ಋಷಿಗಳು, ದೇವತೆಗಳು, ಪಿತೃಗಳಿಂದ ಕಾವೇರಿಗೆ ಗೌರವಾರ್ಪಣೆ

ಗಂಗೆಯು ಯಮುನೆಯೊಂದಿಗೆ ಮಾತು ಮುಂದುವರಿಸುತ್ತಾಳೆ:-ಮಂಗಳಕಾರಿಣಿಯಾದ ಯಮುನೆಯೇ, ನಿನಗೆ ಕಾವೇರಿಯ ಚರಿತ್ರೆಯನ್ನು ಸಂಕ್ಷಿಪ್ತವಾಗಿ ತಿಳಿಸುವೆನು.

ಮೈತ್ರಾವರುಣಿ ಭಾರ್ಯಾಸಾ ಲೋಪಾಮುದ್ರೇತಿ ವಿಶ್ರುತಾ

ಸಹ್ಯಾದ್ರೌ ಬ್ರಹ್ಮಣಾ ದತ್ತಾ ಕವೇರಾಯ ಮಹಾತ್ಮನೇ

ತ್ರಿವೇಣೀ ತಪಸಾ ಶಂಭುಂ ಶೋಷಯಿತ್ವಾ ಸರಿದ್ವರಾ

ತಸ್ಮಾಲ್ಲಬ್ಧವರಾ ಪುಣ್ಯಾ ಪುಣ್ಯ ತೀರ್ಥಾ ಭವತ್ ಕ್ಷಿತೌ

ಸಪ್ತಕುಂಡಾಘಘ್ನಾನಿ ನೃಣಾಂ ಪುಣ್ಯ ಪ್ರದಾನಿ ವೈ

ಬ್ರಹ್ಮಕುಂಡಮಿತಿಖ್ಯಾತಾ ಬ್ರಹ್ಮಣಾ ನಿರ್ಮಿತಾ ಪುರಾ

ತುಲಾಯಾಂತು ರವೌ ಪ್ರಾಪ್ತೇ ತತ್ರ ಯಸ್ಸ್ನಾತಿ ಮಾನವಃ

ಸ ಯಾತಿ ಬ್ರಹ್ಮಣಃ ಸ್ಥಾನಂ ಸದ್ಯಸ್ಸಂಕ್ಷೀಣ ಪಾತಕಃ ಪೂರ್ವದಲ್ಲಿ ಬ್ರಹ್ಮನು ಲೋಪಾಮುದ್ರೆಯನ್ನು ಸರ್ವರಿಗೂ ಉಪಕಾರ ಮಾಡು ವಂತೆ ಆಕೆಗೆ ನಿರ್ದೇಶನವಿತ್ತು ಮಹಾತ್ಮನಾದ ಕವೇರನಿಗೆ ನೀಡಿದನು. ಅವಳು ಅತ್ಯಂತ ನಿಷ್ಠೆಯಿಂದ ಮಹಾ ತಪಸ್ಸು ಮಾಡಿ ಪರಮೇಶ್ವರ ನಿಂದಲೂ ವರವನ್ನು ಪಡೆದು ಭೂಮಿಯಲ್ಲಿ ಪಾವನ ತೀರ್ಥ ಸ್ವರೂಪಿಣಿಯಾದಳು. ಅಗಸ್ತ್ಯ ಪತ್ನಿಯಾದ ಕಾವೇರಿಯು ನದೀಶ್ರೇಷ್ಠಳಾಗಿದ್ದಾಳೆ. ಪೂರ್ವಕಾಲದಲ್ಲಿ ಬ್ರಹ್ಮದೇವನು ನಿರ್ಮಾಣ ಮಾಡಿದ ಕುಂಡವೇ ಬ್ರಹ್ಮ ಕುಂಡವೆಂದು ಖ್ಯಾತಿವೆತ್ತಿದೆ. ಆ ಕುಂಡದ ತೀರ್ಥವನ್ನು ಸೂರ್ಯನು ತುಲಾರಾಶಿಯನ್ನು ಪ್ರವೇಶಿಸುವ ಪುಣ್ಯ ಮುಹೂರ್ತದಲ್ಲಿ ಪ್ರೋಕ್ಷಿಸಿಕೊಂಡು ಸ್ನಾನ ಮಾಡಿದವರು ಸತ್ಯಲೋಕವನ್ನು ಹೊಂದುವರು. ಅನಂತರ ಉಂಟಾದ ಕುಂಡಗಳಲ್ಲಿ ಸ್ನಾನ ಮಾಡುವವರು ರಾಜಸೂಯ ಮತ್ತು ಅಶ್ವಮೇಧ ಯಾಗಗಳ ಫಲವನ್ನು ಹೊಂದುವರು. ಯಾವ ಮಾನವನು ಸ್ವಲ್ಪವಾಗಿ ಬೆಚ್ಚಗಿರುವ ನಾಗತೀರ್ಥವನ್ನು ಮುಟ್ಟುವನೋ ಆತನ ಹೊರಗಿನ ಮತ್ತು ಒಳಗಿನ ವಿಷವೆಲ್ಲವೂ ಕ್ಷಣ ಮಾತ್ರದಲ್ಲಿ ನಾಶವಾಗುವವು.

ಕಾವೇರ್ಯಾ ಕನಕಾಯಾಶ್ಚ ಸಂಗಮಂ ಲೋಕವಿಶ್ರುತಂ

ಯಸ್ಸ್ನಾತ್ಯನುದಿನಂ ಭಕ್ತ್ಯಾರುದ್ರಲೋಕಂ ಸಗಚ್ಛತಿ

ತಯೋರುತ್ತರತಃ ಕೂಲೇ ತಕ್ಷಕಾಖ್ಯಂ ಮಹಾವನಂ

ತಕ್ಷಕೇನಾತ್ರ ನಿಕ್ಷಿಪ್ತಂ ಸ್ವಕಿರೀಟಂ ಸ್ವಕುಂಡಲಂ

ಕಾವೇರ್ಯಾ ದಕ್ಷಿಣೇ ಕೂಲೇ ಪ್ರೇತಾರಣ್ಯ ಮಘಕ್ಷಯಂ

ಪಿತರಸ್ತತ್ರ ತಿಷ್ಠಂತಿ ಸರ್ವೇಷಾಮುದಕೇಪ್ಸವಃ

ನ ಪ್ರಯಚ್ಛಂತಿ ಯೇ ತೇಷಾಂ ತಿಲೋದಕಮಜಾನತಃ

ತೇ ಯಾಂತಿ ರೌರವಂ ಘೋರಂ ಪಿತೃಭಿಸ್ಸಹ ಪಾಪಿನಃ

ಕಾವೇರ್ಯಾ ದಕ್ಷಿಣೇ ಕೂಲೇ ಸಪ್ತಲಿಂಗೇಶ್ವರೋ ಹರಃ

ಪುರಾತನಾ ನಾಂ ಕ್ಷೇತ್ರಾಣಾಂ ಆದಿಕ್ಷೇತ್ರಮಿದಂ ಸ್ಮøತಂ

ಜಗತ್ತಿನಲ್ಲಿ ಕಾವೇರಿ-ಕನಕಾ ಸಂಗಮವು ಪ್ರಸಿದ್ಧವಾಗಿರುತ್ತದೆ. ಅದರಲ್ಲಿ ಸ್ನಾನ ಮಾಡುವದರಿಂದ ಶಿವಲೋಕವು ಪ್ರಾಪ್ತಿಯಾಗುವದು. ತಕ್ಷಕ ಎಂಬ ಮಹಾವನವು ಕಾವೇರಿಯ ಉತ್ತರದ ದಡದಲ್ಲಿ ಇರುವದು. ಅಲ್ಲಿ ತಕ್ಷಕನು ತನ್ನ ಕಿರೀಟವನ್ನೂ, ಕುಂಡಲವನ್ನೂ ಇಟ್ಟಿರುವನು. ಕಾವೇರಿಯ ದಕ್ಷಿಣ ದಂಡೆಯಲ್ಲಿ ಪಾಪನಾಶಕವಾದ ಪ್ರೇತಾರಣ್ಯವು ಇರುವದು. ಅಲ್ಲಿ ಸರ್ವರ ಪಿತೃಗಳೂ ಜಲಾಪೇಕ್ಷಿಗಳಾಗಿ ನಿಂತಿರುವರು. ಅದರ ಅರಿವಿಲ್ಲದೆ ಆ ಪಿತೃಗಳಿಗೆ ಅಲ್ಲಿ ತಿಲೋದಕವನ್ನು ಕೊಡದವರು ಪಾಪಿಗಳಾಗಿ ಪಿತೃಗಳೊಡನೆ ಭಯಂಕರವಾದ ರೌರವ ನರಕವನ್ನು ಹೊಂದುವರು. ಕಾವೇರಿಯ ದಕ್ಷಿಣ ತೀರದಲ್ಲಿ ಸಪ್ತ ಲಿಂಗೇಶ್ವರನೆಂಬ ಈಶ್ವರನು ಇರುವನು. ಪ್ರ್ರಾಚೀನವಾದ ಪುಣ್ಯಕ್ಷೇತ್ರಗಳಲ್ಲಿ ಇದು ಒಂದನೆಯದೆಂದು ಪ್ರಸಿದ್ಧವಾಗಿದೆ.

ಪ್ರದಕ್ಷಿಣಮಸೌ ಯಾತಿ ಕಿಂಚಿದ್ದಕ್ಷಿಣವಾಹಿನೀ

ಪುನಃ ಪಶ್ಚಿಮದಿಗ್ಯಾತಾ ಯಾವದ್ಧನುಃ ಶತತ್ರಯಂ

ತತ್ರ ಪಶ್ಚಿಮವಾಹಿನ್ಯಾಂ ಯಸ್ಸ್ನಾನಂ ಕುರುತೇ ನರಃ ಸಯಾತಿ ರುದ್ರ ಸಾಯುಜ್ಯಂ ರುದ್ರ ಲೋಕಮಥಾಪಿವಾ ತಸ್ಮಾತ್ಕಿಂಚಿತ್ ಪುನಸ್ಸಾಧ್ವೀ ಕಾವೇರೀಂ ದಕ್ಷಿಣಾಂ ದಿಶಂ ಗತ್ವಾ ಪ್ರಾಚೀ ದಿಶಂ ಯಾತಾ ಕೌಮಾರ್ಯಾ ಸಹ ಪಾವನೀ

ದಕ್ಷಿಣಕ್ಕೆ ಹರಿ ಯುತ್ತಾ ಸಾಗಿದಂತೆ ಕಾವೇರಿಯು ಪ್ರದಕ್ಷಿಣ ವಾಗಿ ಸ್ವಲ್ಪ ದೂರ ಹೋಗುವಳು. ಪುನಃ ಮುನ್ನೂರು ಬಿಲ್ಲುಗಳ (ಹಿಂದಿನ ಕಾಲದಲ್ಲಿ ಬಿಲ್ಲುಗಳ ಅಳತೆ ಯಲ್ಲಿನ ಲೆಕ್ಕಾಚಾರ) ಪಶ್ಚಿಮವಾಹಿನಿಯಾಗಿ ಹರಿಯುವಳು. (ಅಗತ್ಯ ವಾದ ಕಡೆ ಅಗತ್ಯ ದಿಕ್ಕುಗಳಲ್ಲಿ ಹರಿಯುವ ಕಾವೇರಿಯ ಚಲನಾ ಶಕ್ತಿ ಅತ್ಯದ್ಭುತ) ಪಶ್ಚಿಮ ವಾಹಿನಿಯಲ್ಲಿ ಸ್ನಾನ ಮಾಡಿದವನು ಶಿವ ಸಾಯುಜ್ಯವನ್ನಾಗಲೀ, ಶಿವ ಲೋಕವನ್ನಾಗಲೀ ಪಡೆಯುವನು.(ಪಶ್ಚಿಮ ವಾಹಿನಿಯಲ್ಲಿನ ಸ್ನಾನ ಮುಕ್ತಿದಾಯಕ ಎಂದು ಹೇಳಲ್ಪಟ್ಟಿದೆ). ಕಾವೇರಿಯು ಪಶ್ಚಿಮ ವಾಹಿನಿಯಾಗಿ ಸಾಗಿದ ನಂತರ ಮುಂದೆ ಸ್ವಲ್ಪ ದೂರ ದಕ್ಷಿಣಕ್ಕೆ ಹರಿದು ಕೌಮಾರಿಯೊಡನೆ ಪೂರ್ವದಿಕ್ಕಿಗೆ ಪ್ರವಹಿಸುವಳು. ನೂರು ಧನುಸ್ಸುಗಳ ದೂರದ ಬಳಿಕ ಕಲ್ಪಕಾಚಲದಿಂದ ಹೊರಟ ಶ್ಯೆವಾಲುಕಿಯನ್ನು ಕೂಡಿ ಶೋಭನೆಯಾದ ಕಾವೇರಿಯು ಉತ್ತರ ದಿಕ್ಕಿಗೆ ಹರಿವಳು.

ಬ್ರಹ್ಮಣಾರಾಧಿತಂ ವಿಷ್ಣುಂ ಪ್ರದಕ್ಷಿಣಮಥಾಭವತ್

ವೈಣವ್ಯಾ ಸಹ ಕಾವೇರೀ ಪ್ರ್ರಾಚ್ಯಾಗ್ನೇಯಾಂ ದಿಶಂ ಪುನಃ ಬಳಿಕ ಬ್ರಹ್ಮನಿಂದ ಆರಾಧಿತನಾದ ಶ್ರೀ ಹರಿಗೆ ಪ್ರದಕ್ಷಿಣವಾಗಿ ಹರಿದು ವೈಣವಿಯನ್ನು ಕೂಡಿಕೊಂಡು ಕಾವೇರಿಯು ಆಗ್ನೇಯ ದಿಕ್ಕಿಗೆ ಹೊರಟಳು. ಕಾವೇರಿಯ ಈ ಪೂರ್ವ, ಉತ್ತರ, ದಕ್ಷಿಣ ಹರಿಯು ವಿಕೆಯ ತೀರ್ಥದಲ್ಲಿ ಸ್ನಾನ ಮಾಡುವ ಮಾನವರ ಪಿತೃಗಳು 15 ವರ್ಷಗಳವರೆಗೆ ಸಂತೃಪ್ತರಾಗುವರು.

ಕಾವೇರ್ಯಾ ದಕ್ಷಿಣೇ ಕೂಲೇ ಬ್ರಹ್ಮಣಾರಾಧಿತಂ ಹರಿಂ

ಯಃ ಪಶ್ಯತಿ ಸ ಪೂತಾತ್ಮಾ ಬ್ರಹ್ಮಲೋಕಂ ಸ ಗಚ್ಛತಿ

ಕಾವೇರಿಯ ದಕ್ಷಿಣ ದಂಡೆಯಲ್ಲಿ ಬ್ರಹ್ಮನಿಂದ ಪೂಜಿಸಲ್ಪಟ್ಟ ಶ್ರೀ ಮಹಾವಿಷ್ಣುವಿನ ದರ್ಶನವನ್ನು ಮಾಡಿದವನು ಪಾಪ ವಿಮುಕ್ತನಾಗಿ ಬ್ರಹ್ಮಲೋಕವನ್ನು ಸೇರುತ್ತಾನೆ. ಅದೇ ಸ್ಥಳದಲ್ಲಿ ನೆಲೆ ನಿಂತಿರುವ ಕಾಂಚೀ ಎಂಬ ನದಿಯನ್ನು ಒಡಗೂಡಿಕೊಂಡು ಮುನ್ಸಾಗಿದ ಕಾವೇರಿಯು ಪೂಜನೀಯರಾದ ವೈರೋಚನೀ ಹಾಗೂ ತಾಮ್ರಚೂಡಾ ನದಿಗಳ ಜೊತೆ ಸೇರಿ ಮುಂದಕ್ಕೆ ಸಾಗುತ್ತಾಳೆ.

ತ್ರಿಷ್ವೇತಾಸಾಂ ಸಂಗಮೇಷು ಯಃ ಕರೋತ್ಯಘಮರ್ಷಣಂ

ತಸ್ಯ ಪಾಪಾನಿ ನಶ್ಯಂತಿ ಹ್ಯಾಮಭಾಂಡಮಿವಾಂಭಸಿ

ಮೂರು ನದಿಗಳ ( ಕಾಂಚೀ, ವೈರೋಚನೀ ಹಾಗೂ ತಾಮ್ರಚೂಡಾ) ಸಂಗಮದಲ್ಲಿ ಯಾರು ಅಘಮರ್ಷಣ ಮಂತ್ರ ದಿಂದ ಜಪ ಮಾಡು ತ್ತಾರೋ ಅಂತಹವರ ಪಾಪಗಳು ಹಸಿ ಮಡಕೆಯು ನೀರಿನಲ್ಲಿ ಕರಗಿ ಹೋಗುವಂತೆ ನಶಿಸಿ ಹೋಗುವವು. (ತ್ರಿವೇಣೀ ಸಂಗಮ ಗಳಲ್ಲಿ ಅಘಮರ್ಷಣ ಮಂತ್ರ ಪಠನ ಸರ್ವ ಶ್ರೇಷ್ಠ ವಾದುದು; ಸತ್ಫಲದಾಯಕ ವಾದುದು. ಈ ಮಂತ್ರ ದಲ್ಲಿ ಮುಖ್ಯವಾಗಿ ಜಲಾಧಿಪತಿಯಾದ ವರುಣನ ಸ್ತುತಿಯಿದೆ. ಉದಾಃ “ ಹಿರಣ್ಯ ಶೃಂಗಂ ವರುಣಂ ಪ್ರಪದ್ಯೇ ತೀರ್ಥಂ ಮೇದೇಹಿ ಯಾಚಿತಃ; ನಮೋ ವರುಣಾಯ ನಮೋ ವಾರುಣ್ಯೈ ನಮೋದ್ಭ್ಯಃ” ಈ ಮೂಲಕ ವರುಣನಲ್ಲಿ ನನಗೆ ತೀರ್ಥವನ್ನು ದಯಪಾಲಿಸು ಎಂದು ಬೇಡಿಕೊಳ್ಳುವ, ನಮಸ್ಕರಿಸುವ ಅಮೂಲ್ಯ ಅರ್ಥವಿದೆ. ಈ ಮಂತ್ರ ಪಠನ ಸಹಿತ ಸ್ನಾನವು ಶ್ರೇಷ್ಠವೆನಿಸಿದೆ. ಭಾಗಮಂಡಲದ ತ್ರಿವೇಣೀ ಸಂಗಮದಲ್ಲಿಯೂ ಈ ಮಂತ್ರ ಪಠಿಸಿ ಸ್ನಾನ ಮಾಡಿದರೆ ಶುಭಫಲ ದೊರಕುತ್ತದೆ.)

ಹರಿಶ್ಚಂದ್ರ ಎಂಬ ಲೋಕಪೂಜ್ಯವಾದ ಕ್ಷೇತ್ರವು ಮಾನವನಿಗೆ ಮೋಕ್ಷಪ್ರದವಾಗಿರುವದು. ಅಲ್ಲಿ ಪಾಪ ನಾಶಕವಾದ 50 ಕ್ಷೇತ್ರಗಳಿವೆ. ಅಲ್ಲದೆ, ಈ ಕ್ಷೇತ್ರದಲ್ಲಿ 15 ದಿನ ಅಥವ ಒಂದು ದಿನ ಸ್ನಾನ, ಹೋಮ, ಪೂಜೆ ಮೊದಲಾವುಗಳಲ್ಲಿ ಪಾಲ್ಗೊಂಡರೆ ಅನಂತ ಫಲ ಲಭಿಸುತ್ತದೆ.

ಕಾವೇರ್ಯಾ ದಕ್ಷಿಣೇ ಕೂಲೇ ಶೈವಂ ಮಾಹೇಶ್ವರಂ ಶುಭಂ

ವಲಂಬುರೀತಿ ವಿಖ್ಯಾತಾ ಚಕ್ರಾಕಾರಾನಘಾ ಯಯೌ

ಪುಣ್ಯಪ್ರದಳಾದ ಕಾವೇರಿಯು ಚಕ್ರಾಕಾರವಾಗಿ ಚಲಿಸಿರುವ ಸ್ಥಳದಲ್ಲಿ ವಲಂಬುರಿ ಎಂಬ ಪ್ರಸಿದ್ಧವಾದ ಶಿವಕ್ಷೇತ್ರವೊಂದು ಕಾವೇರಿಯ ದಕ್ಷಿಣ ದಂಡೆಯಲ್ಲಿದೆ. ಪಾಪ ನಾಶಕವಾದ ಈ ವಲಂಬುರಿ ಕ್ಷೇತ್ರದಲ್ಲಿ ಮೂರು ದಿನ ಸ್ನಾನ ಮಾಡಿದರೆ ಅಂತಹವರು ಈ ಅಲ್ಪ ಕರ್ಮ ಫಲದಿಂದಲೇ ದೇವೇಶ್ವರನಾದ ಶಿವನನ್ನು ಸೇರುವರು.

ಲಾವಣ್ಯ ಕುಂಡಂ ಕಾವೇರ್ಯಾಮಗ್ನಿನಾ ಪೂಜಿತಂ ಪುರಾ

ದಕ್ಷಿಣೀಕೃತ್ಯ ತಲ್ಲಿಂಗಂ ಕ್ಷೀರಿಣ್ಯಾ ಸೇವಿತಂ ಯಯೌ

ಕುಬೇರಾಶ್ರಮಮಾಸಾದ್ಯಾ ದುರ್ಗಾಂ ಹೈಮವತೀಂ ಪುನಃ

ದಕ್ಷಿಣಸ್ಥಾಮಥಾಲೋಕ್ಯ ಪಶ್ಚಾದುತ್ತರತಃಸ್ಥಿತಾಃ

ಅಗ್ನಿಯು ಪೂರ್ವ ಕಾಲದಲ್ಲಿ ಪೂಜಿಸಿದ ಲಾವಣ್ಯಕುಂಡವೆಂಬ ಲಿಂಗವು ಕಾವೇರಿಯಲ್ಲಿರುವದು. ಆ ಲಿಂಗವನ್ನು ಕಾವೇರಿಯು ಪ್ರದಕ್ಷಿಣೆ ಮಾಡಿ ಕ್ಷೀರಿಣಿಯಿಂದ ಸೇವಿತಳಾಗಿ ಮುಂದಕ್ಕೆ ಸಾಗುತ್ತಾಳೆ. ಮುಂದೆ ಕುಬೇರಾಶ್ರಮವನ್ನು ಕಾವೇರಿಯು ಸೇರಿ ದಕ್ಷಿಣದಲ್ಲಿ ಇರುವ ಪರ್ವತರಾಜನ ಪುತ್ರಿಯಾದ ಪಾರ್ವತಿಯನ್ನು ದರ್ಶಿಸುತ್ತಾ ಉತ್ತರಕ್ಕೆ ಪ್ರವಹಿಸಿದಳು. ಆ ಸಂದರ್ಭ ಅಲ್ಲಿ ಋಷಿಗಳೂ, ದೇವತೆಗಳೂ ಫಲದಾಯಕವಾದ ದರ್ಶನವುಳ್ಳ ಪಿತೃಗಳೂ ಕಾವೇರಿಯನ್ನು ಎದುರುಗೊಂಡು ಅಘ್ರ್ಯಪಾದ್ಯಾದಿಗಳಿಂದ ಅವಳನ್ನು ಪೂಜಿಸಿ ಗೌರವಿಸಿದರು. ನಿರ್ದೋಷವಾದ ಅವಯವಗಳಿಂದ ಒಪ್ಪುತ್ತಿರುವ ಕಾವೇರಿಯು ಅಲ್ಲ್ಲಿದ್ದ ಸಮಸ್ತ ದ್ವಿಜರನ್ನೂ ಗೌರವಿಸಿ ಮುಂದಕ್ಕೆ ಸಾಗಿದಳು.

ಕಾವೇರ್ಯಾಂ ಯೋ ನರೋ ನಿತ್ಯಂ ಕಲೌ ಸ್ನಾನಂ ಕರಿಷ್ಯತಿ

ಮನೋವಾಕ್ಕಾಯಜಂ ಪಾಪಂ ಸದ್ಯ ಏವ ವಿನಷ್ಯತಿ

ಕಲಿಯುಗದಲ್ಲಿ ಮಾನವನು ಪ್ರತಿನಿತ್ಯವೂ ಕಾವೇರಿಯಲ್ಲಿ ಸ್ನಾನ ಮಾಡುವದರಿಂದ ಮನಸ್ಸು, ಮಾತು, ಕಾರ್ಯಗಳಿಂದ ಪಡೆದುಕೊಂಡು ಬಂದ ಪಾಪವನ್ನು ಕಳೆದುಕೊಳ್ಳುತ್ತಾನೆ. ಕಾವೇರಿಯ ದಕ್ಷಿಣ ದಂಡೆಯಲ್ಲಿ ಅರ್ಧ ಚಂದ್ರಗಿರಿ ಇದೆ. ಗಿರಿಯ ತಪ್ಪಲಿನಲ್ಲಿ ಮಾತ್ಸ್ಯ ದೇಶವಿದೆ. ಅಲ್ಲಿ ಮಹಾತೀರ್ಥವಿದೆ. ಮತ್ಸ್ಯಾವತಾರವೆತ್ತಿದ್ದ ಶ್ರೀ ವಿಷ್ಣುವು ಪೂರ್ವದಲ್ಲಿ ಅಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಿಸಿರು ವನು. ಈಶ್ವರನ ಅನುಗ್ರಹದಿಂದ ಈಗಲೂ ಅಲ್ಲಿ ಮತ್ಸ್ಯಗಳು ಜೀವಿಸುತ್ತಿವೆ. ಆ ತೀರ್ಥದಲ್ಲಿ ಸ್ನಾನ, ತೀರ್ಥದ ಪಾನ ಮಾಡುವದರಿಂದ ಅಧಿಕವಾದ ಪುಣ್ಯ ಲಭಿಸುವದು.

( ಮುಂದಿನ ಸಂಚಿಕೆಯಲ್ಲಿ ಅಷ್ಟಮ ಅಧ್ಯಾಯ ಮುಂದುವರಿಯಲಿದೆ. ಕೃಪೆ; ಸ್ಕಾಂದ ಪುರಾಣಾಂತರ್ಗತ ಶ್ರೀ ಕಾವೇರಿ ಮಾಹಾತ್ಮ್ಯೆ. ಅನುವಾದಕರು: ದಿ.ಟಿ.ಪಿ ನಾರಾಯಣಾಚಾರ್ಯರು)