ನಾಪೆÇೀಕ್ಲು, ಜೂ. 6: ಕುಂದಚೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ಈ ವಿಭಾಗದ ಬೆಳೆಗಾರರು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ.
ಸಹಕಾರ ಸಂಘ ಬೆಳೆಗಾರರಿಗೆ ಸಹಕರಿಸಬೇಕು. ಆದರೆ ಇಲ್ಲಿ ಸಂಘವು ಬೆಳೆಗಾರರನ್ನು ಶೋಷಣೆ ಮಾಡಿ ವಂಚಿಸುತ್ತಿದೆ. ಈಗಾಗಲೇ ಬೆಳೆಗಾರರು ಲಾಕ್‍ಡೌನ್‍ನಿಂದ ತತ್ತರಿಸಿ ಆರ್ಥಿಕವಾಗಿ ಕಷ್ಟದಲ್ಲಿರುವ ಸಂದರ್ಭ ಮತ್ತು ಅತಿವೃಷ್ಟಿಯಿಂದ ಕಷ್ಟದಲ್ಲಿರುವ ಈ ಸಮಯದಲ್ಲಿ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುತ್ತಿದೆ.
ಸಹಕಾರ ಸಂಘದಲ್ಲಿ ಐ.ಪಿ.ಎಲ್. ಕಂಪೆನಿಯ 16;16;16 50 ಕೆ.ಜಿ. ತೂಕದ ರಸಗೊಬ್ಬರ ನಿಗದಿತ ಬೆಲೆ 1075 ರೂಗಳಿದ್ದು, ಇದೇ ಗೊಬ್ಬರವನ್ನು ಸಂಘದಲ್ಲಿ 1300 ರೂ ಗಳಿಗೆ ಮಾರಾಟ ಮಾಡಿ 225 ರೂ ಅಧಿಕ ಪಡೆದು ಬೆಳೆಗಾರರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಈಗಾಗಲೇ ಹೆಚ್ಚಿಗೆ ಪಡೆದ ದರವನ್ನು ಬೆಳೆಗಾರರಿಗೆ ಹಿಂತಿರುಗಿಸಿ ಕೊಡಬೇಕೆಂದು ಬೆಳೆಗಾರರಾದ ಕೆ.ಡಿ. ಚಂಗಪ್ಪ, ದಿನೇಶ್, ಪಿ.ಬಿ. ಬಶೀರ್, ಎ.ಆರ್. ನಾಣಯ್ಯ, ಬಿ.ಆರ್. ಸುರೇಶ್, ಕೆ.ಸಿ. ಹರೀಶ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.