ಮಡಿಕೇರಿ, ಜೂ. 2: ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಆರಂಭಗೊಂಡ ಬಳಿಕ ಖಾಸಗಿ ಬಸ್‍ಗಳ ಸಂಚಾರ ಆರಂಭಿಸುವ ಬಗ್ಗೆ ಖಾಸಗಿ ಬಸ್ ಮಾಲೀಕರುಗಳ ಸಂಘದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.ಲಾಕ್‍ಡೌನ್ ಸಡಿಲಿಕೆಯಾಗುತ್ತಿ ರುವ ಹಿನ್ನೆಲೆಯಲ್ಲಿ ಖಾಸಗಿ ಬಸ್‍ಗಳ ಸಂಚಾರ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಂಬಂಧ ಇಂದು ತುಮಕೂರಿನಲ್ಲಿ ಖಾಸಗಿ ಬಸ್ ಮಾಲೀಕರುಗಳ ಸಂಘದ ಸಭೆ ನಡೆಯಿತು. ಒಟ್ಟು 14 ಜಿಲ್ಲೆಯ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಸರಕಾರ ಶಾಲಾ-ಕಾಲೇಜು ಗಳನ್ನು ತೆರೆದ ಬಳಿಕ ಬಸ್ ಸಂಚಾರ ಆರಂಭಿಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗ ಬಾರದೆಂಬ ಉದ್ದೇಶದೊಂದಿಗೆ ಈ ಬಗ್ಗೆ ನಿರ್ಧಾರ ತಳೆಯಲಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕೊಡಗು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ತಿಳಿಸಿದ್ದಾರೆ.ಬಸ್‍ಗಳ ಮೇಲಿನ ತೆರಿಗೆ ವಿನಾಯ್ತಿ ನೀಡುವಂತೆ ಮನವಿ ಮಾಡಿಕೊಂಡಿದ್ದ ಮೇರೆಗೆ ಸರಕಾರ ಈಗಾಗಲೇ 2 ತಿಂಗಳ ವಿನಾಯ್ತಿ ನೀಡಿದೆ. ಆದರೆ ಸಂಘದ ಮೂಲಕ 6 ತಿಂಗಳ ವಿನಾಯ್ತಿ ಕೋರಲಾಗಿದೆ.

(ಮೊದಲ ಪುಟದಿಂದ) ಈ ಸಂಬಂಧ ಮತ್ತೊಂದು ಸುತ್ತಿನ ಸಭೆ ನಡೆಸಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿ ಸಲಾಗಿದೆ ಎಂದು ಅವರು ತಿಳಿಸಿದರು.

ಈಗಾಗಲೇ ಬಹುತೇಕ ಬಸ್ ಮಾಲೀಕರು ತಮ್ಮ ಬಸ್‍ಗಳನ್ನು ಆರ್‍ಟಿಓ ಇಲಾಖೆಯಲ್ಲಿ ಶರಣಾಗತಿ ಮಾಡಿದ್ದಾರೆ. ಶರಣಾಗತಿ ಮಾಡದ ಬಸ್‍ಗಳನ್ನು ಓಡಿಸಲು ಕೆಲವು ಮಾಲೀಕರು ಮುಂದಾಗಿದ್ದಾರೆ. ಮುಂದಿನ ಒಂದು ವಾರದೊಳಗೆ ಕೊಡಗು ಜಿಲ್ಲೆಯೊಳಗಡೆ, ಗ್ರಾಮೀಣ ಪ್ರದೇಶಗಳನ್ನು ನೋಡಿಕೊಂಡು ಕೆಲವು ಬಸ್‍ಗಳು ಸಂಚಾರ ಆರಂಭಿಸಲಿವೆ ಎಂದು ರಮೇಶ್ ಹೇಳಿದರು. ಯಾವುದಕ್ಕೂ ತಾ. 8ರ ಬಳಿಕ ಲಾಕ್‍ಡೌನ್ ನಿಯಮಗಳ ಮೇಲೆ ಒಟ್ಟಾರೆ ತೀರ್ಮಾನವಾಗಲಿದೆ ಎಂದು ತಿಳಿಸಿದರು.