ವೀರಾಜಪೇಟೆ, ಜೂ. 2: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ನೆಹರೂ ನಗರ ವ್ಯಾಪ್ತಿಯ ಏಳನೇ ಬ್ಲಾಕ್ನಲ್ಲಿರುವ ಭಾರೀ ತಡೆಗೋಡೆಯ ಕಾಮಗಾರಿ ಆರಂಭಿಸಲು ಕಲ್ಲು ತೆಗೆದಿರುವ ಪ್ರದೇಶ ಅಪಾಯದ ಅಂಚಿನಲ್ಲಿದ್ದು ಮುಂದಿನ ಮಳೆಗೆ ಕುಸಿಯುವ ಹಂತದಲ್ಲಿದೆ. ಮಣ್ಣಿನ ಕುಸಿತದಿಂದ ತಡೆಗೋಡೆಯ ಕೆಳಗಿರುವ ಮನೆಗಳು ಕುಸಿದು ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇದೆ. ಇದರಿಂದ ಪ್ರಾಣಹಾನಿ ಸಂಭವಿಸಿದರೆ ಇದಕ್ಕೆ ಜಿಲ್ಲಾಧಿಕಾರಿ, ಆಡಳಿತಾಧಿಕಾರಿ, ಮುಖ್ಯಾಧಿಕಾರಿ ನೇರ ಹೊಣೆಯಾಗಲಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಪ್ರಸ್ತುತ ಸಾಲಿನ ಸದಸ್ಯೆಯಾಗಿರುವ ಎಂ.ಕೆ. ದೇಚಮ್ಮ ಆರೋಪಿಸಿದ್ದಾರೆ.
ಕಳೆದ 2019ರ ಆಗಸ್ಟ್ ತಿಂಗಳ 16ರಿಂದ ಸುರಿದ ಭಾರೀ ಮಳೆಗೆ ಈ ತಡೆಗೋಡೆ ಬಿರುಕು ಬಿಟ್ಟಿದ್ದು ಆಗಲೇ ಕುಸಿಯುವ ಹಂತದಲ್ಲಿತ್ತು. ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಜಿಲ್ಲಾಧಿಕಾರಿ ತಡೆಗೋಡೆಯ ಕಲ್ಲುಗಳನ್ನು ತೆಗೆದು ಹೊಸದಾಗಿ ಸುರಕ್ಷಿತವಾದ ತಡೆಗೋಡೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಆದೇಶಿಸಿ ಇದರ ಕಾಮಗಾರಿಗಾಗಿ ಸರಕಾರದಿಂದ ರೂ 46,50,000ವನ್ನು ಮಂಜೂರು ಮಾಡಿ ಹಣ ಬಿಡುಗಡೆಗೊಳಿಸಲಾಗಿತ್ತು. ಮಾರ್ಚ್ ತಿಂಗಳಲ್ಲಿ ಕೊರೊನ ವೈರಸ್ನ ಲಾಕ್ಡೌನ್ ನಿರ್ಬಂಧದಿಂದಾಗಿ ಎರಡು ತಿಂಗಳ ಅವಧಿ ಯವರೆಗೆ ಕಾಮಗಾರಿ ಆರಂಭಿಸಲು ಗುತ್ತಿಗೆದಾರರಿಗೆ ಸಾಧ್ಯವಾಗಲಿಲ್ಲ. ಸರಕಾರದ ಆದೇಶದಂತೆ ಗುತ್ತಿಗೆದಾರರು ಮೇ ತಿಂಗಳಲ್ಲಿ ಹೊಸದಾಗಿ ತಡೆಗೋಡೆ ಕಾಮಗಾರಿಗೆ ಚಾಲನೆ ನೀಡಿ ತಡೆಗೋಡೆಯ ಕಲ್ಲುಗಳನ್ನು ತೆಗೆದು ಕಾಮಗಾರಿ ಪ್ರಾರಂಭಿಸುವ ಸಮಯದಲ್ಲಿ ಈ ಕಾಮಗಾರಿಗೆ ಬಂದ ಹಣವನ್ನು ಸರಕಾರದ ಆರ್ಥಿಕ ಇಲಾಖೆ ಹಿಂತಿರುಗಿ ಪಡೆದಿದೆ. ಗುತ್ತಿಗೆ ಒಪ್ಪಂದದ ಹಣ ಹಿಂತಿರುಗಿರು ವುದರಿಂದ ಗುತ್ತಿಗೆದಾರರು ಕಾಮಗಾರಿ ಮುಂದುವರೆಸಲು ಹಿಂದೇಟು ಹಾಕಿ ಕಾಮಗಾರಿಯನ್ನು 10 ದಿನಗಳ ಹಿಂದೆಯೇ ಸ್ಥಗಿತಗೊಳಿಸಿದ್ದಾರೆ. ಇದರಿಂದ ತಡೆಗೋಡೆಯ ಕೆಳಗಿನ ಸುಮಾರು 36 ಮನೆಗಳ ಕುಟುಂಬಗಳು ಅಪಾಯದ ಅಂಚಿನಲ್ಲಿ ತ್ರಿಶಂಕು ಸ್ಥಿತಿಯನ್ನು ಅನುಭವಿಸುವಂತಾಗಿದೆ ಎಂದು ದೇಚಮ್ಮ ದೂರಿದ್ದಾರೆ.
ಅಪಾಯದ ಅಂಚಿನಲ್ಲಿರುವ ಕುಟುಂಬಗಳು ಈ ಸಂಬಂಧದಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೂ ಮನವಿ ಸಲ್ಲಿಸಿವೆÉ. ಈಗ ಮಣ್ಣಿನ ಬರೆ ಅಪಾಯದ ಅಂಚಿನಲ್ಲಿರುವುದರಿಂದ ತಡೆಗೋಡೆಯ ಕೆಳಗಿರುವ ಮನೆಗಳ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ತಕ್ಷಣ ತಡೆಗೋಡೆಯ ಕಾಮಗಾರಿಯನ್ನು ಮುಂದುವರೆಸಬೇಕು.
ಈ ತುರ್ತು ಕಾಮಗಾರಿಯ ಕುರಿತು ಮಂಜೂರಾದ ಹಣವನ್ನು ಹಿಂತಿರುಗಿಸುವ ತನಕ ನಿರ್ಲಕ್ಷ್ಯ ತಾಳಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ದೇಚಮ್ಮ ಒತ್ತಾಯಿಸಿದ್ದಾರೆ,
ರಾಜ್ಯ ಸರಕಾರದ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಅವರು ಮೇ 4ರಂದು ಸುತ್ತೊಲೆ ಹೊರಡಿಸಿ ಕೊರೊನ ವೈರಸ್ ಲಾಕ್ಡೌನ್ ನಿರ್ಬಂಧದ ಹಿನೆÀ್ನಲೆ ಯಲ್ಲಿ ಮುಂದುವರೆದ ಹಾಗೂ ಹೊಸ ಯೋಜನೆಗಳಿಗೆ ಸಂಬಂಧಿಸಿದಂತೆ ಕಾಮಗಾರಿ ನಿರ್ವಹಿಸದ ಎಲ್ಲ ಆರ್ಥಿಕ ಸಂಪನ್ನೂಲಗಳನ್ನು ಹಿಂದಿರುಗಿಸುವಂತೆ ಆದೇಶಿಸಿದ್ದಾರೆ. ಆದರೆ ಪಟ್ಟಣ ಪಂಚಾಯಿತಿಯ ಈ ತುರ್ತು ಕಾಮಗಾರಿ ನಿರ್ವಹಣೆಯ ಕುರಿತು ಸರಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳ ಗಮನಕ್ಕೆ ತರಲು ಅಧಿಕಾರಿಗಳು ವಿಫಲಗೊಂಡಿರುವುದು ವಿಪರ್ಯಾಸವೆಂದು ದೇಚಮ್ಮ ತಿಳಿಸಿದ್ದಾರೆ.