ಕುಶಾಲನಗರ, ಜೂ. 1: ಎಲ್ಲೆಡೆ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಸರಕಾರ ಜಾರಿಗೊಳಿಸಿದ ಲಾಕ್ಡೌನ್ ಕ್ರಮದಿಂದ ಹಲವು ಸರಕಾರಿ ಯೋಜನೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೆ ಕಾಮಗಾರಿಗಳು ನೆನೆಗುದಿಗೆ ಬೀಳುವಂತಾಗಿದೆ. ಜಿಲ್ಲೆಯ ಗಡಿಭಾಗದ ಕೊಪ್ಪ ವ್ಯಾಪ್ತಿಯಲ್ಲಿ ಕಾವೇರಿ ನದಿಯಿಂದ ನೀರೆತ್ತಿ ಪಿರಿಯಾಪಟ್ಟಣ ತಾಲೂಕಿನ 160ಕ್ಕೂ ಅಧಿಕ ಕೆರೆಗಳನ್ನು ತುಂಬುವ ಯೋಜನೆ ಇದೀಗ ಲಾಕ್ಡೌನ್ನಿಂದ ಸ್ಥಗಿತಗೊಂಡಿದೆ.
ಸುಮಾರು ರೂ. 350 ಕೋಟಿ ವೆಚ್ಚದ ಈ ಯೋಜನೆ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದು ಕುಶಾಲನಗರ ಸಮೀಪದ ಮುತ್ತಿನ ಮುಳ್ಳುಸೋಗೆ ವ್ಯಾಪ್ತಿಯ ಕಾವೇರಿ ನದಿಯಿಂದ ನೀರೆತ್ತಿ ಕೆರೆ ತುಂಬಿಸುವ ಯೋಜನೆ ಇದಾಗಿದೆ.
ಮೂರು ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬೃಹತ್ ಯೋಜನೆಗೆ ಭೂಮಿಪೂಜೆ ನೆರವೇರಿಸಿದ್ದರು. ಸುಮಾರು 1.5 ಮೀಟರ್ ವ್ಯಾಸವುಳ್ಳ 20 ಮೀಟರ್ ಉದ್ದದ ನೂರಾರು ಪೈಪ್ಗಳನ್ನು ಜೋಡಿಸಿ ಪಿರಿಯಾಪಟ್ಟಣ ಮತ್ತು ಬೆಟ್ಟದಪುರ ವ್ಯಾಪ್ತಿಯ ಒಟ್ಟು 169 ಕೆರೆಗಳಿಗೆ ನದಿಯಿಂದ ನೀರನ್ನು ಹಾಯಿಸಲಾಗುತ್ತದೆ. ಅಂದಾಜು .5 ಟಿಎಂಸಿ ಪ್ರಮಾಣದ ನೀರನ್ನು ನದಿಯಿಂದ 7 ಭಾರೀ ಅಶ್ವಶಕ್ತಿಯ ಪಂಪ್ಗಳನ್ನು ಬಳಸಿ ನೀರನ್ನು ಹರಿಸುವ ಯೋಜನೆ ಕಾಮಗಾರಿ ಸಂಪೂರ್ಣಗೊಳ್ಳಬೇಕಾಗಿದ್ದರೂ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರು ಲಾಕ್ಡೌನ್ ಹಿನ್ನೆಲೆ ತಮ್ಮ ಊರಿಗೆ ತೆರಳಿದ ಕಾರಣ ಕೆಲಸ ಸ್ಥಗಿತಗೊಂಡಿದೆ. ಸ್ಥಳೀಯರು ಮಾತ್ರ ಕಾಮಗಾರಿಯಲ್ಲಿ ತೊಡಗಿರುವ ದೃಶ್ಯ ಕಂಡುಬಂದಿದೆ.
ಈ ಮಳೆಗಾಲಕ್ಕೆ ಮುನ್ನ ಕಾಮಗಾರಿ ಮುಗಿಯುವ ಸಾಧ್ಯತೆ ಇದ್ದರೂ ಕಾರ್ಮಿಕರ ಕೊರತೆಯಿಂದ ಇನ್ನೂ ಹೆಚ್ಚಿನ ದಿನಗಳು ಬೇಕಾಗ ಬಹುದು ಎಂದು ಯೋಜನೆಯ ಉಸ್ತುವಾರಿ ಸಚಿವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಶಕ್ತಿಗೆ ಮಾಹಿತಿ ನೀಡಿದ್ದಾರೆ. ನದಿ ತಟದಲ್ಲಿರುವ ಮೂರು ಎಕರೆ ಜಮೀನುಗಳಲ್ಲಿ ಈ ಯೋಜನೆಗೆ ಬೇಕಾದ ಕಟ್ಟಡಗಳು ನಿರ್ಮಾಣ ಗೊಳ್ಳುತ್ತಿದ್ದು ಕಳೆದ ಎರಡು ವರ್ಷಗಳಿಂದ ಕಾವೇರಿ ನದಿ ಪ್ರವಾಹ ಉಂಟಾದ ಕಾರಣ ಕಟ್ಟಡ ಮುಳುಗಿ ಹೋಗಿತ್ತು. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡದ ಎತ್ತರವನ್ನು ಹೆಚ್ಚಿಸುವುದರೊಂದಿಗೆ ಜಲಾವೃತಗೊಳ್ಳುವುದನ್ನು ತಪ್ಪಿಸಲು ಮರುಯೋಜನೆ ರೂಪಿಸಲಾಗಿದೆ.
- ಚಂದ್ರಮೋಹನ್