ಕುಶಾಲನಗರ, ಜೂ. 6: ಕೊರೊನಾ ಭೀತಿಯ ನಡುವೆ ಡೆಂಗ್ಯು ಜ್ವರದ ಆತಂಕ ಕುಶಾಲನಗರ ಸೇರಿದಂತೆ ಸುತ್ತಮುತ್ತ ಕಂಡುಬಂದಿದೆ. ಕೊರೊನಾ ಹಿನೆÀ್ನಲೆಯಲ್ಲಿ ಮೂರು ತಿಂಗಳ ಅವಧಿಯ ಲಾಕ್‍ಡೌನ್ ಸಂದರ್ಭ ಆರೋಗ್ಯ ಇಲಾಖೆಯ ದೈನಂದಿನ ಕೆಲಸ ಕಾರ್ಯಗಳು ಸ್ಥಗಿತಗೊಂಡು ಇದೀಗ ಮತ್ತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಲಾರ್ವ ನಾಶಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ನಡುವೆ ಕೆಲವು ಹಳೆಯ ಡೆಂಗ್ಯು ಪ್ರಕರಣಗಳು ಮರುಕಳಿಸಿದ್ದು ಕೂಡಿಗೆ, ಕುಶಾಲನಗರ ವ್ಯಾಪ್ತಿಯಲ್ಲಿ ಜ್ವರ ಪೀಡಿತರು ಆಸ್ಪತ್ರೆಗೆ ದಾಖಲಾಗುತ್ತಿರುವುದು ಕಂಡುಬಂದಿದೆ. ಇಲಾಖೆಯ ಹಿರಿಯ ಮಹಿಳಾ ಆರೋಗ್ಯ ಸಹಾಯಕರು, ಪುರುಷ ಸಿಬ್ಬಂದಿ ತಿಂಗಳ ಪ್ರಥಮ ಮತ್ತು ಮೂರನೇ ಶುಕ್ರವಾರದಂದು ಲಾರ್ವ ಉತ್ಪತ್ತಿ ಕೇಂದ್ರಗಳನ್ನು ಪತ್ತೆಹಚ್ಚಿ ನಾಶಪಡಿಸುವ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ದೃಶ್ಯ ಕಂಡುಬಂದಿದೆ.

ಚರಂಡಿ ನೀರು, ಮಳೆ ನೀರು, ಮನೆ ಸುತ್ತಮುತ್ತ ಸಂಗ್ರಹವಾಗದಂತೆ ಎಚ್ಚರವಹಿಸುವುದು, ಕುಡಿಯುವ ನೀರನ್ನು ಹೆಚ್ಚು ದಿನಗಳ ಕಾಲ ಸಂಗ್ರಹಿಸಿಟ್ಟು ಬಳಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸ ನಡೆದಿದೆ.