ಗೋಣಿಕೊಪ್ಪ ವರದಿ, ಜೂನ್ 7: ಹಲಸು ಹಣ್ಣು ಅರಸಿ ತೋಟಕ್ಕೆ ತೆರಳಿದ್ದ ಗೂಳಿಯೊಂದು ಹುಲಿ ದಾಳಿಗೆ ಬಲಿಯಾಗಿರುವ ಘಟನೆ ವೀರಾಜಪೇಟೆ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.ಕಾಫಿ ಬೆಳೆಗಾರ ಪಟ್ಟಡ ಬೋಪಯ್ಯ ಅವರಿಗೆ ಸೇರಿದ ಗೂಳಿ ಎರಡೂವರೆ ವರ್ಷವಾಗಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಗೂಳಿಯನ್ನು ಬೆಳಗ್ಗೆ ಮೇಯಲು ಬಿಡಲಾಗಿತ್ತು. ಹಲಸು ಹಣ್ಣು ತಿನ್ನುವ ಆಸೆಯಲ್ಲಿ ತೋಟಕ್ಕೆ ಹೋಗಿ ಸೇರಿಕೊಂಡಿತ್ತು. ಈ ಸಂದರ್ಭ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಒಂದು ಕಾಲಿನ ಭಾಗವನ್ನು ತಿಂದು ಹುಲಿ ಮರೆಯಾಗಿದೆ. ಸ್ಥಳಕ್ಕೆ ಕಲ್ಲಳ್ಳ ಅರಣ್ಯ ವಲಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲಿ ದಾಳಿಗೆ ಗೂಳಿಯ ಸಾವಿನಿಂದ ಸುಮಾರು 30 ಸಾವಿರ ನಷ್ಟವಾಗಿದೆ ಎಂದು ಮಾಲೀಕ ಪಟ್ಟಡ ಬೋಪಯ್ಯ ತಿಳಿಸಿದ್ದಾರೆ.