ಕೂಡಿಗೆ, ಜೂ. 5: ಕೊಡಗು ಜಿಲ್ಲಾ ಕೃಷಿ ಇಲಾಖೆಯ ವತಿಯಿಂದ ತಾಲೂಕುವಾರು ಮಣ್ಣು ಮಾದರಿ ಸಂಗ್ರಹಣೆ, ವಿಶ್ಲೇಷಣೆ, ಮಣ್ಣು ಆರೋಗ್ಯ ಚೀಟಿ ವಿತರಣೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ 54345 ಮಣ್ಣು ಆರೋಗ್ಯ ಚೀಟಿಯನ್ನು ರೈತರಿಗೆ ವಿತರಣೆ ಮಾಡಲಾಗಿದೆ.

ಕೂಡಿಗೆಯಲ್ಲಿರುವ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ತಾಲೂಕುವಾರು ರೈತರ ಜಮೀನಿನ ಮಣ್ಣನ್ನು ಪರೀಕ್ಷೆ ಮಾಡಿ ಕೊಡಲಾಗಿದೆ ಮಡಿಕೇರಿ, ಸೋಮವಾರಪೇಟೆ ವೀರಾಜಪೇಟೆ ತಾಲೂಕಿನ ವ್ಯಾಪ್ತಿಯ ರೈತರು ನೀಡಿದ ತಮ್ಮ ಕೃಷಿ ಭೂಮಿಯ ಮಣ್ಣುಗಳನ್ನು ಪರೀಕ್ಷಿಸಿ, ರೈತರಿಗೆ ಮಣ್ಣು ಆರೋಗ್ಯ ಚೀಟಿಯನ್ನು ವಿತರಿಸಲಾಗಿದೆ. ಫಲವತ್ತತೆ ಹೆಚ್ಚಿಸಲು ಬಳಸಬಹುದಾದ ಸಾವಯವ ಗೊಬ್ಬರ, ಪೌಷ್ಟಿಕಾಂಶಕ್ಕೆ ರಂಜಕ ಮತ್ತು ಸುಣ್ಣ ಬಳಕೆಯ ಬಗ್ಗೆ ಹಾಗೂ ಆಯಾ ಮಣ್ಣಿನಲ್ಲಿ ಬಳಸಬಹುದಾದ ಬೆಳೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಅದರಂತೆ ಮಡಿಕೇರಿ ತಾಲೂಕಿನಲ್ಲಿ 6071 ಮಣ್ಣು ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, ಕಳೆದ ಬಾರಿ ಉಳಿಕೆಯಾಗಿದ ಹಾಗೂ ಪ್ರಸ್ತುತ ಈ ಸಾಲಿನ ಮೇ ಅಂತ್ಯದವರೆಗೆ 123790 ಮಣ್ಣಿನ ಆರೋಗ್ಯ ಚೀಟಿಗಳನ್ನು ವಿತರಣೆ ಮಾಡಲಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ 25953 ಮಣ್ಣು ಮಾದರಿಯನ್ನು ರೈತರು ಪರೀಕ್ಷಾ ಕೇಂದ್ರಕ್ಕೆ ನೀಡಿದ್ದು, ಕಳೆದ ಬಾರಿ ಉಳಿಕೆ ಸೇರಿದಂತೆ 26313 ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲಾಗಿದೆ.

ವೀರಾಜಪೇಟೆ ತಾಲೂಕಿನಲ್ಲಿ 20.344 ಮಣ್ಣು ಮಾದರಿ ಸಂಗ್ರಹವಾಗಿದ್ದು, ಮಣ್ಣನ್ನು ಪರೀಕ್ಷಿಸಿ ಒಟ್ಟು 20.242 ಮಣ್ಣು ಆರೋಗ್ಯ ಚೀಟಿಗಳನ್ನು ವಿತರಣೆ ಮಾಡಲಾಗಿದೆ ಎಂದು ಕೂಡಿಗೆ ಮಣ್ಣು ಆರೋಗ್ಯ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ನಾಲ್ಕು ಹೋಬಳಿವಾರು ಗ್ರಾಮಗಳನ್ನು ಆಯ್ಕೆ ಮಾಡಿ ಆ ಗ್ರಾಮಗಳಲ್ಲಿ ಮಣ್ಣು ಪರೀಕ್ಷೆಯ ಬಗ್ಗೆ ಪ್ರಾತ್ಯಕ್ಷತೆ, ವಿಶ್ಲೇಷಣೆ ಮತ್ತು ಆರೋಗ್ಯ ಚೀಟಿಯ ಮಹತ್ವ, ಸಾವಯವ ಗೊಬ್ಬರ ಬಳಕೆ ಬೆಳೆಗಳಾದ ಕಾಫಿ ಏಲಕ್ಕಿ ಕಿತ್ತಳೆ, ಭತ್ತ, ಜೋಳ, ವಾಣಿಜ್ಯ ಬೆಳೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಆಯಾ ಹೋಬಳಿ ವ್ಯಾಪ್ತಿಯಲ್ಲಿ ಆತ್ಮ ಯೋಜನೆ ಅಡಿಯಲ್ಲಿ, ಕೃಷಿ ಇಲಾಖೆಯ ವತಿಯಿಂದ ಮಣ್ಣು ಸಂಗ್ರಹಿಸಲು ಅನೇಕ ಪ್ರತಿನಿಧಿಗಳನ್ನು ನೇಮಕ ಮಾಡಲಾಗಿ ಅವರುಗಳಿಗೆ ರೈತರು ತಮ್ಮ ಜಮೀನಿನ ಮಣ್ಣು ನೀಡುವ ಮೂಲಕ ಮಣ್ಣಿನ ಮಾಹಿತಿಯನ್ನು ಪಡೆಯಬಹುದು ಎಂದಿದ್ದಾರೆ.

ಈಗಾಗಲೇ ಕೂಡಿಗೆಯಲ್ಲಿರುವ ಮಣ್ಣು ಆರೋಗ್ಯ ಕೇಂದ್ರದಲ್ಲಿ ಉತ್ತಮವಾದ ಪ್ರಯೋಗಾಲ ಯವಿದ್ದು, ಸಕಾಲದಲ್ಲಿ ಮಣ್ಣು ಪರೀಕ್ಷಿಸುವ ಸೌಲಭ್ಯವಿರುವುದರಿಂದ ರೈತರು ತಮ್ಮ ಜಮೀನಿಗಳ ಮಣ್ಣನ್ನು ತಂದು ಪರೀಕ್ಷಿಸಿಕೊಂಡು ತಮ್ಮ ಕೃಷಿ ಭೂಮಿಗಳ ಫಲವತ್ತೆಯ ಬಗ್ಗೆ ತಿಳಿದುಕೊಂಡು ಉತ್ತಮ ಬೆಳೆ ಬೆಳೆಯಬೇಕು ಎಂದು ಡಾ. ರಾಜಶೇಖರ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಮಣ್ಣು ವಿಶ್ಲೇಷಕರಾದ ಅಂಕಿತಾ, ತಾಂತ್ರಿಕ ಸಿಬ್ಬಂದಿಗಳಾದ ನಂದೀಶ್ ಇಂದುಮಣಿ ಶರ್ಮಿಳಾ ಇದ್ದರು.

- ಕೆ.ಕೆ. ನಾಗರಾಜಶೆಟ್ಟಿ