ಮಡಿಕೇರಿ, ಜೂ. 7: ಅಮ್ಮತ್ತಿ ಕಾವಾಡಿಯ ನೆಲ್ಲಮಕ್ಕಡ ಕುಟುಂಬಕ್ಕೆ ಸೇರಿದ ಐನ್‍ಮನೆಯ ಬಾವಿಗೆ ಯಾರೋ ವಿಷ ಬೆರೆಸಿದ್ದಾರೆ ಎಂಬ ಬಗ್ಗೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದ್ದು, ಆರೋಪಿಗಳು ಯಾರಿರಬಹುದು, ಕಾರಣ ಏನಿರಬಹುದು ಎಂಬ ಬಗ್ಗೆ ನಿಖರ ಮಾಹಿತಿ ಹೊರಬಿದ್ದಿಲ್ಲ. ಈ ಮನೆಯಲ್ಲಿ ಯಾರೂ ವಾಸ ಇಲ್ಲ ಎನ್ನಲಾಗಿದ್ದು, ಬಾವಿ ಪಕ್ಕ ಕ್ರಿಮಿನಾಶಕದಂತಹ ಬಾಟಲಿಗಳು ಪತ್ತೆಯಾಗಿದ್ದವು. ಈ ಕುರಿತು ರೇಣು ಸೋಮಯ್ಯ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸ್ ತನಿಖೆ ಒಂದೆಡೆಯಾದರೆ ಕುಟುಂಬಸ್ಥರು ಈ ಬಗ್ಗೆ ಸಭೆ ನಡೆಸಿದ್ದು ಸಿ.ಸಿ. ಟಿವಿ ಅಳವಡಿಸುವ ನಿರ್ಧಾರಕ್ಕೆ ಬಂದಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.