ಕುಶಾಲನಗರ, ಜೂ. 3: ಮುಂದಿನ ದಿನಗಳಲ್ಲಿ ಪ್ರವಾಹದಿಂದ ನದಿ ತಟದ ಮನೆಗಳು ಮುಳುಗಿದಲ್ಲಿ ಸರಕಾರದಿಂದ ಯಾವುದೇ ರೀತಿಯ ಪರಿಹಾರ ಧನ ನೀಡಲಾಗುವುದಿಲ್ಲ. ಶಾಶ್ವತ ಪರಿಹಾರ ಸ್ವತಃ ಕಲ್ಪಿಸಿಕೊಳ್ಳಬೇಕೆಂದು ಕೊಪ್ಪ ಗ್ರಾಮ ಪಂಚಾಯ್ತಿ ಮೂಲಕ ಕಳೆದ ಸಾಲಿನ ಪ್ರವಾಹ ಸಂತ್ರಸ್ತರಿಗೆ ಸೂಚನೆ ನೀಡಿರುವ ಬಗ್ಗೆ ವರದಿಯಾಗಿದೆ.

ಕೊಪ್ಪ ಗ್ರಾ.ಪಂ. ವ್ಯಾಪ್ತಿಯ ನೂರಕ್ಕೂ ಅಧಿಕ ಮನೆ ಮಾಲೀಕರು ಕಳೆದ ಬಾರಿ ಮನೆ ಕುಸಿತ ಮತ್ತು ಅಲ್ಪ ಪ್ರಮಾಣದ ಹಾನಿಯಾದ ಹಿನ್ನೆಲೆಯಲ್ಲಿ ಸರಕಾರದಿಂದ ಪರಿಹಾರ ಪಡೆದಿದ್ದಾರೆ. ಮುಳುಗಡೆ ಪ್ರದೇಶ ದಿಂದ ಸ್ಥಳಾಂತರವಾಗದೆ ಇನ್ನೂ ಅದೇ ಜಾಗದಲ್ಲಿ ಮನೆ ನಿರ್ಮಿಸಿ ಕೊಂಡಿರುವುದು ಕಂಡುಬಂದಿದೆ. ಮನೆ ಕುಸಿದ 6 ಮಂದಿಗೆ ತಲಾ ರೂ. 5 ಲಕ್ಷ ಮತ್ತು ಅಲ್ಪ ಪ್ರಮಾಣದಲ್ಲಿ ಹಾನಿಗೊಂಡವರಿಗೆ ತಲಾ ಎರಡು ಲಕ್ಷಗಳನ್ನು ಸರಕಾರದ ಮೂಲಕ ನೀಡಲಾಗಿತ್ತು ಹಾಗೂ ಬದಲಿ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದರೂ ಅದೇ ಜಾಗದಲ್ಲಿ ನೆಲೆಯೂರಿದ್ದು ಮತ್ತೆ ಪ್ರವಾಹಕ್ಕೆ ಈಡಾದಲ್ಲಿ ಯಾವುದೇ ರೀತಿಯ ಪರಿಹಾರ ನೀಡಲಾಗುವುದಿಲ್ಲ ಎಂದು ನೋಟೀಸ್‍ನಲ್ಲಿ ತಿಳಿಸಲಾಗಿದೆ.

ಪ್ರವಾಹ ಸಂತ್ರಸ್ತರ ಹೆಸರಿನಲ್ಲಿ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಪರಿಹಾರ ಪಡೆದಿರುವ ಪ್ರಕರಣಗಳು ಕಂಡುಬಂದಿವೆ ಎಂದು ಸ್ಥಳೀಯರು ದೂರಿದ್ದು ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಿದೆ ಎಂದು ಪತ್ರಿಕೆ ಮೂಲಕ ಕೋರಿದ್ದಾರೆ.