ಮಡಿಕೇರಿ, ಜೂ. 7: ಡಿಸೆಂಬರ್ ಅಂತ್ಯದವರೆಗೆ ಕೊಡಗಿನ ಹೋಂಸ್ಟೇಗಳನ್ನು ತೆರೆಯಲು ಅವಕಾಶ ನೀಡಬಾರದೆಂದು ದುರುದ್ದೇಶಪೂರಿತ ಹೇಳಿಕೆ ನೀಡಿರುವವವರು ಹೋಂಸ್ಟೇಗಳನ್ನೇ ನಂಬಿ ಬದುಕು ಸಾಗಿಸುತ್ತಿರುವ ಮಾಲೀಕರು ಹಾಗೂ ನೌಕರರಿಗೆ ಆಗುವ ಸಂಪೂರ್ಣ ನಷ್ಟವನ್ನು ಭರಿಸುವುದಾದರೆ ಹೋಂಸ್ಟೇಗಳನ್ನು ಮುಚ್ಚಲು ಸಿದ್ಧವೆಂದು ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ತಿರುಗೇಟು ನೀಡಿದೆ.ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಸೋಸಿಯೇಷನ್ನ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು ಹೋಂಸ್ಟೇಗಳನ್ನು ಅವಲಂಬಿಸಿ ಕೊಂಡು ಜೀವನ ಸಾಗಿಸುವುದು ಕೂಡ ಬದುಕಿನ ಒಂದು ಹಕ್ಕಾಗಿದ್ದು, ಇದನ್ನು ಕಸಿದುಕೊಳ್ಳುವುದಕ್ಕಾಗಿ ಪಿತೂರಿ ನಡೆಸಿದರೆ ಅಂತಹವರ ವಿರುದ್ಧ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಳೆದ ಎರಡೂವರೆ ತಿಂಗಳ ಲಾಕ್ಡೌನ್ನಿಂದಾಗಿ ಹೋಂಸ್ಟೇ ಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡು ವರ್ಷಗಳ ಅತಿವೃಷ್ಟಿ ಯಿಂದಲೂ ಸಾಕಷ್ಟು ನಷ್ಟವಾಗಿದೆ. ಹೋಂಸ್ಟೇಗಳನ್ನು ತೆರೆಯಲು ಸರ್ಕಾರವೇ ಅನುಮತಿ ನೀಡಿದ್ದು, ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಅತಿಥಿ ಸತ್ಕಾರವನ್ನು ಮಾಡಲಿದ್ದೇವೆ. ಕಷ್ಟ, ನಷ್ಟಗಳ ನಡುವೆ ಹೋಂಸ್ಟೇಗಳನ್ನು ಆರಂಭಿಸದೆ ಇದ್ದರೆ ಇವುಗಳನ್ನೇ ನಂಬಿರುವ ನೌಕರ ವರ್ಗದ ಕುಟುಂಬ ಬೀದಿಗೆ ಬರುತ್ತದೆ ಎಂದರು.
(ಮೊದಲ ಪುಟದಿಂದ) ದೊಡ್ಡ ದೊಡ್ಡ ರೆಸಾರ್ಟ್ಗಳ ಪರ ಮಾತನಾಡುವವರು ಮಧ್ಯಮ ವರ್ಗ ನಡೆಸುವ ಹೋಂಸ್ಟೇಗಳ ವಿರುದ್ಧ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಯಾವುದೋ ಲಾಭದ ದುರುದ್ದೇಶ ಅಡಗಿದೆ ಎನ್ನುವುದು ಸ್ಪಷ್ಟವಾಗುತ್ತದೆ ಮತ್ತು ದಿಢೀರ್ ಆಗಿ ನಾಯಕರಾಗಬೇಕೆನ್ನುವ ಕಾರಣಕ್ಕೆ ವಿತಂಡವಾದದಲ್ಲಿ ತೊಡಗಿರುವಂತೆ ಕಂಡು ಬರುತ್ತಿದೆ ಎಂದು ಅನಂತಶಯನ ಆರೋಪಿಸಿದರು.
ಕೊಡಗಿನ ಹೋಂಸ್ಟೇಗಳು ಸ್ಥಳೀಯ ಸಂಸ್ಕøತಿಯ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಕಲೆ, ಸಾಹಿತ್ಯ, ಸಾಂಸ್ಕøತಿಕ ಕಲಾ ಪ್ರಕಾರ, ಪ್ರಕೃತಿ, ಕೃಷಿ ಮತ್ತು ಆಹಾರ ಪದ್ಧತಿಯನ್ನು ಪರಿಚಯಿಸುತ್ತಿವೆ. ಹೋಂಸ್ಟೇ ಪರಿಕಲ್ಪನೆ ಮಾಲೀಕನ ದುಡಿಮೆಯ ಬೆವರ ಹನಿಯಿಂದ ಸಾಕಾರಗೊಳ್ಳುತ್ತಿದೆಯೇ ಹೊರತು ಸರ್ಕಾರದಿಂದ ಯಾವುದೇ ನೆರವುಗಳು ದೊರೆಯುತ್ತಿಲ್ಲ. ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ, ಚರಂಡಿಗಳು ನಿರ್ಮಾಣಗೊಳ್ಳುತ್ತವೆ. ಅಲ್ಲದೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಲಾಗುತ್ತದೆ. ಇದರ ಲಾಭವನ್ನು ಎಲ್ಲರೂ ಪಡೆಯುತ್ತಾರೆ, ಆದರೆ ಪ್ರವಾಸಿಗರಿಗೆ ಆತಿಥ್ಯ ನೀಡಿದ ಹೋಂಸ್ಟೇ ಮಾಲೀಕರಿಗೆ ಯಾವುದೇ ಲಾಭವಿಲ್ಲವೆಂದು ಅವರು ಪ್ರತಿಪಾದಿಸಿ ದರು. ನಾವು ಸರ್ಕಾರಕ್ಕೆ ನ್ಯಾಯಯುತವಾಗಿ ತೆರಿಗೆ ಪಾವತಿಸುತ್ತಿದ್ದೇವೆ, ಆದರೆ ಹೇಳಿಕೆಗಳನ್ನು ನೀಡುವವರು ತೆರಿಗೆ ಪಾವತಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಹೋಂಸ್ಟೇಗಳಿಗಿಂತ ರೆಸಾರ್ಟ್ ಮತ್ತು ಲಾಡ್ಜ್ಗಳಲ್ಲಿ ಆರೋಗ್ಯ ವರ್ಧಕ ವ್ಯವಸ್ಥೆಗಳಿಗೆ ವೆಚ್ಚ ಹೆಚ್ಚಾಗುತ್ತದೆ. ಹೋಂಸ್ಟೇಗಳಲ್ಲಿ 2 ರಿಂದ 5 ಕೋಣೆಗಳು ಮಾತ್ರ ಇರುವುದರಿಂದ ಕೋವಿಡ್ 19 ಸಂಬಂಧಿತ ಮುಂಜಾಗ್ರತಾ ಕ್ರಮಗಳಿಗೆ ಮತ್ತು ಪರೀಕ್ಷೆಗೆ ಹೆಚ್ಚಿನ ವೆಚ್ಚವಾಗುವುದಿಲ್ಲ. ಈಗಾಗಲೇ ಅಧಿಕೃತ ಹೋಂಸ್ಟೇಗಳಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ಸುರಕ್ಷಾ ವ್ಯವಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಆದರೆ ವಿನಾಕಾರಣ ಹೋಂಸ್ಟೇಗಳ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಜನರ ಹಾದಿ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಇದೇ ಕಾರಣಕ್ಕೆ ಮುಂದೊಂದು ದಿನ ಬಂದ ಅತಿಥಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದರೆ ಹೇಳಿಕೆ ನೀಡಿದವರೇ ಹೊಣೆ ಹೊರಬೇಕಾ ಗುತ್ತದೆ ಎಂದು ಅನಂತಶಯನ ಎಚ್ಚರಿಕೆ ನೀಡಿದರು. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೊಡಗಿನ ಪ್ರವಾಸೋದ್ಯಮ ಮತ್ತು ಹೋಂಸ್ಟೇಗಳ ಕಾರ್ಯ ಚಟುವಟಿಕೆ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾ.8 ರಂದು (ಇಂದು) ಸಭೆ ನಡೆಯಲಿದೆ. ಈ ಸಭೆಯಲ್ಲಿ ಜಿಲ್ಲಾಡಳಿತ ಸೂಚಿಸುವ ಎಲ್ಲಾ ಮಾರ್ಗಸೂಚಿಗಳನ್ನು ಹೋಂಸ್ಟೇ ಮಾಲೀಕರು ಪಾಲಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಕೊಡಗನ್ನು ಕೈಬಿಡಲಾಗಿದೆ
ಲಾಕ್ಡೌನ್ ಸಡಿಲಿಕೆಯ ನಂತರ ರಾಜ್ಯದ ಪ್ರವಾಸೋದ್ಯಮದ ಚೇತರಿಕೆಗೆ ಅಗತ್ಯ ರೂಪುರೇಷÀಗಳನ್ನು ಸಿದ್ಧಪಡಿಸುವ ಸಂದರ್ಭ ಸರ್ಕಾರ ಸುಮಾರು 14 ಜಿಲ್ಲೆಗಳಿಗೆ ಆದ್ಯತೆ ನೀಡಿದೆ. ಪ್ರವಾಸಿತಾಣಗಳು ಇಲ್ಲದ ಪ್ರದೇಶಗಳನ್ನು ಕೂಡ ಸೇರ್ಪಡೆಗೊಳಿಸಲಾಗಿದೆ. ಆದರೆ ಜನಪ್ರಿಯ ಪ್ರವಾಸಿತಾಣಗಳ ಮೂಲಕ ವಿಶ್ವದ ಗಮನ ಸೆಳೆದಿರುವ ಕೊಡಗು ಜಿಲ್ಲೆಯನ್ನೇ ಕೈಬಿಡಲಾಗಿದೆ ಎಂದು ಅನಂತಶಯನ ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಜಿಲ್ಲೆಯನ್ನು ಸೇರಿಸಲು ಕೋರಿಕೊಳ್ಳಲಾಗಿದೆ ಎಂದರು.
ಪದಾಧಿಕಾರಿ ಅಂಬೆಕಲ್ಲು ನವೀನ್ ಕುಶಾಲಪ್ಪ ಮಾತನಾಡಿ ಅನಧಿಕೃತ ಹೋಂಸ್ಟೇಗಳ ವಿರುದ್ಧ ಕ್ರಮಕೈಗೊಳ್ಳಲು ಇದು ಸಕಾಲವಾಗಿದ್ದು, ಜಿಲ್ಲಾಡಳಿತ ತಕ್ಷಣ ಕಾರ್ಯೋನ್ಮುಖ ವಾಗಬೇಕೆಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಯಂತೆ ನಿಯಮಾನು ಸಾರ ಜಿಲ್ಲೆಯಲ್ಲಿ ಹೋಂಸ್ಟೇಗಳು ಕಾರ್ಯನಿರ್ವ ಹಿಸಲಿವೆ ಎಂದು ಸ್ಪಷ್ಟಪಡಿಸಿದರು.
ಮತ್ತೊಬ್ಬ ಪದಾಧಿಕಾರಿ ಮೋಂತಿಗಣೇಶ್ ಮಾತನಾಡಿ ಹೋಂಸ್ಟೇಗಳ ವಿರುದ್ಧ ಹೇಳಿಕೆಗಳನ್ನು ನೀಡುವವರು ಅನಧಿಕೃತ ಹೋಂಸ್ಟೇಗಳನ್ನು ಮೊದಲು ಮುಚ್ಚಿಸಲಿ ಎಂದು ಸವಾಲು ಹಾಕಿದರು. ಟ್ಯಾಕ್ಸಿ, ಆಟೋರಿಕ್ಷಾ ಚಾಲಕರು, ವ್ಯಾಪಾರಿಗಳು ಇನ್ನೂ ವಿವಿಧ ಕ್ಷೇತ್ರಗಳ ಮಂದಿ ಪ್ರವಾಸಿಗರನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಪ್ರವಾಸಿಗರು ಹೋಂಸ್ಟೇಗಳಲ್ಲಿ ತಂಗಬಾರದು ಎಂದಾದರೆ ಹೋಂಸ್ಟೇಗಳು ಮಾತ್ರವಲ್ಲ ಇದನ್ನೇ ಅವಲಂಬಿಸಿರುವ ಎಲ್ಲಾ ಕ್ಷೇತ್ರಗಳ ಜನರು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾನೂನು ಸಲಹೆಗಾರ ಹಾಗೂ ವಕೀಲ ರತನ್ ತಮ್ಮಯ್ಯ ಅವರು ಪ್ರತ್ಯೇಕ ಹೇಳಿಕೆ ನೀಡಿ ಹೋಂಸ್ಟೇ ವ್ಯವಹಾರ ಆರಂಭಿಸುವಂತೆ ಸರಕಾರವೇ ಹೇಳಿರುವಾಗ ಅದನ್ನು ನಡೆಸದಂತೆ ಹೇಳುವುದು ಕಾನೂನಿಗೆ ವಿರುದ್ಧವಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸದಸ್ಯೆ ಶಶಿಮೊಣ್ಣಪ್ಪ ಹಾಜರಿದ್ದರು.