ಸೋಮವಾರಪೇಟೆ, ಜೂ. 1: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭ ಜೂನ್ 7 ರಂದು ಬೆಂಗಳೂರಿನಲ್ಲಿ ಜರುಗಲಿದ್ದು, ಅಂದು ಸ್ಥಳೀಯವಾಗಿ ಎಲ್ಲಾ ಬೂತ್ ಮಟ್ಟದಲ್ಲೂ ಪದಗ್ರಹಣ ಸಮಾರಂಭ ಆಯೋಜಿಸುವಂತೆ ಕೆಪಿಸಿಸಿ ವೀಕ್ಷಕರಾದ ಮಂಜುಳಾ ರಾಜ್ ಕರೆ ನೀಡಿದರು.

ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಪ್ರತಿಜ್ಞೆ ಸ್ವೀಕರಿಸುವ ಸಂದರ್ಭ ಎಲ್ಲಾ ಕಾಂಗ್ರೆಸಿಗರು, ಅಭಿಮಾನಿಗಳು, ಆಯಾ ಬೂತ್ ಮಟ್ಟದಲ್ಲಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಾರಂಭ ಏರ್ಪಡಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಸಂಕಲ್ಪ ಮಾಡಬೇಕೆಂದು ತಿಳಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್ ಪದಗ್ರಹಣ ಸಮಾರಂಭದ ರೂಪುರೇಷೆಗಳನ್ನು ವಿವರಿಸಿದರು. ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿದರು. ಪಕ್ಷದ ಪ್ರಮುಖರಾದ ಚಂಗಪ್ಪ, ನಂದಕುಮಾರ್, ಕೆ.ಎ. ಯಾಕೂಬ್, ಮುತ್ತಣ್ಣ, ಕುಮಾರಪ್ಪ, ಅಜ್ಜಳ್ಳಿ ರವಿ, ಬಿ.ಸಿ. ವೆಂಕಟೇಶ್, ಡಿ.ವಿ. ಉದಯ್ ಶಂಕರ್, ಚೇತನ್, ಶೀಲಾ ಡಿಸೋಜಾ, ಸುರೇಶ್, ಮಂಜುನಾಥ್ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.