ಮಡಿಕೇರಿ, ಜೂ. 2: 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾದವರಿಗೆ ಸರಕಾರದ ವತಿಯಿಂದ ಸೂರು ಒದಗಿಸುವ ಕಾರ್ಯ ಕಳೆದೆರಡು ವರ್ಷಗಳಿಂದ ಕುಂಟುತ್ತಾ ಸಾಗಿ ಇನ್ನೇನು ಮನೆಗಳ ಹಸ್ತಾಂತರ ಆಗಬೇಕೆನ್ನುವಷ್ಟರಲ್ಲಿ ಅಲ್ಲಲ್ಲಿ ಅಪಸ್ವರಗಳು, ಅಡೆತಡೆಗಳು ಕಂಡುಬರಲಾಂಭಿಸಿವೆ.ಜಂಬೂರಿನಲ್ಲಿ ನಿರ್ಮಾಣವಾದ ಮನೆಗಳು ಕಳಪೆಯಾಗಿವೆ ಎಂಬ ಆರೋಪಗಳು ಕೇಳಿಬಂದರೆ, ಇತ್ತ ಮದೆ ಗ್ರಾ.ಪಂ. ವ್ಯಾಪ್ತಿಯ ಗೋಳಿಕಟ್ಟೆಯಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ (ಮೊದಲ ಪುಟದಿಂದ) ತೆರಳಲು ಸರಿಯಾದ ರಸ್ತೆ, ಚರಂಡಿ ವ್ಯವಸ್ಥೆಗಳಿಲ್ಲ ಎಂಬ ಕೂಗು ಕೇಳತೊಡಗಿದೆ.ಇಂದು ದಿಢೀರನೆ ಸಂಘಟಿತ ರಾದ ಆ ವಿಭಾಗದ ಗ್ರಾಮಸ್ಥರು ಅವ್ಯವಸ್ಥೆ ಬಗ್ಗೆ ಅಸಮಾಧಾನ ದೊಂದಿಗೆ ಹೊಂಡ ಬಿದ್ದ ರಸ್ತೆಯಲ್ಲಿ ಬಾಳೆಗಿಡಗಳನ್ನು ನೆಟ್ಟು ಪ್ರತಿಭಟಿಸಿದ ಪ್ರಸಂಗ ಎದುರಾಯಿತು.
ಗೋಳಿಕಟ್ಟೆ ವ್ಯಾಪ್ತಿಯಲ್ಲಿ 170 ಮನೆಗಳನ್ನು ಸಂತ್ರಸ್ತರಿಗಾಗಿ ನಿರ್ಮಾಣ ಮಾಡಲಾಗಿದೆ. ಗ್ರಾಮಸ್ಥರು ಹಿಂದಿನಿಂದಲೂ ಗೋಮಾಳ, ಊರುಡುವೆ ಎಂದು ಉಳಿಸಿಕೊಂಡು ಬಂದಿದ್ದ ಜಾಗವನ್ನು ಮಾನವೀಯ ದೃಷ್ಟಿಯಿಂದ ಸಂತ್ರಸ್ತರಿಗಾಗಿ ಬಿಟ್ಟು ಕೊಡಲಾಗಿದೆ. ಈ ಗ್ರಾಮಕ್ಕೆ ತೆರಳಲು ಕಡಿದಾದ ಮಾರ್ಗವಿದ್ದು, ಇದನ್ನು ಸರಿಪಡಿಸದೆ ಇದೀಗ ಮನೆಗಳ ಹಸ್ತಾಂತರಕ್ಕೆ ತಯಾರಿ ನಡೆಯುತ್ತಿದೆ. ರಸ್ತೆ ಸಂಪೂರ್ಣ ಹಾಳಾಗಿದ್ದು, ಚರಂಡಿಗಳೇ ಇಲ್ಲವಾಗಿವೆ. ಇದರಿಂದಾಗಿ ಗ್ರಾಮಸ್ಥರಿಗೆ ತೀರಾ ಸಮಸ್ಯೆಯುಂಟಾಗುತ್ತಿದೆ ಎಂದು ಸ್ಥಳದಲ್ಲಿದ್ದ ಗ್ರಾಮಸ್ಥರು ಆರೋಪಿಸಿದರು.
ಸಂತ್ರಸ್ತರ ಮನೆಗಳಿರುವ ಜಾಗದಲ್ಲಿ ನಿರ್ಮಿಸಲಾಗಿರುವ ಚರಂಡಿಗಳ ನೀರು ಹರಿಯಲು ಸರಿಯಾದ ವ್ಯವಸ್ಥೆ ಮಾಡದೆ ಕೆಳ ಭಾಗಕ್ಕೆ ಬಿಡಲಾಗಿದೆ. ಈ ನೀರು ಕೆಳಗಿನ ಭಾಗದಲ್ಲಿ ನೆಲೆಸಿರುವ ಗ್ರಾಮಸ್ಥರ ಮನೆ ಹಾಗೂ ಗದ್ದೆ ಭಾಗಗಳಿಗೆ ಹರಿಯುತ್ತಿದ್ದು, ಸಮಸ್ಯೆ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.
ಇಂದು-ನಾಳೆ ಪ್ರತಿಭಟನೆ
ಹೊಂಡ ಬಿದ್ದ ರಸ್ತೆಗಳಿಗೆ ಬಾಳೆ ಗಿಡಗಳನ್ನು ನೆಟ್ಟು ಪ್ರತಿಭಟಿಸಿದ ಗ್ರಾಮಸ್ಥರು ತಾ. 3 ರಂದು (ಇಂದು) ಬೆಳಿಗ್ಗೆ 10.30 ರಿಂದ 11.30ರ ವರೆಗೆ ಮಡಿಕೇರಿ-ಮಂಗಳೂರು ಹೆದ್ದಾರಿಯ ಕಾಟಕೇರಿ ಜಂಕ್ಷನ್‍ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ತಾ. 4 ರಂದು ಮನೆ ಹಸ್ತಾಂತರ ಮಾಡಲು ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ರಮಕ್ಕೆ ತಡೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.