ವೀರಾಜಪೇಟೆ, ಜೂ.4: ಎರಡು ದಿನಗಳ ಹಿಂದೆಯೇ ಕೇರಳದಿಂದ ಮುಂಗಾರು ದಕ್ಷಿಣ ಕೊಡಗಿನ ಭಾಗಕ್ಕೆ ಪ್ರವೇಶಿಸಿದ್ದು ನಿನ್ನೆ ದಿನ ರಾತ್ರಿ ಗುಡುಗು ಮಿಂಚಿನೊಂದಿಗೆ ಬಿದ್ದ ಭಾರೀ ಮಳೆಗೆ ನೆಹರೂ ನಗರದ ಏಳನೇ ಬ್ಲಾಕ್‍ನ ಅಪಾಯದ ಅಂಚಿನಲ್ಲಿದ್ದ ಭಾರೀ ತಡೆಗೋಡೆಯ ಬರೆ ಮಣ್ಣು ಮಧ್ಯರಾತ್ರಿ ಭಾಗಶ: ಕುಸಿದಿದೆ. ತಡೆಗೋಡೆಯ ಕೆಳಭಾಗದಲ್ಲಿದ್ದ ಆರು ಮನೆಗಳ ನಿವಾಸಿಗಳನ್ನು ಇಂದು ಬೆಳಗಿನ ಜಾವ ತುರ್ತಾಗಿ ಸ್ಥಳಾಂತರಗೊಳಿಸಲಾಗಿದೆ.ವೀರಾಜಪೇಟೆ ವಿಭಾಗದಲ್ಲಿ ಭಾರೀ ಮಳೆ ಬೀಳುತ್ತಿರುವ ಹಿನೆÀ್ನಲೆಯಲ್ಲಿ ಯಾವುದೇ ತುರ್ತು ಪರಿಹಾರ ಕೈಗೊಳ್ಳಲು ಸಾಧ್ಯವಾಗ ದಿದ್ದರೂ ಬರೆ ಮಣ್ಣು ಕುಸಿತ ಮುಂದುವರೆಯದಂತೆ ಮಣ್ಣಿನ ಬರೆಯ ಸುತ್ತಮುತ್ತ ಪೂರ್ತಿಯಾಗಿ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಬೆಟ್ಟದಿಂದ ಬಂದ ಮಳೆ ನೀರು ಹರಿಯಲು ಒಂದು ಬದಿಯಲ್ಲಿ ಚರಂಡಿ ತೋಡಲಾಗಿದ್ದು ಈ ನೀರು ನೇರವಾಗಿ ಹರಿಯುವ ತೋಡಿಗೆ ಬೀಳುವಂತೆ ಮಾಡಲಾಗಿದೆ. ತಡೆಗೋಡೆ ಕುಸಿಯದಂತೆ ಮಣ್ಣಿನ ಬರೆಯ ಕೆಳಗೆ ಮರಳು ಚೀಲವನ್ನು ಹಾಕಿ ಮಣ್ಣು ಜರುಗುವುದನ್ನು ತಡೆಯಲು ತುರ್ತು ಕ್ರಮ ಜರುಗಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿಯ ಅಭಿಯಂತರ ಎಂ.ಪಿ,ಹೇಮ್‍ಕುಮಾರ್ ತಿಳಿಸಿದ್ದಾರೆ.

ಭಾರೀ ತಡೆಗೋಡೆ ನಿರ್ಮಾಣದ ಗುತ್ತಿಗೆ ಪಡೆದು ಕಾಮಗಾರಿ ವಿಳಂಬ ಮಾಡಿ, ತುರ್ತು ಕಾಮಗಾರಿಯನ್ನು ಕಾರಣವಿಲ್ಲದೆ ಸ್ಥಗಿತಗೊಳಿಸಿದ ದೂರಿನ ಮೇರೆ ಗುತ್ತಿಗೆದಾರರಿಗೆ ಇಲ್ಲಿನ ಪಟ್ಟಣ ಪಂಚಾಯಿತಿಯಿಂದ ಎರಡು ಬಾರಿ ನೋಟೀಸ್ ನೀಡಲಾಗಿದೆ.

ನೆಹರೂನಗರದ ತಡೆಗೋಡೆಯ ಕೆಳಭಾಗದ ಮನೆಗಳಲ್ಲಿ ವಾಸಿಸುತ್ತಿದ್ದ ಪಿ.ಹಂಸ, ಎಂ.ಪಿ.ಅಪ್ತಾಬ್, ವಿ.ಬಶೀರ್, ಹಿದಾಯತ್ ಪಾಷ, ತಬ್ಸಮ್ ಹಾಗೂ ಟಿ.ಶೆಲ್ವಿ ಎಂಬುವರ ಕುಟುಂಬಗಳನ್ನು ಇಂದು ಬೆಳಿಗ್ಗೆ ಸ್ಥಳಾಂತರಿಸಲಾಗಿದ್ದು ಜಿಲ್ಲಾಧಿಕಾರಿಗಳ ಆದೇಶದಂತೆ ಈ ಎಲ್ಲರಿಗೂ ತಾತ್ಕಾಲಿಕವಾಗಿ ಬಾಡಿಗೆ ಮನೆಗಳ ವ್ಯವಸ್ಥೆ ಮಾಡಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

(ಮೊದಲ ಪುಟದಿಂದ)

ವೀರಾಜಪೇಟೆಗೆ ಒಂದೇ ದಿನ 3.3 ಇಂಚುಗಳಷ್ಟು ಮಳೆ

ವೀರಾಜಪೇಟೆ ವಿಭಾಗಕ್ಕೆ ನಿನ್ನೆ ದಿನ ಒಟ್ಟು 3.3ಇಂಚುಗಳಷ್ಟು ಮಳೆ ಸುರಿದಿದೆ. ರಾತ್ರಿ ಹನ್ನೆರಡು ಗಂಟೆಯಿಂದ ಬೆಳಗಿನ ಜಾವ 4ಗಂಟೆಯವರೆಗೆ ಮಳೆ, ಮಿಂಚು, ಗಾಳಿಯ ತೀವ್ರತೆ ಅಧಿಕವಾಗಿತ್ತು. ಭಾರೀ ಮಳೆಯಿಂದ ರಾತ್ರಿ ಕೆಲವು ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ವೀರಾಜಪೇಟೆ ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಮಲೆತಿರಿಕೆ ಬೆಟ್ಟ, ಅಯ್ಯಪ್ಪ ದೇವಾಲಯದ ಸುತ್ತಮುತ್ತಲಿನ ಅಪಾಯದ ಅಂಚಿನಲ್ಲಿರುವ ಮನೆಗಳನ್ನು ಸ್ಥಳಾಂತರಿಸಿ ಸಂತ್ರಸ್ತರ ಕೇಂದ್ರವನ್ನು ಸ್ಥಾಪಿಸಲು ಸಿದ್ಧತೆ ನಡೆಸಿದೆ.

ನಿನ್ನೆ ದಿನ ರಾತ್ರಿ ಬಿದ್ದ ಮಳೆಗೆ ಬಿಟ್ಟಂಗಾಲದಿಂದ ನಾಂಗಾಲಕ್ಕೆ ಹೋಗುವ ರಸ್ತೆಯಲ್ಲಿ ಭಾರೀ ಮರವೊಂದು ರಸ್ತೆಗೆ ಉರುಳಿ ಬಿದ್ದು ಕೆಲವು ಗಂಟೆಗಳ ಕಾಲ ವಾಹನ ಸಂಪರ್ಕಕ್ಕೆ ಅಡಚಣೆ ಉಂಟಾಗಿದೆ.

ನಾಪೆÇೀಕ್ಲು ವ್ಯಾಪ್ತಿಯಲ್ಲಿ ಉತ್ತಮ ಮಳೆ : ಬಿರುಸಿನ ಕೃಷಿ ಚಟುವಟಿಕೆ

ನಾಪೆÇೀಕ್ಲು : ನಾಪೆÇೀಕ್ಲು ವ್ಯಾಪ್ತಿಯ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ರೈತರು ಬಿರುಸಿನ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಾ. 3ರ ಸಂಜೆ ಆರಂಭಗೊಂಡ ಮಳೆ ಜೂ. 4ರ ಗುರುವಾರ ಬೆಳಿಗ್ಗೆ 11 ಗಂಟೆಯವರೆಗೆ ಸತತವಾಗಿ ಸುರಿದ ಪರಿಣಾಮ ಈ ವ್ಯಾಪ್ತಿಯ ಹಳ್ಳ, ಕೊಳ್ಳ, ಕೊಲ್ಲಿ, ಹೊಳೆ, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಮಳೆಗಾಲದ ಆರಂಭವನ್ನು ಸೂಚಿಸುತ್ತಿದೆ. ಉತ್ತಮ ಮಳೆಯ ಹಿನ್ನೆಲೆಯಲ್ಲಿ ಕೊಳಕೇರಿ ಗ್ರಾಮದಲ್ಲಿ ಕೃಷಿಕರು ಭತ್ತದ ಬೀಜ ಬಿತ್ತನೆ ಮಾಡಲು ಗದ್ದೆಯನ್ನು ಟಿಲ್ಲರ್ ಮೂಲಕ ಉಳುಮೆ ಮಾಡುತ್ತಿರು ವದು ಕಂಡು ಬರುತ್ತಿದೆ.

ಅದರಂತೆ ಕಾಫಿ ತೋಟದ ಕೆಲಸವನ್ನೂ ಕೂಡ ಬಿರುಸಿನಿಂದ ಮುಗಿಸುತ್ತಿರುವದು ಕಂಡು ಬರುತ್ತಿದೆ. ಕಾಫಿ ಗಿಡಗಳಿಗೆ ರಸಗೊಬ್ಬರ ನೀಡುವದು, ಕೊಟ್ಟಿಗೆ ಗೊಬ್ಬರ ನೀಡುವದು, ಮರಗಳ ಕಪಾತ್ ಕಾರ್ಯ ಬಿರುಸಿನಿಂದ ನಡೆಸುತ್ತಿರುವದು ಕಂಡು ಬರುತ್ತಿದೆ.

ಶನಿವಾರಸಂತೆಯಲ್ಲಿ ತುಂತುರು ಮಳೆ

ಶನಿವಾರಸಂತೆ : ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಗುರುವಾರ ಸಂಜೆ 5 ಗಂಟೆಯಿಂದ ತುಂತುರು ಮಳೆ ಸುರಿದು ಇಳೆ ತಂಪಾಯಿತು. ಬುಧವಾರ ರಾತ್ರಿಯಿಡಿ ಸುರಿದ ಮಳೆ ಗುರುವಾರ ಬೆಳಗ್ಗೆ 7 ರವರೆಗೂ ಜಿನುಗುತ್ತಲೆ ಇದ್ದು, 40 ಸೆಂಟ್ ಮಳೆಯಾಗಿದೆ ನಂತರ ಬಿಸಿಲಿನ ವಾತಾವರಣವಿತ್ತು.

ಸಂಜೆ ಇದ್ದಕ್ಕಿದ್ದಂತೆ ದಟ್ಟವಾಗಿ ಮೋಡ ಕವಿದು ಆರಂಭವಾದ ತುಂತುರು ಮಳೆ ಅರ್ಧ ಗಂಟೆ ಕಾಲ ಸುರಿಯಿತು. ಪಟ್ಟಣಕ್ಕೆ 2 ಸೆಂಟ್, ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕೊಳತ್ತೂರು, ಅಪ್ಪಶೆಟ್ಟಳ್ಳಿ ಗ್ರಾಮಗಳಲ್ಲಿ 10 ಸೆಂಟ್, ಕಾಜೂರು, ಕೂಜಗೇರಿ, ಎಡೆಹಳ್ಳಿ ಗ್ರಾಮಗಳಲ್ಲಿ 3 ಸೆಂಟ್ ಮಳೆಯಾಗಿದೆ. ತುಂತುರು ಮಳೆಯಿಂದ ಭೂಮಿ ಒದ್ದೆಯಾಗು ವುದಿಲ್ಲ. ಹೀಗಾದರೆ ಭತ್ತದ ಬೀಜ ಬಿತ್ತನೆ ಕೆಲಸ ಸಾಧ್ಯವಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದರು.