ಸೋಮವಾರಪೇಟೆ, ಜೂ. 3: ತಾಲೂಕಿನ ಯಡವನಾಡು ಪ್ರದೇಶದಲ್ಲಿ ಕಾಡಾನೆಗಳ ಕಾಟದಿಂದ ಕೃಷಿಕರು ಬೇಸತ್ತಿದ್ದು, ಗಜಪಡೆಯ ಕಂಟಕದಿಂದ ಮುಕ್ತಿ ನೀಡಿ ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.ಯಡವನಾಡು ಮೀಸಲು ಅರಣ್ಯಕ್ಕೆ ಒತ್ತಿಕೊಂಡಂತೆ ಇರುವ ಜನವಸತಿ ಹಾಗೂ ಕೃಷಿ ಪ್ರದೇಶಕ್ಕೆ ಕಾಡಾನೆಗಳು ನಿರಂತರವಾಗಿ ಲಗ್ಗೆಯಿಡುತ್ತಿದ್ದು, ಪ್ರತಿ ವರ್ಷ ಈ ಭಾಗದ ಕೃಷಿಕರು ಕೃಷಿ ಫಸಲು ನಷ್ಟ ಅನುಭವಿಸುವಂತಾಗಿದೆ.ನಿನ್ನೆ ರಾತ್ರಿ ಯಡವನಾಡು ಗ್ರಾಮದ ಯು.ಕೆ. ಸುನಿಲ್ ಅವರಿಗೆ ಸೇರಿದ ಶುಂಠಿ ಕೃಷಿ ಪ್ರದೇಶಕ್ಕೆ ಧಾಳಿಯಿಟ್ಟಿರುವ ಕಾಡಾನೆಗಳು, 1 ಏಕರೆಯಲ್ಲಿ ಕೈಗೊಂಡಿದ್ದ ಶುಂಠಿಕೃಷಿಯನ್ನು ನಷ್ಟಗೊಳಿಸಿವೆ. ಕಷ್ಟಪಟ್ಟು ಮಾಡಿದ್ದ ಕೃಷಿ ಕಾಡಾನೆಗಳ ಕಾಲಡಿಗೆ ಸಿಲುಕಿ ನಾಶಗೊಂಡಿದ್ದು, ಭಾರೀ ನಷ್ಟ ಅನುಭವಿಸುವಂತಾಗಿದೆ ಎಂದು ಸುನಿಲ್ ಅವರು ಅಳಲು ತೋಡಿಕೊಂಡಿದ್ದಾರೆ.(ಮೊದಲ ಪುಟದಿಂದ) ಇದೇ ಗ್ರಾಮದ ಹರೀಶ್ ಅವರಿಗೆ ಸೇರಿದ ಕ್ಯಾನೆ ಗೆಣಸು ಕೃಷಿಯೂ ಕಾಡಾನೆಗಳಿಗೆ ಆಹಾರವಾಗಿದ್ದು, ಸುಮಾರು 2 ಏಕರೆಯಲ್ಲಿ ಬೆಳೆದಿದ್ದ ಕ್ಯಾನೆಗೆಣಸನ್ನು ಕಾಡಾನೆಗಳು ನಾಶಗೊಳಿಸಿವೆ. ನಿನ್ನೆ ರಾತ್ರಿ 6 ಆನೆಗಳನ್ನು ಒಳಗೊಂಡ ಹಿಂಡು ಶುಂಠಿ ಮತ್ತು ಕ್ಯಾನೆ ಗೆಣಸು ಪ್ರದೇಶಕ್ಕೆ ಲಗ್ಗಯಿಟ್ಟು ಮನಸೋಯಿಚ್ಛೆ ಓಡಾಡಿರುವದರಿಂದ ಸುಮಾರು 2ಲಕ್ಷ ಮೌಲ್ಯದ ಕೃಷಿ ನಾಶವಾಗಿದೆ ಎಂದು ಹರೀಶ್ ಅವರು ನೊಂದು ನುಡಿದಿದ್ದಾರೆ.

ಇದರೊಂದಿಗೆ ಕೃಷಿ ಪ್ರದೇಶಕ್ಕೆ ಅಳವಡಿಸಿದ್ದ ನೀರಿನ ಸಂಪರ್ಕದ ಪೈಪ್‍ಗಳೂ ಸಹ ನಷ್ಟಗೊಂಡಿದ್ದು, ಕಾಡಾನೆಗಳ ಕಾಟದಿಂದ ಕೃಷಿ ಯಿಂದಲೇ ಹಿಂದೆ ಸರಿಯು ವಂತಾಗಿದೆ. ಅರಣ್ಯ ಇಲಾಖೆಯವರು ಆನೆ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳದ ಹೊರತು ಈ ಭಾಗದ ಕೃಷಿಕರಿಗೆ ನೆಮ್ಮದಿ ದೊರಕುವದಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಆನೆ ಕಂದಕ, ಸೋಲಾರ್ ಬೇಲಿ ಕಾಮಗಾರಿಗಳು ನೆಪಮಾತ್ರಕ್ಕೆ ಇರುವಂತಿದೆ. ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ಸೋಲಾರ್ ಬೇಲಿ ನಿರ್ಮಾಣ, ಆನೆ ಕಂದಕ ಕಾಮಗಾರಿಗೆ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿ ದ್ದರೂ ಕಾಡಾನೆಗಳಿಂದ ಕೃಷಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿಗಳಿಂದ ಕೃಷಿಕರಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ಗ್ರಾಮದ ರವಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಭಾಗದಲ್ಲಿ 6 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಮನಸೋ ಯಿಚ್ಛೆ ಧಾಳಿ ನಡೆಸುತ್ತಿವೆ. ಇವುಗಳಿಂದ ಜೀವ ಉಳಿಸಿಕೊಳ್ಳುವದರ ಜತೆಗೆ ಕೃಷಿ ಫಸಲನ್ನು ಉಳಿಸಿಕೊಳ್ಳಲು ಹೆಣಗಾಡುವಂತಾಗಿದೆ. ಪ್ರತಿ ಬಾರಿ ಕಾಡಾನೆ ಧಾಳಿ ನಡೆದ ಸಂದರ್ಭ ಸ್ಥಳೀಯ ಗಾರ್ಡ್ ಮಾತ್ರ ಆಗಮಿಸಿ, ಸ್ಥಳ ಪರಿಶೀಲಿಸಿ ಹಿಂತೆರಳುತ್ತಾರೆ. ಇಲಾಖೆಯ ಮೇಲಧಿಕಾರಿಗಳು ಮಾತ್ರ ಈವರೆಗೆ ಆಗಮಿಸಿ, ಸಮಸ್ಯೆಯನ್ನು ಆಲಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡವನಾಡು ಮೀಸಲು ಅರಣ್ಯಕ್ಕೆ ಒತ್ತಿಕೊಂಡಂತೆ ಇರುವ ಕೃಷಿ ಭೂಮಿಯಲ್ಲಿ ಕೆಸ, ಸಿಹಿಗೆಣಸು, ಮರಗೆಣಸು, ಅಡಿಕೆ, ಕ್ಯಾನೆ, ಶುಂಠಿ, ಕಾಫಿ, ಜೋಳ ಬೆಳೆಯಲಾಗುತ್ತಿದ್ದು, ಪ್ರತಿ ವರ್ಷ ಕಾಡಾನೆಗಳಿಂದ ಕೃಷಿಯನ್ನು ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ.

ಕಳೆದ 2 ತಿಂಗಳ ಹಿಂದೆ ಕೈಗೊಂಡಿದ್ದ ಶುಂಠಿ ಹಾಗೂ ಕ್ಯಾನೆ ಗೆಣಸು ಫಸಲು ಸಂಪೂರ್ಣ ನಾಶವಾಗಿದ್ದು, ಅರಣ್ಯ ಇಲಾಖೆ ಯಿಂದ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಬೇಕು. ಇದರೊಂದಿಗೆ ಕಾಡಾನೆಗಳ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಯಡವನಾಡು ಗ್ರಾಮಸ್ಥರು ಆಗ್ರಹಿಸಿದ್ದಾರೆ. -ವಿಜಯ್