ಮಡಿಕೇರಿ, ಜೂ. 4: ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ಸರ್ಕಾರಗಳು ಘೋಷಿಸಿರುವ ವಿಶೇಷ ಪ್ಯಾಕೇಜ್‍ನಿಂದ ಕೊಡಗಿನ ಬೆಳೆಗಾರರಿಗೆ ಹಾಗೂ ರೈತರಿಗೆ ಪ್ರಯೋಜನವಾಗಿಲ್ಲ ಎಂದು ಆರೋಪಿಸಿರುವ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕ, ಜಿಲ್ಲೆಯ ಬೆಳೆಗಾರರ ಸಂಕಷ್ಟಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಂದಿಸುವುದರೊಂದಿಗೆ ಜನ ಸಾಮಾನ್ಯರ ಕೊಳ್ಳುವ ಶಕ್ತಿಯನ್ನು ವೃದ್ಧಿಸಲು ಅಗತ್ಯವಿರುವ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘÀಟನೆಯ ಜಿಲ್ಲಾ ಸಂಚಾಲಕ ಡಾ. ಇ.ರ. ದುರ್ಗಾಪ್ರಸಾದ್ ದೇಶದ ಅರ್ಥ ವ್ಯವಸ್ಥೆ ಕುಸಿದಿರುವ ಹಿನ್ನೆಲೆಯಲ್ಲಿ ಕಾರ್ಮಿಕರು, ರೈತರು ಮತ್ತು ಮಧ್ಯಮ ವರ್ಗದ ಜನರ ಮೇಲೆ ಭಾರೀ ದುಷ್ಪರಿಣಾಮ ಬೀರಿದ್ದು, ಈ ಜನರನ್ನು ರಕ್ಷಿಸುವ ಹೆಸರಿನಲ್ಲಿ ಪ್ರಧಾನ ಮಂತ್ರಿಗಳು 20 ಸಾವಿರ ಲಕ್ಷ ಕೋಟಿಗಳ ಪ್ಯಾಕೇಜ್ ಘೋಷಿಸಿದ್ದಾರೆ. ಕೇಂದ್ರದ ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಈ ಮೊತ್ತವನ್ನು ಕೈಗಾರಿಕೆಗಳು, ಕಾರ್ಮಿಕರು ಮತ್ತು ಕೃಷಿ ಕ್ಷೇತ್ರಕ್ಕೆಂದು ಮೂರು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಆದರೆ, ಅವರ ಈ ಘೋಷಣೆಯಿಂದ ಕೊಡಗಿನ ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಪ್ಯಾಕೇಜ್‍ನಲ್ಲಿ ಕಾಫಿ, ಭತ್ತ, ಕರಿಮೆಣಸು ಬೆಳೆಗಾರರನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ದೂರಿದರು. ಬಜೆಟ್‍ಗೆ ಮುನ್ನ ಬೆಳೆÉಗಾರ ಸಂಘಟನೆಗಳು, ರೈತ ಸಂಘಟನೆಗಳ ಪ್ರಮುಖರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿ, ಕೊಡಗಿನ ಬೆಳೆಗಾರರ ಮತ್ತು ರೈತರ ಹಲವು ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಪ್ಯಾಕೇಜ್‍ಗಳನ್ನು ಬಜೆಟ್‍ನಲ್ಲಿ ಸೇರಿಸುವಂತೆ ಮನವಿ ಮಾಡಿಕೊಂಡಿದ್ದರು. ಇದರೊಂದಿಗೆ ಜಿಲ್ಲೆಯ ಶಾಸಕರುಗಳು ಕೂಡ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಬೆಳೆಗಾರರ ಹಾಗೂ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದ್ದರು. ಈ ಹಂತದಲ್ಲಿ ಸೂಕ್ತ ಸ್ಪಂದನ ನೀಡುವ ಭರವಸೆ ದೊರಕಿತ್ತಾದರೂ, ಅದು ಕಾರ್ಯರೂಪಕ್ಕೆ ಬರಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಕೊಡಗಿನ ಕರಿಮೆಣಸಿನ ಧಾರಣೆ ಕುಸಿತಕ್ಕೆ ಕಾರಣವಾಗಿರುವ ಕರಿಮೆಣಸು ಆಮದನ್ನು ತಡೆಗಟ್ಟುವಲ್ಲಿ, ಭತ್ತಕ್ಕೆ ಸೂಕ್ತ ಬೆಂಬಲ ಬೆಲೆÉ ನೀಡುವಲ್ಲಿ ರೈತರ 10 ಹೆಚ್.ಪಿ. ವರೆಗಿನ ಪಂಪ್‍ಸೆಟ್‍ಗಳಿಗೆ ಉಚಿತವಾಗಿ ವಿದ್ಯುತ್ ಒದಗಿಸುವಲ್ಲಿ, ಕೊಡಗಿನಲ್ಲಿ ವನ್ಯ ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಲ್ಲಿ ಸರ್ಕಾರಗಳು ವಿಫಲವಾಗಿದೆಯೆಂದು ಡಾ. ದುರ್ಗಾಪ್ರಸಾದ್ ಆರೋಪಿಸಿದರು

ಸಂಘಟನೆಯ ಸದಸ್ಯ ಕೆ.ಎ. ಹಂಸ ಮಾತನಾಡಿ, ಯಾಂತ್ರೀಕೃತ ಭತ್ತ ನಾಟಿಗೆ ಕೃಷಿ ಇಲಾಖೆ 7 ಸಾವಿರ ರೂ.ಗಳ ಪ್ರೋತ್ಸಾಹ ಧನವನ್ನು ನೀಡುತ್ತಿದ್ದು, ಇದನ್ನು ಕೈ ಮೂಲಕ ನಾಟಿ ಮಾಡುವ ಕೃಷಿಕರಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಮತ್ತೋರ್ವ ಸದಸ್ಯ ಸಿ.ಎ. ಹಮೀದ್ ಮಾತನಾಡಿ, ಮಳೆ ಹಾನಿಯಿಂದ ಬೆಳೆ ನಷ್ಟಕ್ಕೆ ಒಳಗಾದ ರೈತರ ಅಧಿಕೃತವಾದ ನಷ್ಟವನ್ನು ಗ್ರಾಮ ಲೆಕ್ಕಿಗರು ಅಂದಾಜು ಮಾಡಿ ಸರ್ಕಾರಕ್ಕೆ ಸಲ್ಲಿಸಿದ್ದರೂ, ಸರ್ಕಾರ ಮಾತ್ರ ಕೇವಲ 500 ರಿಂದ 1000 ರೂ. ಪರಿಹಾರ ನೀಡಿ ಕೈತೊಳೆದುಕೊಂಡಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.