ಸೋಮವಾರಪೇಟೆ, ಜೂ. 2: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದಲ್ಲಿ ಕಾಲಿನ ಮಂಡಿ ಚಿಪ್ಪಿನ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ ಫಲವಾಗಿ, ಇಂದು ಬಾಲಕ ತನ್ನ ಕಾಲನ್ನು ಉಳಿಸಿಕೊಂಡಿದ್ದಾನೆ.

ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಮನೆಯ ಮುಂಭಾಗ ಕೆಳಬಿದ್ದು ಕಾಲಿನ ಮಂಡಿಚಿಪ್ಪಿಗೆ ಪೆಟ್ಟು ಮಾಡಿಕೊಂಡು ಹಾಸಿಗೆ ಹಿಡಿದಿದ್ದ ಬಾಲಕ, ಈತನ ಸ್ಥಿತಿಗೆ ಮರುಗುತ್ತಿದ್ದ ತಂದೆಯ ಬಗ್ಗೆ ಮೇ 15ರ ‘ಶಕ್ತಿ’ಯಲ್ಲಿ ವರದಿ ಪ್ರಕಟವಾದ ತಕ್ಷಣಕ್ಕೆ ಸ್ಪಂದಿಸಿದ ಜಿ.ಪಂ. ಅಧ್ಯಕ್ಷರಾದಿಯಾಗಿ ಇತರ ಜನಪ್ರತಿನಿಧಿಗಳು, ವೈದ್ಯರ ತಂಡ ಕುಂಬಾರಗಡಿಗೆಗೆ ತೆರಳಿ ಬಾಲಕನ ನೆರವಿಗೆ ಸಮಯೋಚಿತ ಭರವಸೆ ನೀಡಿತ್ತು.

ಜಿ.ಪಂ. ಅಧ್ಯಕ್ಷ ಹರೀಶ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಕೆ. ಬೋಪಣ್ಣ, ಬಾನಂಡ ಪ್ರಥ್ಯು, ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ, ವೈದ್ಯರಾದ ಬಿ.ಸಿ. ನವೀನ್ ಅವರು ಗಳು ಕುಂಬಾರಗಡಿಗೆಯ ಪೆಮ್ಮಯ್ಯ ಅವರ ಮನೆಗೆ ಭೇಟಿ ನೀಡಿ, ಅವರ ಪುತ್ರ, ಪೊನ್ನಂಪೇಟೆ ಸಾಯಿಶಂಕರ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ದಿಲನ್‍ನ ಯೋಗಕ್ಷೇಮ ವಿಚಾರಿಸಿದ್ದರು.

ಈ ಸಂದರ್ಭ ಬಾಲಕನ ಮಂಡಿಚಿಪ್ಪಿಗೆ ಹಾನಿಯಾಗಿದ್ದು, ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇರುವ ಬಗ್ಗೆ ಡಾ. ನವೀನ್ ಅವರು ಅಭಿಪ್ರಾಯಿಸಿ, ಮಂಗಳೂರು ಅಥವಾ ಮೈಸೂರಿಗೆ ಸಾಗಿಸಿ ಚಿಕಿತ್ಸೆ ನೀಡಬೇಕೆಂದು ತಿಳಿಸಿದ್ದರು.

ಆದರೆ ಬೆಂಗಳೂರಿನ ಹೊಟೇಲ್ ವೊಂದರಲ್ಲಿ ಕೆಲಸಕ್ಕಿದ್ದ ಪೆಮ್ಮಯ್ಯ ಅವರು ಕೊರೊನಾ ಲಾಕ್‍ಡೌನ್ ನಿಂದಾಗಿ ಊರಿಗೆ ಆಗಮಿಸಿದ್ದು, ಸಂಪಾದನೆಯಿಲ್ಲದೇ ಜೀವನ ಸಾಗಿಸುವದೇ ಕಷ್ಟಸಾಧ್ಯವಾಗಿದ್ದ ಪರಿಸ್ಥಿತಿಯನ್ನು ಪ್ರಮುಖರೆದುರು ತೋಡಿಕೊಂಡರು.

ಮೈಸೂರು ಅಥವಾ ಮಂಗಳೂರಿಗೆ ಹೋಗಿ ಚಿಕಿತ್ಸೆ ಕೊಡಿಸಬೇಕಾದರೆ ಕನಿಷ್ಟ 40 ರಿಂದ 50 ಸಾವಿರ ಖರ್ಚು ಆಗಲಿದೆ. ಕಳೆದ ಎರಡು ತಿಂಗಳಿನಿಂದ ಬಿಡಿಗಾಸೂ ಇಲ್ಲದೇ ಸಂಕಷ್ಟದಲ್ಲೇ ಜೀವನ ಸಾಗಿಸುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ಮಗನಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ನೊಂದು ನುಡಿದಿದ್ದರು. ಇದಕ್ಕೆ ಪ್ರಮುಖರ ಮನವೂ ಕರಗಿತು. ಬಾಲಕನ ಚಿಕಿತ್ಸೆಗೆ ಸೂಕ್ತ ಸ್ಪಂದನ ನೀಡುವ ಬಗ್ಗೆ ಸಿ.ಕೆ. ಬೋಪಣ್ಣ ಅವರು ಭರವಸೆ ನೀಡಿದ್ದರು.

ಇದಾದ ನಂತರ ಮಂಗಳೂರಿನ ವೈದ್ಯರಾದ ಶಾಂತರಾಮಶೆಟ್ಟಿ ಅವರನ್ನು ರೋಟರಿ ಪದಾಧಿಕಾರಿ ಗಳ ಮೂಲಕ ಸಂಪರ್ಕಿಸಿ, ಬಾಲಕನ ಪರಿಸ್ಥಿತಿಯನ್ನು ವಿವರಿಸಿದ್ದರು. ಡಾ. ಶಾಂತರಾಮಶೆಟ್ಟಿ ಅವರ ಸೂಚನೆ ಮೇರೆ ಮೇ 25ರಂದು ಆಸ್ಪತ್ರೆಗೆ ತೆರಳಿದ್ದು, ತಾ. 26ರಂದು ದಿಲನ್‍ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.

ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಬಾಲಕ ದಿಲನ್ ಮೇ 30ರಂದು ಕುಂಬಾರಗಡಿಗೆಯ ಮನೆಗೆ ಆಗಮಿಸಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ. ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅವರು ಸ್ವತಃ ತಮ್ಮ ಕಾರಿನಲ್ಲಿ ಮೇ 25 ರಂದು ಕುಂಬಾರಗಡಿಗೆಗೆ ತೆರಳಿ ಬಾಲಕನನ್ನು ಮಡಿಕೇರಿಗೆ ಸಾಗಿಸಿ, ಮಂಗಳೂರಿಗೆ ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯಲು ವ್ಯವಸ್ಥೆ ಕಲ್ಪಿಸಿದ್ದರು. ರೋಟರಿ ಸದಸ್ಯರು ಬಾಲಕನ ಶಸ್ತ್ರ ಚಿಕಿತ್ಸೆಯ ಖರ್ಚುವೆಚ್ಚ ಭರಿಸುವ ಮೂಲಕ ಮಾನವೀಯತೆ ಮೆರೆದರು.

ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ದರಿಂದ ಬಾಲಕನ ಕಾಲು ಉಳಿಯಿತು. ಕೆಲವಾರು ದಿನ ಹಾಗೆಯೇ ಬಿಟ್ಟಿದ್ದರೆ ಹಾನಿಯಾಗಿದ್ದ ಮಂಡಿ ಚಿಪ್ಪಿನ ಭಾಗ ಗ್ಯಾಂಗ್ರಿನ್‍ಗೆ ಒಳಗಾಗಿ ಭವಿಷ್ಯದಲ್ಲಿ ಕಾಲನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಗುತ್ತಿತ್ತು ಎಂದು ಚಿಕಿತ್ಸೆ ನೀಡಿದ ವೈದ್ಯರಾದ ಡಾ. ಶಾಂತಾರಾಮ ಶೆಟ್ಟಿ ಅವರು ಅಭಿಪ್ರಾಯಿಸಿದ್ದು, ಸೂಕ್ತ ಸಮಯದಲ್ಲಿ ಬಾಲಕನನ್ನು ಕರೆತಂದ ತಂಡವನ್ನು ಶ್ಲಾಘಿಸಿದರು.

‘ನನ್ನ ಮಗನ ಕಾಲನ್ನು ಉಳಿಸಿ ಕೊಟ್ಟ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಜೀವ ಇರುವವರೆಗೂ ಇವರುಗಳ ನೆರವನ್ನು ಮರೆಯುವ ದಿಲ್ಲ’ ಎಂದು ಬಾಲಕನ ತಂದೆ ಪೆಮ್ಮಯ್ಯ ಅವರು ಹೇಳುವಾಗ ಧ್ವನಿ ಗದ್ಗದಿತಗೊಂಡಿತು.

- ವಿಜಯ್ ಹಾನಗಲ್