ಮಡಿಕೇರಿ, ಜೂ. 1: ವಿದ್ಯುತ್ ಕ್ಷೇತ್ರದ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನೌಕರರ ಸಂಘದ ಕೊಡಗು ಘಟಕದ ವತಿಯಿಂದ ನಗರದ ವಿದ್ಯುತ್ ಇಲಾಖಾ ಕಚೇರಿಯಲ್ಲಿ ಅಧ್ಯಕ್ಷ ಸಿ. ರತ್ನಯ್ಯ ನೇತೃತ್ವದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.

ಸೋಮವಾರಪೇಟೆ: ಕೇಂದ್ರ ಸರ್ಕಾರವು ವಿದ್ಯುತ್ ಕಾಯ್ದೆ-2020 ಅನ್ವಯ ವಿದ್ಯುತ್ ಕ್ಷೇತ್ರದ ವಿತರಣ ವ್ಯವಸ್ಥೆಯನ್ನು ಖಾಸಗೀಕರಣ ಗೊಳಿಸಲು ಮುಂದಾಗಿರುವದು ಖಂಡನೀಯ ಎಂದು ಆರೋಪಿಸಿ ಸೆಸ್ಕ್ ನೌಕರರು ಪಟ್ಟಣದ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಕೈಗೆ ಕಪ್ಪು ಪಟ್ಟಿ ಧರಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೆ ಈ ತಿದ್ದುಪಡಿ ಕಾಯ್ದೆಯನ್ನು ಕೈಬಿಡಬೇಕು. ಖಾಸಗೀಕರಣದಿಂದ ನೌಕರರಿಗೆ ಮಾತ್ರವಲ್ಲದೆ, ರೈತಾಪಿ ವರ್ಗ ಹಾಗೂ ರಾಜ್ಯ ಸರ್ಕಾರಕ್ಕೂ ತೊಂದರೆಯಾಗುತ್ತದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಿಸಿದರು.

ಪ್ರತಿಭಟನೆಯಲ್ಲಿ ಸೋಮವಾರಪೇಟೆ ವಿಭಾಗ ಸೆಸ್ಕ್ ನೌಕರರ ಸಂಘದ ಅಧ್ಯಕ್ಷ ಕೆ.ಎಂ. ಗುಣಶೇಖರ್, ಪದಾಧಿಕಾರಿಗಳಾದ ಎನ್.ಸಿ.ಗಿರೀಶ್, ಬಿ.ಪಿ.ಹೇಮಂತ್ ಕುಮಾರ್, ಮಂಜುನಾಥ್, ಲೋಕೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ವೀರಾಜಪೇಟೆ: ವೀರಾಜಪೇಟೆ ಯಲ್ಲಿನ ಚೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಸೆಸ್ಕ್ ಸಿಬ್ಬಂದಿಗಳು, ಅಧಿಕಾರಿಗಳು ಇಂದು ಕಪ್ಪುಪಟ್ಟಿ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ಕೆಪಿಟಿಸಿಎಲ್‍ನ ನೌಕರರ ಸಂಘ ಮತ್ತು ಅಸೋಸಿಯೇಷನ್‍ಗಳ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ವೀರಾಜಪೇಟೆ, ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ ವ್ಯಾಪ್ತಿಯ ಚೆಸ್ಕಾಂ ಸಿಬ್ಬಂದಿಗಳು ಭಾಗವಹಿಸಿದ್ದರು. ಚೆಸ್ಕಾಂನ ಉಪವಿಭಾಗದ ಅಧಿಕಾರಿಗಳಾದ ಸುರೇಶ್, ರಮೇಶ್, ಸೋಮಶೇಖರ್, ಸಂಘಟನೆಯ ಉಪವಿಭಾಗದ ಅಧ್ಯಕ್ಷ ಯೋಗರಾಜ್ ಹಾಗೂ ಪದಾಧಿಕಾರಿಗಳು ಸೇರಿದಂತೆ ಸುಮಾರು 70 ಮಂದಿ ನೌಕರರು ಭಾಗವಹಿಸಿದ್ದರು.

ಕುಶಾಲನಗರ : ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ ಮತ್ತು ಖಾಸಗೀಕರಣ ವಿರೋಧಿಸಿ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಅಸೋಸಿಯೇಷನ್ ಒಕ್ಕೂಟದ ವತಿಯಿಂದ ಕುಶಾಲನಗರದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಿತು.

ಕುಶಾಲನಗರ ಸೆಸ್ಕ್ ಕಛೇರಿಯ 80 ಕ್ಕೂ ಅಧಿಕ ಮಂದಿ ಅಧಿಕಾರಿ, ಸಿಬ್ಬಂದಿ ಮತ್ತು ನೌಕರರು ಸಾಂಕೇತಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು.

ಈ ಸಂದರ್ಭ ಸೆಸ್ಕ್‍ನ ಸಹಾಯಕ ಅಭಿಯಂತರ ಹಾಗೂ ನೌಕರರ ಸಂಘದ ಅಧ್ಯಕ್ಷ ವಿನಯ್‍ಕುಮಾರ್ ಮಾತನಾಡಿ, ಕೇಂದ್ರ ಸರಕಾರ 2003 ರ ವಿದ್ಯುತ್ ಕಾಯ್ದೆ ಪ್ರಸ್ತಾಪಿತ ತಿದ್ದುಪಡಿ ಮಾಡಲು ಮುಂದಾಗಿ ರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ. ತಿದ್ದುಪಡಿ ಮಾಡಿದ್ದೇ ಆದಲ್ಲಿ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಲಾಗುವುದು ಎಂದರು.

ಸೆಸ್ಕ್ ಕಿರಿಯ ಅಭಿಯಂತರ ಲವಕುಮಾರ್ ಈ ಬಗ್ಗೆ ಮಾತನಾಡಿ, ವಿದ್ಯುತ್ ಕ್ಷೇತ್ರದ ಖಾಸಗೀಕರಣ ರೈತರು ಮತ್ತು ಗ್ರಾಹಕರಿಗೆ ತೀವ್ರ ಅನಾನುಕೂಲ ಉಂಟಾಗಿದೆ. ಇದರ ವಿರುದ್ಧ ದೇಶವ್ಯಾಪಿ ವಿರೋಧ ವ್ಯಕ್ತಗೊಂಡಿದ್ದು ಈ ಯೋಜನೆಯನ್ನು ಸರಕಾರ ಕೈಬಿಡಬೇಕಿದೆ ಎಂದರು.

ಸಂಘ ಮತ್ತು ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.