ಮಡಿಕೇರಿ, ಜೂ. 6: ನಗರದ ಜಿಲ್ಲಾ ಸರಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ಶೂಶ್ರಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಯಾನ (28) ನಿನ್ನೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮರಗೋಡು ಸಮೀಪದ ಹೊಸ್ಕೇರಿಯ ಮನೆಯಲ್ಲಿ ನಿನ್ನೆ ಸಂಜೆಗತ್ತಲೆ ನಡುವೆ ಸ್ನಾನ ಮುಗಿಸಿದ್ದ ಡಯಾನ, ಆಕೆಯ ತಾಯಿ ಸ್ನಾನಕ್ಕೆ ತೆರಳಿದ ಸಮಯದಲ್ಲಿ ಕೀಟನಾಶಕ (4.8) ಸೇವಿಸಿದ್ದಾಳೆ ತಾಯಿ ಬಂದು ನೋಡುವಷ್ಟರಲ್ಲಿ ಅಸ್ವಸ್ತಗೊಂಡು ಬಳಲುತ್ತಿದ್ದು, ಕೂಡಲೇ ಅಶ್ವಿನಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತರಲಾಗಿದೆ.

ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಆ ಮೇರೆಗೆ ತಾಯಿ ಭವಾನಿ ನೀಡಿರುವ ಪುಕಾರಿನ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಂಡಿದ್ದಾರೆ.

ಮೃತಳ ಕುಟುಂಬ ಮೂಲಗಳ ಪ್ರಕಾರ ಜಿಲ್ಲಾಸ್ಪತ್ರೆಯ ಉದ್ಯೋಗಿ ಯುವಕನೊಬ್ಬನಿಗೂ, ಶೂಶ್ರುಷಕಿಗೂ ಪ್ರೇಮ ಸಂಬಂಧವಿದ್ದು, ಕಳೆದ ಮೂರು ದಿನಗಳಿಂದ ಮುನಿಸಿಕೊಂಡಿದ್ದ ಆಕೆ ಕರ್ತವ್ಯಕ್ಕೆ ಹಾಜರಾಗಿರಲಿಲ್ಲವೆಂದು ತಿಳಿದು ಬಂದಿದೆ. ಈ ಸಂಬಂಧ ಪೊಲೀಸರು ಯುವಕನ ಹೇಳಿಕೆ ಪಡೆದಿರುವ ಬಗ್ಗೆಯೂ ಗೊತ್ತಾಗಿದೆ.