ಮಡಿಕೇರಿ, ಜೂ. 3: ಆಂಧ್ರಪ್ರದೇಶದ ಗುಂಟೂರಿನಿಂದ ಕೊಡಗಿನಲ್ಲಿ ಮಳೆಗಾಲ ಎದುರಿಸಲು ಆಗಮಿಸಿರುವ ಎನ್‍ಡಿಆರ್‍ಎಫ್ 10ನೇ ಬೆಟಾಲಿಯನ್‍ನ 25 ಮಂದಿಯ ತಂಡವು, ಇಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರುಗಳನ್ನು ಪ್ರತ್ಯೇಕ ಭೇಟಿಯಾಗಿ ಸಮಾಲೋಚನೆ ನಡೆಸಿತು. ಈ ಸಂದರ್ಭ ತಮ್ಮ ಕಚೇರಿ ಸಭಾಂಗಣದಲ್ಲಿ ತಂಡದೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು, ಕೊಡಗಿನಲ್ಲಿ ಹಿಂದಿನ ಎರಡು ವರ್ಷಗಳ ಪ್ರಾಕೃತಿಕ ವಿಕೋಪ ವೇಳೆ ಸಂಭವಿಸಿದ ಭೂಕುಸಿತ ಹಾಗೂ ಜಲಪ್ರವಾಹದಂತಹ ಸೂಕ್ಷ್ಮ ಸ್ಥಳಗಳನ್ನು ಪರಿಶೀಲಿಸಿ, ಸಾರ್ವಜನಿಕ ಸುರಕ್ಷಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲು ನಿರ್ದೇಶಿಸಿದರು.(ಮೊದಲ ಪುಟದಿಂದ) ಅಲ್ಲದೆ, ಪೊಲೀಸ್ ಅಧಿಕಾರಿಗಳೊಂದಿಗೆ ಜಂಟಿಯಾಗಿ ಮಾಹಿತಿ ಪಡೆದು, ಅಗತ್ಯ ಸಂದರ್ಭಗಳಲ್ಲಿ ನಿರ್ವಹಿಸಬೇಕಿರುವ ಚಟುವಟಿಕೆಗಳ ಬಗ್ಗೆ ಸಜ್ಜುಗೊಳ್ಳಲು ತರಬೇತಿ ನಡೆಸುವಂತೆ ಸಲಹೆಯಿತ್ತರು. ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚೆಯ ವೇಳೆ ಎನ್‍ಡಿಆರ್‍ಎಫ್ ಕಮಾಂಡೆಂಟ್ ಆರ್.ಕೆ. ಉಪಾಧ್ಯಾಯ ಹಾಗೂ ಮಡಿಕೇರಿ ಪೊಲೀಸ್ ಉಪವಿಭಾಗದ ಡಿವೈಎಸ್‍ಪಿ ಬಿ.ಪಿ. ದಿನೇಶ್‍ಕುಮಾರ್, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ವಿಪತ್ತು ನಿರ್ವಹಣಾ ಘಟಕದ ಅಮೂಲ್ಯ ವಾಸುದೇವ್ ಮೊದಲಾದವರು ಪಾಲ್ಗೊಂಡಿದ್ದರು.
ಎಸ್‍ಪಿ ಮಾಹಿತಿ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿದ ವೇಳೆ, ಹಿಂದಿನ ಎರಡು ವರ್ಷ ಪ್ರಾಕೃತಿಕ ವಿಕೋಪ ಎದುರಾಗಿದ್ದ ಸ್ಥಳಗಳಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸುವ ಅವಶ್ಯಕತೆ ಬಗ್ಗೆ ಸಲಹೆ ನೀಡಲಾಯಿತು. ಈ ಸಂಬಂಧ ಮಡಿಕೇರಿ ಜಿಲ್ಲಾ ಕೇಂದ್ರ, ಗ್ರಾಮಾಂತರ ಹಾಗೂ ವೀರಾಜಪೇಟೆ, ಸೋಮವಾರ ಪೇಟೆ, ಪೊಲೀಸ್ ಉಪವಿಭಾಗಗಳಲ್ಲಿ ನಾಲ್ಕು ಪ್ರತ್ಯೇಕ ತಂಡವನ್ನು ರಚಿಸಿಕೊಂಡು ತುರ್ತು ಸಂದರ್ಭ ಗಳಲ್ಲಿ ಕಾರ್ಯಾಚರಣೆಗೆ ಜಂಟಿ ತರಬೇತಿ ನಡೆಸಬೇಕೆಂದು ಸಲಹೆ ನೀಡಲಾಯಿತು.
ಆ ದಿಸೆಯಲ್ಲಿ ಹಿಂದಿನ ಸಾಲಿನ ಸೂಕ್ಷ್ಮ ಪ್ರದೇಶಗಳಿಗೆ ಎನ್‍ಡಿಆರ್‍ಎಫ್ ತಂಡ ಆಯಾ ಪೊಲೀಸರೊಂದಿಗೆ ತೆರಳಿ ಜನತೆಯಲ್ಲಿ ಅರಿವು ಮೂಡಿಸುವದು, ಭೂಕುಸಿತ ಹಾಗೂ ಜಲಪ್ರವಾಹ ಎದುರಾದರೆ ತಕ್ಷಣ ಜೀವರಕ್ಷಣೆಗೆ ಅನುಸರಿಸಬೇಕಾದ ಮಾರ್ಗೋಪಾಯ ಕುರಿತು ಸಂದೇಶ ರವಾನಿಸಲು ಸಲಹೆ ನೀಡಲಾಯಿತು. ತಕ್ಷಣದಿಂದಲೇ ಕ್ಷೇತ್ರವಾರು ಭೇಟಿಗೆ ಜಂಟಿ ತೀರ್ಮಾನ ತೆಗೆದುಕೊಳ್ಳಲಾಯಿತು.