ಪೆÇನ್ನಂಪೇಟೆ, ಜೂ. 1: ಏಪ್ರಿಲ್ 30 ರಂದು ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಟೂರು ಗ್ರಾಮದಲ್ಲಿ ಹುಲಿಯ ದಾಳಿಗೆ ಹಸು ಬಲಿಯಾಗಿತ್ತು. ಈ ಸಂದರ್ಭ ಕುಮಟೂರುವಿನಲ್ಲಿ ಹುಲಿ ಹಿಡಿಯುವ ಕಾರ್ಯಾಚರಣೆಗೆ ಮುಂದಾದ ಅರಣ್ಯಾಧಿಕಾರಿಗಳು ವಿನೂತನ ಪ್ರಯೋಗಕ್ಕೆ ಮುಂದಾಗಿ ಕೋಟ್ರಂಗಡ ಸುಗುಣ ಎಂಬವರ ಗದ್ದೆಯಲ್ಲಿ ಜೆಸಿಬಿಯ ಮೂಲಕ ಒಂದು ಕಂದಕವನ್ನು ತೋಡುವ ಕೆಲಸ ಪ್ರಾರಂಬಿಸಿದ್ದರು. ಮಧ್ಯದಲ್ಲಿ ಒಂದು ಹಸುವನ್ನು ಕಟ್ಟಿ ಹಾಕುವಷ್ಟು ಜಾಗ ಬಿಟ್ಟು 10 ಅಡಿ ಆಳ, 10 ಅಡಿ ಅಗಲದ ವೃತ್ತಾಕಾರದ ಕಂದಕವನ್ನು ತೋಡಿ ನಂತರ ಹಸುವನ್ನು ಮಧ್ಯದಲ್ಲಿ ಕಟ್ಟಿ ಹಾಕಿ ಕಂದಕವನ್ನು ಬಲೆಯಿಂದ ಆವರಿಸಿ ಅದರ ಮೇಲೆ ಹುಲ್ಲಿನಿಂದ ಮುಚ್ಚಿ ನೆಲದ ರೀತಿಯಲ್ಲಿ ಕಾಣುವಂತೆ ಮಾಡಿದ್ದರು.
ಈ ಸಲುವಾಗಿ ಸುಮಾರು ಅರ್ಧ ಭಾಗದಷ್ಟು ಕಂದಕವನ್ನು ತೋಡಲಾಗಿತ್ತು. ಆದರೆ ಮಾರನೇ ದಿನ ಬೇರೊಂದು ಗ್ರಾಮದಲ್ಲಿ ಹುಲಿ ದಾಳಿಯಾಗಿದ್ದರಿಂದ ಕಾರ್ಯಾಚರಣೆಯನ್ನು ಅಲ್ಲಿಗೆ ಕೈ ಬಿಟ್ಟು ಬೇರೆ ಕಡೆ ಕಾರ್ಯಾಚರಣೆಗೆ ಅರಣ್ಯಾಧಿಕಾರಿಗಳ ತಂಡ ತೆರಳಿತ್ತು. ಆದರೆ ಕಂದಕ ತೆಗೆದು ಒಂದು ತಿಂಗಳಾದರೂ ಕುಮಟೂರುವಿನಲ್ಲಿ ತೋಡಿರುವ ಕಂದಕವನ್ನು ಅರಣ್ಯ ಇಲಾಖೆ ಮುಚ್ಚುವ ಕೆಲಸಕ್ಕೆ ಕೈ ಹಾಕಿಲ್ಲ. ಇತ್ತ ತಿರುಗಿಯೂ ಸಹ ನೋಡಿಲ್ಲ.
ಇನ್ನು ಹುಲಿ ದಾಳಿಗೆ ಹಸು ಸತ್ತು ಬಿದ್ದಿದ್ದ ಜಾಗದಲ್ಲಿ ಇಟ್ಟಿದ್ದ ಬೋನ್ನನ್ನು ಕೂಡ ಒಂದು ತಿಂಗಳಾದರೂ ತೆರವುಗೊಳಿಸಿಲ್ಲ. ಬೋನಿನ ಪಕ್ಕದಲ್ಲೇ ಸತ್ತ ಹಸುವನ್ನು ಹೂತುಹಾಕಲಾಗಿದೆ. ಸರಿಯಾಗಿ ಗುಂಡಿ ತೆಗೆಯದೇ ಮೇಲೆ ಮಣ್ಣು ಮುಚ್ಚಿರುವುದರಿಂದ ವಾಸನೆ ಬರುತ್ತಿದ್ದು, ಕಾಫಿ ಗಿಡಕ್ಕೆ ಗೊಬ್ಬರ ಹಾಕಲು, ಕಾರ್ಮಿಕರು ಬರುತ್ತಿಲ್ಲ, ಕೂಡಲೇ ಬೋನು ತೆರವುಗೊಳಿಸಿ, ಮಣ್ಣು ಮಚ್ಚಿಸಿ ಸಹಕರಿಸಬೇಕೆಂದು ತೋಟದ ಮಾಲೀಕ ಮಾಚಿರ ಕಾಳಯ್ಯ ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
-ಚನ್ನನಾಯಕ