ಮಡಿಕೇರಿ, ಜೂ. 2: ಮಳೆಗಾಲದ ಸಂದರ್ಭ ಕೊಡಗಿನಲ್ಲಿ ಭೂಕುಸಿತ, ಜಲಪ್ರಳಯದಂತಹ ವಿಪತ್ತುಗಳು ಎದುರಾದರೆ ಅವುಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಇಂದು ಕೊಡಗಿಗೆ ಬಂದಿಳಿದಿದೆ.ಆಂಧ್ರ ರಾಜ್ಯದ ಗುಂಟೂರಿನಿಂದ ಆಗಮಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಹತ್ತನೇ ಬೆಟಾಲಿಯನ್‍ನಲ್ಲಿ 25 ಮಂದಿ ಇಂದು ಬಂದಿದ್ದು, ತಂಡದ ಕಮಾಂಡೆಂಟ್ ಆರ್.ಕೆ. ಉಪಾಧ್ಯಾಯ ಅವರ ನೇತೃತ್ವದಲ್ಲಿ ಮೈತ್ರಿ ಹಾಲ್‍ನಲ್ಲಿ ತಂಗಲಿದೆ. ಮಧ್ಯಾಹ್ನದ ವೇಳೆ ಆಗಮಿಸಿದ ಪಡೆಯನ್ನು ಜಿಲ್ಲಾ ವಿಪತ್ತು ನಿರ್ವಹಣಾ ಘಟಕ ಅಧಿಕಾರಿ ಅನನ್ಯ ವಾಸುದೇವ್ ಬರಮಾಡಿಕೊಂಡರು.ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪ ಈ ಬಾರಿಯೂ ಮರುಕಳಿಸಬಹುದಾದ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಇಂದು ಆಗಮಿಸಿದ್ದು, ಅಗತ್ಯ ಸಾಮಗ್ರಿಗಳ ನ್ನೊಳಗೊಂಡಿದೆ. ಇಂಫಾನ್ ಚಂಡಮಾರುತ ಕಾರ್ಯ ಮುಗಿಸಿ ಕೊಡಗಿಗೆ ಬಂದಿದೆ.

ಸುದ್ದಿಗಾರರೊಂದಿಗೆ ಮಾತ ನಾಡಿದ ಕಮಾಂಡೆಂಟ್ ಉಪಾಧ್ಯಾಯ (ಮೊದಲ ಪುಟದಿಂದ) ಅವರು, ಪ್ರಾಕೃತಿಕ ವಿಕೋಪ ಸಂದರ್ಭ ರಕ್ಷಣಾ ಕಾರ್ಯಕ್ಕಾಗಿ ಎನ್‍ಡಿಆರ್‍ಎಫ್ ತಂಡ ಸಿದ್ಧವಿದ್ದು, ವಿಪತ್ತು ಎದುರಾದ ಸಂದರ್ಭ ರಸ್ತೆ ಸಂಪರ್ಕ ಕಡಿತಗೊಳ್ಳುವದರಿಂದ ತುರ್ತಾಗಿ ಆಗಮಿಸಲು ಕಷ್ಟವಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಳೆ ಆರಂಭವಾಗುವ ಮುನ್ನವೇ ಜಿಲ್ಲೆಗೆ ಬರಲಾಗಿದೆ ಎಂದು ಮಾಹಿತಿಯಿತ್ತರು. ಎರಡನೇ ಬಾರಿಗೆ ನಮ್ಮ ತಂಡ ಕೊಡಗಿಗೆ ಆಗಮಿಸುತ್ತಿದೆ. ಮಳೆಗಾಲದ ಕೊನೆಯವರೆಗೂ ತಂಡ ಜಿಲ್ಲೆಯಲ್ಲಿ ಇರಲಿದೆ ಎಂದರು.