ಸೋಮವಾರಪೇಟೆ, ಜೂ. 1: ಸಮೀಪದ ನೇರುಗಳಲೆ ಗ್ರಾ. ಪಂ. ವ್ಯಾಪ್ತಿಯ ತಣ್ಣೀರುಹಳ್ಳ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದಾರೆ. ನೇರುಗಳಲೆ ಗ್ರಾ.ಪಂ.ಮೂಲಕ ಕಳೆದ 2016-17ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಈ ಸಾಲಿನಲ್ಲಿ ತಣ್ಣೀರುಹಳ್ಳ ಗ್ರಾಮದ ತನಿಯಾರು ಮನೆಯಿಂದ ಬಸವರಾಜ್ ಅವರ ಮನೆವರೆಗೆ ರಸ್ತೆ ಕುಸಿಯದಂತೆ ತಡೆಗೋಡೆ ನಿರ್ಮಾಣ ಕಾಮಗಾರಿ ಎಂದು ನಮೂದಿಸಿ ಬೇರೆ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ ಎಂದು ಗ್ರಾಮದ ಎಂ.ಕೆ. ಸದಾನಂದ, ಇತರರು ದೂರು ನೀಡಿದ್ದಾರೆ.

ಉದ್ದೇಶಿತ ಸ್ಥಳದಲ್ಲಿ ಕಾಮಗಾರಿ ನಿರ್ವಹಿಸುವ ಬದಲು ರೂ. 1ಲಕ್ಷ ವೆಚ್ಚದ ತಡೆಗೋಡೆಯನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ತಮ್ಮ ಮನೆಗೆ ತಡೆಗೋಡೆ ನಿರ್ಮಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಗ್ರಾ.ಪಂ. ಉಪಾಧ್ಯಕ್ಷರ ಅಜ್ಜಿಯ ಹೆಸರಿನಲ್ಲೂ ಮನೆಗೆ ಅನುದಾನ ಬಿಡುಗಡೆಯಾಗಿದ್ದು, ಈ ಮನೆಯನ್ನೂ ತಡೆಗೋಡೆಯ ಮೇಲೆ ನಿರ್ಮಿಸಲಾಗಿದೆ. ಈ ಹಿನ್ನೆಲೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ತಡೆಗೋಡೆ ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.