ಮಡಿಕೇರಿ, ಜೂ. 2: ಜಿಲ್ಲೆಯ ಏಕೈಕ ನಗರಸಭೆ ಹಾಗೂ ಕೊಡಗು ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿ ನಗರದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ತರ ಬದಲಾವಣೆಗಳು ನಡೆಯಲಿವೆ. ಹತ್ತು - ಹಲವು ಸಮಸ್ಯೆಗಳ ನಡುವೆ ಜಿಲ್ಲಾ ಕೇಂದ್ರದಲ್ಲಿ ಪೊಲೀಸ್ ಅಧಿಕಾರಿಗಳು - ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುವ ಕಾರಣದಿಂದಾಗಿ ಇಲಾಖಾ ವ್ಯವಸ್ಥೆ ಹಾಗೂ ಈ ರಕ್ಷಕರ ರಕ್ಷಣೆ - ಸೌಲಭ್ಯಗಳತ್ತಲೂ ಚಿಂತನೆ ನಡೆದಿದ್ದು, ಈ ಪ್ರಯತ್ನಗಳು ತ್ವರಿತಗತಿಯಲ್ಲಿ ಸಾಗಿವೆ. ಈಗಿರುವ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿದ್ದು, ಸಮಸ್ಯೆಗಳ ಸರಿಪಡಿಸುವಿಕೆಯೊಂದಿಗೆ ಸಿಬ್ಬಂದಿಗಳ ಕಷ್ಟ- ಕಾರ್ಪಣ್ಯದತ್ತಲೂ ಗಮನಹರಿಸಿದ್ದಾರೆ.ನಗರದ ಕೊಡವ ಸಮಾಜದ ಬಳಿ ಹೃದಯಭಾಗದಲ್ಲಿರುವ ಹಳೆಯ ಕಾಲದ ನಗರ ಪೊಲೀಸ್ ಠಾಣೆ ಹಾಗೂ ಕೆಲವು ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ಮಹಿಳಾ ಪೊಲೀಸ್ ಠಾಣೆಯ ಕಟ್ಟಡ (ಈ ಹಿಂದಿನ ಸಂಚಾರಿ ಠಾಣೆ) ದುಸ್ಥಿತಿಯಲ್ಲಿದ್ದು, ಅಪಾಯಕಾರಿ ಹಂತದಲ್ಲಿವೆ. ಕಳೆದೆರಡು ವರ್ಷಗಳ ಮಳೆಗಾಲದಿಂದ ಇವು ಇನ್ನಷ್ಟು ಹಾನಿಗೀಡಾಗಿದ್ದು, ಹಿಂಭಾಗದ ಸ್ಥಳ ಕುಸಿಯುವ ಸ್ಥಿತಿಗೆ ತಲುಪಿವೆ. ಈ ಹಿನ್ನೆಲೆಯಲ್ಲಿ ನಗರಠಾಣೆಯನ್ನು ಹಾಗೂ ಮಹಿಳಾ ಠಾಣೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತಿದೆ. ನಗರ ಠಾಣೆಯನ್ನು ಈ ಹಿಂದಿನ ಡಿ.ವೈ.ಎಸ್ಪಿ. ಕಚೇರಿಯಲ್ಲಿದ್ದ ಕಟ್ಟಡಕ್ಕೆ ಹಾಗೂ ಮಹಿಳಾ ಠಾಣೆಯನ್ನು ಮೈತ್ರಿ ಹಿಂಭಾಗದಲ್ಲಿ ಬರುವ ಸುಬ್ರಹ್ಮಣ್ಯ ನಗರ ವ್ಯಾಪ್ತಿಯ ಖಾಲಿಯಾಗಿರುವ ಅಧಿಕಾರಿಯೊಬ್ಬರ ವಸತಿಗೃಹಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಈ ಕಟ್ಟಡಗಳನ್ನು ಸಮರ್ಪಕಗೊಳಿಸುವ ಕೆಲಸ ಭರದಿಂದ ಸಾಗಿದೆ. ಮಳೆಯ ಪರಿಸ್ಥಿತಿಯನ್ನು ಅವಲೋಕಿಸಿ ಈ ಮಾಸಾಂತ್ಯದೊಳಗೆ ಎರಡು ಠಾಣೆಗಳ ಸ್ಥಳಾಂತರ ಮಾಡಲಾಗುವುದು. ಆದರೆ ಇದು ಶಾಶ್ವತ ವ್ಯವಸ್ಥೆಯಲ್ಲ. ಈಗಿರುವ ಸ್ಥಳ ಮಡಿಕೇರಿ ನಗರಕ್ಕೆ ಪ್ರಶಸ್ತವಾಗಿರುವುದರಿಂದ ಹಾಲಿ ಕಟ್ಟಡವನ್ನು ನವೀಕರಿಸಿ ಮುಂದಿನ ದಿನಗಳಲ್ಲಿ ಮರು ಸ್ಥಳಾಂತರ ಮಾಡಲಾಗುವುದು ಎಂದು ಎಸ್ಪಿ ಡಾ. ಸುಮನ್ ‘ಶಕ್ತಿ’ಗೆ ತಿಳಿಸಿದರು. ಇದಕ್ಕೆ ಆಡಳಿತಾತ್ಮಕ ಅನುಮೋದನೆಯಾಗಿದ್ದು, ಅನುದಾನ ಇನ್ನಷ್ಟೆ ಬಿಡುಗಡೆಯಾಗಬೇಕಿದೆ.
ವಸತಿಗೃಹಕ್ಕೆ ವ್ಯವಸ್ಥೆ
ಸುಬ್ರಹ್ಮಣ್ಯ ನಗರ, ಓಲ್ಡ್ ರೈಫಲ್ ರೇಂಜ್ ಪ್ರದೇಶದಲ್ಲಿ ಸುಮಾರು 150-200 ಪೊಲೀಸ್ ಕುಟುಂಬಗಳಿಗೆ ವಸತಿಗೃಹಗಳನ್ನು ನಿರ್ಮಿಸಲಾಗಿದ್ದು, ಬಹುತೇಕ ಎಲ್ಲವನ್ನೂ ನೀಡಲಾಗಿದೆ. ಆದರೆ ಇಲ್ಲಿ ಅಗತ್ಯ ವ್ಯವಸ್ಥೆಗಳು ಇಲ್ಲದೆ ಸಮಸ್ಯೆ ಮುಂದುವರಿದಿರುವುದರಿಂದ, ಕಾಂಕ್ರೀಟ್ ರಸ್ತೆ, ಚರಂಡಿ ಸೇರಿದಂತೆ ಬೃಹತ್ ತಡೆಗೋಡೆಯನ್ನು ನಿರ್ಮಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ಸಂಘದ ಮೂಲಕ ‘ಗೃಹ-2020’ ಯೋಜನೆಯಂತೆ ವಸತಿಗೃಹ ನಿರ್ಮಾಣವಾಗಿದೆ. ಮಡಿಕೇರಿಯೂ ಸೇರಿದಂತೆ ಸೋಮವಾರಪೇಟೆ, ಸುಂಟಿಕೊಪ್ಪ ಹಾಗೂ ಕುಟ್ಟದಲ್ಲಿ ರೂ. 10 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.
ಮಡಿಕೇರಿಯಲ್ಲಿ ಬೃಹತ್ ಬರೆಯಂತಹ ಸ್ಥಳ ಇರುವುದರಿಂದ ಇಲ್ಲಿ ಇದೀಗ ಸಮರ್ಪಕವಾದ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆಯೊಂದಿಗೆ ಬೃಹತ್ ಎತ್ತರದ ಸುಭದ್ರ ತಡೆಗೋಡೆ ನಿರ್ಮಾಣವಾಗುತ್ತಿದೆ. ಈ ವೇಳೆಗೆ ಸಾಕಷ್ಟು ಕೆಲಸ ಪೂರ್ಣಗೊಳ್ಳಬೇಕಿತ್ತಾದರೂ ಕೋವಿಡ್ -19ರ ಪರಿಸ್ಥಿತಿಯಿಂದಾಗಿ ವಿಳಂಬವಾಗಿದೆ. ಪ್ರಸ್ತುತ ತ್ವರಿತ ಕೆಲಸ ನಿರ್ವಹಿಸಲಾಗುತ್ತಿದೆ. ಈ ಪ್ರದೇಶಕ್ಕೆ ಎಸ್ಪಿ ಭೇಟಿ ನೀಡಿ ಕಾಮಗಾರಿಗಳ ಪ್ರಗತಿಯ ಕುರಿತು ಪರಿಶೀಲನೆ ನಡೆಸಿದರು.