ಗೋಣಿಕೊಪ್ಪಲು.ಜೂ.05: ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಹೊಗೋದು ಸಾಮಾನ್ಯ. ಹಲವು ಬಾರಿ ವಿದ್ಯುತ್ ದುರಸ್ತಿಯಿಂದ ಗಂಟೆಗಟ್ಟಲೆ ಗ್ರಾಮಗಳು ಕಾರ್ಗತ್ತಲಿನಲ್ಲಿ ಮುಳುಗುವುದು ಕೊಡಗು ಜಿಲ್ಲೆಯಲ್ಲಿ ಹೊಸದೇನಲ್ಲ. ಜಿಲ್ಲೆಯ ಜನರು ಕೂಡ ಕತ್ತಲ ನಡುವೆ ಬದುಕು ಸಾಗಿಸುವುದು ಕರಗತವಾಗಿದೆ. ವಿದ್ಯುತ್ ಸಮಸ್ಯೆ ಎದುರಾದಾಗ ಮಳೆ, ಗಾಳಿ ಎನ್ನದೆ ಸೆಸ್ಕ್ ಸಿಬ್ಬಂದಿಗಳು ಕೂಡ ಹಗಲಿರುಳು ಶ್ರಮಿಸಿ ಸೇವೆ ನೀಡುತ್ತಿದ್ದಾರೆ.
ಆದರೆ ಬಲು ಅಪರೂಪದ ಘಟನೆಯೊಂದು ಕೊಡಗು ಜಿಲ್ಲೆಯ ದ.ಕೊಡಗಿನ ಪೊನ್ನಂಪೇಟೆ ಹೋಬಳಿಯ ಬಲ್ಯಮುಂಡೂರು ಪಂಚಾಯ್ತಿ ವ್ಯಾಪ್ತಿಯ ಮುಗುಟಗೇರಿ ಗ್ರಾಮದಲ್ಲಿ ಸಂಭವಿಸಿದೆ. ಬಲ್ಯಮುಂಡೂರು ಗ್ರಾಮ ಸೇರಿದಂತೆ ಸುತ್ತ ಮುತ್ತ ಗ್ರಾಮಗಳಿಗೆ ಕಳೆದೆರಡು ದಿನಗಳಿಂದ ವಿದ್ಯುತ್ ಪೂರೈಕೆ ಇಲ್ಲದೆ ಜನರು ಪರದಾಡುತ್ತಿದ್ದರು. ಗಾಳಿ,ಮಳೆಯಿಲ್ಲದ ಸಂದರ್ಭದಲ್ಲಿ ಪವರ್ ಕಟ್ ಆಗಲು ಕಾರಣವೇನು.? ಎಂದು ತಿಳಿಯಲು ಜನರು ಸೇರಿ ಸ್ಥಳೀಯ ಗೋಣಿಕೊಪ್ಪಲು ಚೆಸ್ಕಾಂ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗ್ಗೆ ವಿವರ ನೀಡಿದ್ದರು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸತತ ಪ್ರಯತ್ನ ನಡೆಸಿದರೂ ಲೈನ್ಮೆನ್ಗಳಿಗೆ ಸಮಸ್ಯೆಯ ಮೂಲ ಹುಡುಕಲು ಸಾಧ್ಯವಾಗಲೇ ಇಲ್ಲ. ಇದರಿಂದ ಗ್ರಾಮದ ಜನತೆಗೆ ವಿದ್ಯುತ್ ಸೌಕರ್ಯವಿಲ್ಲದೆ ಮತ್ತಷ್ಟು ಕಷ್ಟ ಅನುಭವಿಸಿದರು. ನಿರಂತರ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳು ಎರಡು ದಿನಗಳ ನಂತರ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ಅಷ್ಟಕ್ಕೂ ಇಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದಕ್ಕೆ ಕಾರಣವಾಗಿದ್ದು ಅದೊಂದು ಮರ ಕಪ್ಪೆ! ಪೆÇನ್ನಂಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎರಡು ದಿನ ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗಿದ್ದು ವಿದ್ಯುತ್ ತಂತಿಯಲ್ಲಿ ಸತ್ತಿದ್ದ ಸಣ್ಣ ಮರ ಕಪ್ಪೆ ಎಂದರೆ ನೀವು ನಂಬಲೇಬೇಕು.
ಕರೆಂಟ್ ಕಂಬವೇರಿ 11ಕೆವಿ ತಂತಿಗೆ ತಾಗಿ ಸತ್ತ ಕಪ್ಪೆಯಿಂದ ಆ ಲೈನ್ ಆಗಿಂದ್ದಾಗಿಯೇ ಟ್ರಿಪ್ ಆಗುತ್ತಲೇ ಇತ್ತು. ಸತ್ತು ಅಂಟಿಕೊಂಡ ಕಪ್ಪೆಯನ್ನು ತೆಗೆಯುವ ತನಕ ಎಷ್ಟೇ ಬಾರಿ ಲೈನ್ ಚಾರ್ಜ್ ಮಾಡಿದರೂ ವಿದ್ಯುತ್ ಲೈನ್ ಟ್ರಿಪ್ ಆಗುತ್ತಲೇ ಇತ್ತು. ಕರೆಂಟ್ ಮಾತ್ರ ಈ ಮಾರ್ಗಕ್ಕೆ ಚಾರ್ಜ್ ಆಗುತ್ತಿರಲಿಲ್ಲ. ಲೈನ್ ಮ್ಯಾನ್ ಆ ಚಿಕ್ಕ ಕಪ್ಪೆಯನ್ನು ಹುಡುಕಿ ತೆಗೆದು ಚಾರ್ಜ್ ಮಾಡಿದ ಬಳಿಕವಷ್ಟೇ ವಿದ್ಯುತ್ ಸಂಪರ್ಕ ಸಫಲವಾಯಿತು. ಕೊನೆಗೂ ಅಲ್ಲಿನ ಲೈನ್ ಮೆನ್ ಹಾಗೂ ಸ್ಥಳೀಯರು ಕಪ್ಪೆಯಿಂದ ಪರದಾಡಿದ ಬಳಿಕ ನಿಟ್ಟುಸಿರು ಬಿಡುವಂತಾಯಿತು. ಒಂದು ಸಣ್ಣ ಮರ ಕಪ್ಪೆಯಿಂದ ಎಷ್ಟೆಲ್ಲಾ ಅವಾಂತರ ಸಂಭವಿಸಬಹುದು ಎನ್ನುವುದಕ್ಕೆ ಈ ಘಟನೆಯೊಂದು ಉತ್ತಮ ನಿದರ್ಶನ.
-ಹೆಚ್.ಕೆ.ಜಗದೀಶ್