ಶನಿವಾರಸಂತೆ, ಜೂ. 4: ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ಹಾಗೂ ಪಟ್ಟಣದ ಕೋಳಿ, ಹಂದಿ ಮಾಂಸದಂಗಡಿ ತ್ಯಾಜ್ಯವನ್ನು ತಂದು ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಸೇತುವೆ ರಸ್ತೆಯ ಬದಿಗಳಲ್ಲಿ ಸುರಿಯಲಾಗುತ್ತಿದೆ. ಹೊಳೆ ನೀರು ಕಲುಷಿತಗೊಳ್ಳುತ್ತಿದೆ ಎಂದು ಕಾಜೂರು, ದೊಡ್ಡಕೊಳತ್ತೂರು, ಎಡೆಹಳ್ಳಿ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಾಕ್‍ಡೌನ್ ಸಡಿಲಗೊಂಡ ಬೆನ್ನಲ್ಲೆ ಎಲ್ಲೆಡೆ ತ್ಯಾಜ್ಯ ಕಸದ ರಾಶಿ, ಮದ್ಯದ ಬಾಟಲಿ ರಾರಾಜಿಸುತ್ತಿದೆ. ಕಾಜೂರು ಹೊಳೆ ಹರಿದು ಹೇಮಾವತಿ ನದಿಯನ್ನು ಸೇರುತ್ತದೆ. ಜೋರಾಗಿ ಮಳೆಯಾದರೆ ತ್ಯಾಜ್ಯವೂ ನದಿ ಸೇರುತ್ತದೆ ಎಂದು ದೂರಿದ್ದಾರೆ.

ಸೇತುವೆ ಬಳಿ ತೋಟದೊಳಗೆ ಕಾರಣಿಕ ದೈವ ಕಟ್ಟೆ, ಬಸವಣ್ಣ ದೇವರ ಗುಡಿಯಿದೆ. ರಸ್ತೆಯಲ್ಲಿ ಕಸ ಹಾಕದೆ, ಸ್ವಚ್ಛತೆ ಕಾಪಾಡುವಂತೆ ಎಚ್ಚರಿಕೆ ಫಲಕವನ್ನು ಅಳವಡಿಸಲಾಗಿದ್ದರೂ, ಶನಿವಾರಸಂತೆ ಪಟ್ಟಣ ಹಾಗೂ ದುಂಡಳ್ಳಿ ಜನತೆ ಹಳ್ಳಿಗಳಿಗೆ ಬಂದು ರಸ್ತೆ ಪಕ್ಕದಲ್ಲೇ ಕಸ ಸುರಿದು ಪರಿಸರವನ್ನು ಮಲೀನ ಗೊಳಿಸುತ್ತಿದ್ದಾರೆ. ದುಂಡಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಿ, ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಚಿನ್ನಪ್ಪ, ಮಹೇಶ್, ಚಂದ್ರ, ಚಂದ್ರಶೇಖರ್ ಹಾಗೂ ಬಾಬು ಆಗ್ರಹಿಸಿದ್ದಾರೆ.