ್ರೀಮಂಗಲ ವ್ಯಾಪ್ತಿಯ ಇರ್ಪು ಜಲಪಾತ, ಟಾಟಾ ಚಹಾ ತೋಟ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಮೃತ್ಯುಂಜಯ ದೇವಸ್ಥಾನ, ರಿವರ್ ರ್ಯಾಫ್ಟಿಂಗ್ನಲ್ಲಿ ಅತೀ ಹೆಚ್ಚು ಪ್ರವಾಸಿಗರು ಆಗಮಿಸಿ ಸ್ಥಳೀಯರಿಗೆ ಕಿರಿ ಕಿರಿ ಆಗುತ್ತದೆ ಎಲ್ಲಿಂದ ಯಾರು ಬಂದಿದ್ದಾರೆ ಎಂಬುದು ತಿಳಿಯುವುದಿಲ್ಲ. ಜಿಲ್ಲೆಯ ಜನರ ಸುರಕ್ಷತೆ ದೃಷ್ಟಿಯಿಂದ ಪ್ರವಾಸಿಗರನ್ನು ನಿರ್ಬಂಧಿಸಬೇಕೆಂದು ಆಗ್ರಹಿಸಿದರು. ಈ ನಿಟ್ಟಿನಲ್ಲಿ ಶ್ರೀಮಂಗಲ ಪಿ.ಡಿ.ಒ. ಸತೀಶ್ ಅವರÀ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭ ಕೊಡಗು ಬೆಳೆಗಾರರ ಒಕ್ಕೂಟದ ಶ್ರೀಮಂಗಲ ಹೋಬಳಿ ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ, ಶ್ರೀಮಂಗಲ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ನಿರ್ದೇಶಕ ಕಾಳಿಮಾಡ ಬೆಳ್ಯಪ್ಪ, ನಾಗರಿಕರಾದ ಐಪುಮಾಡ ಶಂಭು ದೇವಯ್ಯ, ಚೋನಿರ ವೇಣು ವಿಶ್ವನಾಥ್, ಕಾಳಿಮಾಡ ದಿಲೀಪ್ ಹಾಜರಿದ್ದರು.
ನಾಪೆÇೀಕ್ಲು ನಾಗರಿಕರ ವಿರೋಧ
ಹೋಂಸ್ಟೇ ಪುನಃ ಆರಂಭಿಸಿದಲ್ಲಿ ಕೊಡಗಿನಲ್ಲಿ ಕೊರೊನಾ ಭೀತಿ ಹೆಚ್ಚಾಗುವ ಸಂಭವವಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದು ನಾಪೆÇೀಕ್ಲುವಿನ ನಾಗರಿಕರಾದ ಬಿದ್ದಾಟಂಡ ಜಿನ್ನು ನಾಣಯ್ಯ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಎನ್.ಎಸ್.ಉದಯ ಶಂಕರ್, ಪಟ್ರಪಂಡ ಮೋಹನ್ ಮುದ್ದಪ್ಪ, ಕೇಟೋಳಿರ ರೆಮ್ಮಿ, ಕಾಳೆಯಂಡ ಸಾಬಾ ತಿಮ್ಮಯ್ಯ ಹೇಳಿದ್ದಾರೆ.
ಈ ಬಗ್ಗೆ ನಾಪೆÇೀಕ್ಲು ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಹೋಂಸ್ಟೇಗಳಿಗೆ ಬರುವವರು ಹೊರ ಜಿಲ್ಲೆಯ, ಹೊರ ರಾಜ್ಯದ ಜನರಾಗಿರುತ್ತಾರೆ. ಇವರಿಂದ ಜಿಲ್ಲೆಯ ಜನತೆಗೆ ಸೋಂಕು ಹರಡುವ ಭೀತಿಯಿದೆ ಎಂದರು.
ಕೊಡಗಿನಲ್ಲಿ ಮಳೆಗಾಲದಲ್ಲಿ ಉಷ್ಣಾಂಶ ಕಡಿಮೆಯಿರುವ ಹಿನೆÀ್ನಲೆಯಲ್ಲಿ ಕೊರೊನಾ ವೈರಸ್ ಹೆಚ್ಚಾಗಿ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಟ್ಟಗುಡ್ಡಗಳಲ್ಲಿರುವ ಹೋಂಸ್ಟೇಗಳಲ್ಲಿ ವಾಸಿಸುವ ಅತಿಥಿಗಳಿಗೆ ಜ್ವರ, ಮತ್ತಿತರ ಸಮಸ್ಯೆಗಳು ಉಂಟಾದರೆ ಅವರನ್ನು ಆಸ್ಪತ್ರೆಗೆ ಸಾಗಿಸಲು ಕೂಡ ಮಳೆಗಾಲದಲ್ಲಿ ರಸ್ತೆ ಸಂಪರ್ಕವಿರುವದಿಲ್ಲ. ಆದುದರಿಂದ ಡಿಸೆಂಬರ್ ತಿಂಗಳವರೆಗೆ ಕೊಡಗಿನ ಎಲ್ಲಾ ಹೋಂಸ್ಟೇಗಳನ್ನು ಮುಚ್ಚಲು ಸರಕಾರ ಆದೇಶ ನೀಡಬೇಕು. ಸಾಂಕೇತಿಕವಾಗಿ ನಾವು ಸರಕಾರಕ್ಕೆ ಮನವಿ ಮಾಡುತ್ತಿದ್ದೇವೆ. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದರು.