ಅಷ್ಟಮ ಅಧ್ಯಾಯ: ದೇವಿ ಪಾರ್ವತಿಯು ಹೇಳಿದಳು: ಪ್ರಭು ಪರಮೇಶ್ವರನೆ, ಪುನಃ ಕೇಳಲು ಬಯಕೆಯುಂಟಾಗುತ್ತಿದೆ. ಕಾವೇರಿ, ಗಂಗೆ, ನರ್ಮದೆ, ತಾಮ್ರಪರ್ಣಿ, ಗೋದಾವರಿ- ಇವರೆಲ್ಲ ಯಾವ ಯಾವ ರೂಪವುಳ್ಳವರಾಗಿದ್ದಾರೆ ಎಂಬದನ್ನು ನನಗೆ ತಿಳಿಸು.
ಈಶ್ವರನು ಹೇಳುತ್ತಾನೆ: ಧರ್ಮಕ್ಕಾಗಿ ಗಂಗೆಯು ಉದ್ಭವಿಸಿದಳು. ಕಾವೇರಿಯು ಅರ್ಥವನ್ನು ಅಂದರೆ ಆರ್ಥಿಕ ಸೌಲಭ್ಯ ಒದಗಿಸಲು ಜನ್ಮ ತಾಳಿದಳು.(ಕೋಟ್ಯಂತರ ರೈತರ ಬಾಳಿನ ಆಸರೆಯಾಗಿಹಳು, ಕೋಟ್ಯಂತರ ಜನರಿಗೆ ಕುಡಿಯುವ ನೀರನ್ನು ಒದಗಿಸುವಳು, ವಿದ್ಯುತ್ ಉತ್ಪಾದನೆಗೆ ಕಾರಣಳಾಗಿ ಕೋಟ್ಯಂತರ ಜನರಿಗೆ ಬೆಳಕು ನೀಡುವದರಿಂದ ಅವಳು ಅರ್ಥ ಪ್ರದಾಯಿನಿ ಎನಿಸಿಕೊಂಡಿರುವದೇ ಇದಕ್ಕೆ ನಿದರ್ಶನ. ಅವಳನ್ನು ಅವಲಂಬಿಸಿಯೇ ಕೋಟ್ಯಂತರ ಮಂದಿ ಜೀವನ ನಡೆಸುತ್ತಿರುವದೇ ಇದಕ್ಕೆ ಸಾಕ್ಷಿ -ಅಂದರೆ ಅವಳು ಲೋಕಕಲ್ಯಾಣಕಾರಳು ಎಂದರ್ಥ), ಸುಖವನ್ನು ನೀಡಲು ನರ್ಮದೆಯು ಹುಟ್ಟಿದಳು. ಮುಕ್ತಿಯನ್ನು ಒದಗಿಸಲು ತಾಮ್ರಪರ್ಣಿಯ (ತಮಿಳುನಾಡುವಿನಲ್ಲಿದೆ) ಜನನವಾಯಿತು.
ತಾಮ್ರಪರ್ಣಿಯೊಬ್ಬಳು ಮುಕ್ತಿದಾಯಕಿಯಾದ ಸ್ವಭಾವವುಳ್ಳ ವಳಾಗಿರುವಳು. ಉಳಿದ ಮೂರು ಮಂದಿ ಲೋಕಕ್ಕೆ ಆನಂದವುಂಟು ಮಾಡುವರು. ಈ ಎಲ್ಲ ನದಿಗಳೂ ಶ್ರೇಷ್ಠವಾಗಿರುವವು. ಅಲ್ಲದೆ, ಸತ್ಪುರುಷರಿಗೆ ಇಷ್ಟಾರ್ಥವನ್ನು ನೀಡುತ್ತವೆ. ಮಾಯಮಯಳೂ, ಮೋಹವಿಲ್ಲದವಳೂ ಜಗಜ್ಜನನಿಯೂ, ಜಗತ್ಸ್ವರೂಪಿಣಿಯೂ ಆದ ನೀನೇ (ಅಂದರೆ ಪಾರ್ವತೀ ದೇವಿಯೇ) ಸರ್ವಾಧಾರವಾದ ಲೋಪಾಮುದ್ರೆಯೆಂದು ಹೇಳಲ್ಪಡುವಳು. (ಈ ಹಿಂದಿನ ಅಧ್ಯಾಯಗಳಲ್ಲಿ ಸಮುದ್ರ ಮಥನ ಕಾಲದಲ್ಲಿ ಲಕ್ಷ್ಮಿಯ ಶಕ್ತಿಯಿಂದ ಲೋಪಾಮುದ್ರೆ ಜನಿಸಿದಳು ಎಂದಿದೆ. ಅಂದರೆ, ಪಾರ್ವತಿಯೇ ಲಕ್ಷ್ಮಿಯ ಸಹಯೋಗದಲ್ಲಿ ಜನ್ಮ ತಾಳಿದುದರಿಂದ ಪಾರ್ವತಿ ಮತ್ತು ಲಕ್ಷ್ಮಿ ಇಬ್ಬರ ಶಕ್ತಿಯಿಂದ ಲೋಪಾಮುದ್ರೆ ಆವಿರ್ಭವಿಸಿದಳು)ದೇವಿ ಪಾರ್ವತಿಯೇ, ಸಕಲ ದೋಷಗಳ ನಾಮವನ್ನೇ ನಾಶ ಮಾಡಿದ, ಮುದ್ರೆಯ ಚಿಹ್ನೆಯುಳ್ಳ ನನ್ನ ಪತ್ನಿಯಾದ ನೀನು ಪ್ರತ್ಯೇಕ ಶಕ್ತಿಯಾಗಿ ಲೋಪಾಮುದ್ರೆ ಎಂಬ ಹೆಸರಿನಿಂದ ಹರಿಯುತ್ತಿರುವೆ.
ಲೋಕಮುದ್ರಾ ಕರ್ಮಮುದ್ರಾ ಸರ್ವಮುದ್ರಾಬ್ಧಿ ಮುದ್ರಿಕಾ, ವೇದಮುದ್ರಾ, ಬ್ರಹ್ಮಮುದ್ರಾ ಜ್ಞಾನಮುದ್ರಾ ಚ ಮುದ್ರಿಕಾ, ಧರ್ಮಮುದ್ರಾ ಪ್ರಾಣಮುದ್ರಾ ಲೋಪಾಮುದ್ರಾಖಿಲಾತ್ಮಿಕಾ
ತಾಸು ತಾಸವಖಿಲಾಸ್ವೇಷಾ ಲೋಪಾಮುದ್ರಾ ಪ್ರವರ್ತತೇ, ರಾಜಮುದ್ರಾ ಯಥಾಲೋಕೇ ಮಾನ್ಯಾ ಪೂಜಾಖಿಲೈರ್ನರೈಃ, ತೀರ್ಥಮುದ್ರಾ ವರಾರೋಹೇ ಪ್ರೇಕ್ಷಣೀಯಾ ಫಲೇಪ್ಸುಭಿಃ ಲೋಕಮುದ್ರೆ, ಕರ್ಮಮುದ್ರೆ, ಸರ್ವಮುದ್ರೆ, ಅಬ್ಧಿಮುದ್ರೆ, ವೇದಮುದ್ರೆ, ಬ್ರಹ್ಮಮುದ್ರೆ, ಜ್ಞಾನಮುದ್ರೆ, ಧರ್ಮಮುದ್ರೆ, ಪ್ರಾಣಮುದ್ರೆ ಎಂಬದಾಗಿ ಮುದ್ರೆಗಳು ಅನೇಕ ಇರುವವು. ಲೋಪಾಮುದ್ರೆಯು ಅಖಿಲ ಮುದ್ರಾಸ್ವರೂಪಿಣಿಯಾಗಿರುವಳು.
ಅಲ್ಲದೆ, ಆಯಾ ಮುದ್ರೆಗಳಲ್ಲಿ ನೆಲೆಸಿ ನಿಂತಿರುವಳು. ಜಗದ ಜನರಿಂದ ರಾಜಮುದ್ರೆಯು ಮಾನ್ಯವೂ ಪೂಜ್ಯವೂ ಆಗಿರುವಂತೆ ಫಲಾಪೇಕ್ಷೆಯ ದೃಷ್ಟಿಯಿಂದ ತೀರ್ಥಮುದ್ರೆಯು ಮಹತ್ವ ಪಡೆದಿದೆ. ಪವಿತ್ರಳೂ, ಅಮೃತಸ್ವರೂಪಿಣಿಯೂ, ಸತ್ಪುರುಷರಿಂದ ವೇದಾಂತದಲ್ಲಿ ಸ್ತುತಿಸಲ್ಪಟ್ಟವಳೂ, ಆನಂದದಾಯಕವಾದ ಜಲದಿಂದ ಸಕಲ ಜೀವಿಗಳ ಪಾಪವನ್ನು ತೊಳೆದವಳೂ, ಮುದ್ರಾಸ್ವರೂಪಳೂ, ಆದ ಕಾವೇರಿಯು ತನ್ನ ಅಮೃತ ಸಮಾನವಾದ ಜಲದಲ್ಲಿ ಸ್ನಾನ ಮಾಡಿದವರನ್ನು ಪಾಪದಿಂದ ಬಿಡುಗಡೆ ಮಾಡುತ್ತಾಳೆ. ಸರಿಚ್ಛ್ರೇಷ್ಠಾ ಚ ಕಾವೇರೀ ನದೀನಾಮುತ್ತಮಾ ನದೀ ಸ್ಮರಣಾತ್ಕೀರ್ತನಾತ್ಸ್ನಾನಾನ್ಮುಕ್ತಿಂ ಗಚ್ಛಂತಿ ಮಾನವಾಃ ಕಿಂ ಪುನಶ್ಶ್ರದ್ಧಯಾ ನಿತ್ಯಂ ಕಾವೇರ್ಯಾಂ ಸ್ನಾತಿ ಮಾನವಃ
ಸ ಯಾತಿ ಪರಮಂ ಧಾಮ ಯದ್ಗತ್ವಾ ನೇಹ ಜಾಯತೇ
ಕಾವೇರಿಯು ನದಿಗಳಲ್ಲೆಲ್ಲಾ ಶ್ರೇಷ್ಠಳೂ, ಉತ್ತಮಳೂ ಆಗಿದ್ದಾಳೆ. ಅವಳ ಸ್ಮರಣೆ, ಅಲ್ಲದೆ, ಸ್ನಾನ ಮತ್ತು ಅವಳ ಕೀರ್ತನೆಗಳಿಂದ ಮಾನ ವರು ಮೋಕ್ಷವನ್ನು ಹೊಂದುತ್ತಾರೆ. ಕಾವೇರಿಯಲ್ಲಿ ಯಾರು ಶ್ರದ್ಧೆಯಿಂದ ಕೂಡಿ ದವರಾಗಿ ಸ್ನಾನ ಮಾಡು ವರೋ ಅವರು ಪುನರ್ಜನ್ಮವಿಲ್ಲದ, ಪರಮಶ್ರೇಷ್ಠವಾದ ಸ್ಥಾನವನ್ನು ಪಡೆಯು ವರು. ಕೃತಯುಗದಲ್ಲಿ ಕಾವೇರಿಯ ದರ್ಶನವೂ, ತ್ರೇತಾಯುಗದಲ್ಲಿ ಅವಳ ಸ್ಪರ್ಶನ, ದ್ವಾಪರದಲ್ಲಿ ಅವಳ ತೀರ್ಥ ಸ್ನಾನ ಪುಣ್ಯದಾಯಕವು. ಕಲಿಯುಗದಲ್ಲಿ ಕಾವೇರಿಗೆ ಭಕ್ತಿ ಪೂರ್ವಕವಾಗಿ ಸೇವೆಗೈದರೆ ಪುಣ್ಯ ಲಭಿಸುತ್ತದೆ. ಪಾರ್ವತಿಯೇ, ಪುಣ್ಯನದಿಯಾದ ಕಾವೇರಿಯ ಎರಡು ದಡಗಳಲ್ಲೂ ಅಸಂಖ್ಯಾತ ಶಿವಕ್ಷೇತ್ರಗಳೂ, ಶಿವಲಿಂಗಗಳೂ ಕಂಡುಬರುತ್ತವೆ.
ಪಾರ್ವತಿಯೇ, ಸಹ್ಯಾಚಲದಿಂದ ಸಾಗರದವರೆಗೆ ಕಾವೇರಿಯು ಸಕಲ ತೀರ್ಥ ಸ್ವರೂಪಿಣಿಯಾದ ನದಿಯಾಗಿರುವಳು. ಅಲ್ಲದೆ, ಸಮಸ್ತ ಜೀವಿಗಳ ಕಲ್ಯಾಣಕ್ಕಾಗಿ ಪೂರ್ವ ಸಮುದ್ರಕ್ಕೆ ಹರಿಯುವಳು. ಸಮಸ್ತ ದೇವಮಯಳಾದ, ಪವಿತ್ರೆಯಾದ ಸಕಲದೇವತೆಗಳಿಂದ ನಮಸ್ಕರಿಸಲ್ಪಟ್ಟು ಮಾನವರಿಗೆ ಭಕ್ತಿ, ಮುಕ್ತಿಪ್ರದಳಾಗಿರುವ, ಸಕಲ ವಿದ್ಯಾಸ್ವರೂಪಳಾಗಿರುವ, ಸಕಲ ಲೋಕೋಪಕಾರಿಣಿಯಾಗಿರುವ, ಪಾಪ ನಾಶಿನಿಯೂ, ವಂದ್ಯಳೂ, ಪೂಜ್ಯಳೂ ಆದ ಕಾವೇರಿಯು ಸದಾ ನಿರ್ಮಲವಾದ ನದಿಯಾಗಿದ್ದಾಳೆ.
ಈ ವಿಚಾರವಾಗಿ ಗಂಗೆ ಮತ್ತು ಯಮುನೆಯರ ನಡುವೆ ಬಹಳ ಹಿಂದೆ ನಡೆದ ಪುಣ್ಯತಮವಾದ ಸಂವಾದರೂಪ ಚರಿತ್ರೆಯನ್ನು ಈಗ ಹೇಳುವೆನು. ಪುರಾತನ ಕಾಲದಲ್ಲಿ ಯಮುನೆಯು ತನ್ನ ಗೆಳತಿಯಾದ ಗಂಗೆಯನ್ನು ಕಾಣದೆ ಚಿಂತೆಗೀಡಾದಳು.ಅವಳನ್ನು ಹುಡುಕಲು ಸರಸ್ವತಿಯೊಡಗೂಡಿ ಹೊರಟಳು. ಆಗ ಒದ್ದೆಯಾದ ತಲೆಕೂದಲಿನೊಂದಿಗೆ ಗಂಗೆಯು ತನ್ನ ಸಂಗಾತಿಯರಾದ ಅನೇಕ ನದಿಗಳಿಂದೊಡಗೂಡಿ ರಾಜ ಕುವರಿಯಂತೆ ಕಾಣಿಸಿಕೊಂಡಳು. ಆಗ ಅವಳ ಸ್ವರೂಪ ಹೀಗಿತ್ತು:-ಆಕೆಯ ವಸ್ತ್ರ ನೆನೆದಿತ್ತು. ಸರ್ವಾಂಗ ಸುಂದರಿಯಾಗಿದ್ದಳು. ಗಂಧರ್ವ ಸಮೂಹವನ್ನು ಒಡಗೊಂಡಿದ್ದಳು. ಹಿಮವತ್ಪರ್ವತನ ಪುತ್ರಿಯಾದ ಆಕೆ ನಿತ್ಯ ಋಷಿಗಳಿಂದ ಸೇವಿಸಲ್ಪಟ್ಟವಳಾಗಿದ್ದಳು. ಶ್ರೇಷ್ಠಳಾಗಿಯೂ, ಸತ್ಪುರುಷರಿಗೆ ಇಷ್ಟಾರ್ಥ ಗಳನ್ನು ಕೊಡುವವಳೂ ಆಗಿದ್ದ ಗಂಗೆಯು ಶ್ವೇತ ಪುಷ್ಪಗಳ ಛತ್ರಿಯನ್ನು ಹೊಂದಿದ್ದಳು. ನಾಳ ಪುಷ್ಪಗಳ ಚಾಮರದಿಂದ ಬೀಸಲ್ಪಡುತ್ತಿದ್ದಳು. ಪರಿಶುದ್ಧಳಾಗಿದ್ದ ಗಂಗೆಯು ಬಹು ಶೀತ ಳಾಗಿಯೂ, ಮನೋಹರ ಳಾಗಿಯೂ, ಮುನಿಗಳಿಗೆ ಪ್ರೀತಿವರ್ಧಕಳಾಗಿಯೂ ಚಂದ್ರಮುಖಿಯಾಗಿಯೂ ಕಂಡುಬಂದಳು. ಬಿಳಿ ಬಣ್ಣದಿಂದಲೂ, ಶೀತಲವಾಗಿಯೂ ಇರುವ ಉದಕದಿಂದ ಕೂಡಿರುವವಳೂ, ಕಲಿ ಪಾಪ ನಾಶಿನಿಯೂ, ಪೂಜನೀಯಳೂ, ಸಮುದ್ರ ಪತ್ನಿಯೂ ಆಗಿರುವ ಅವಳು ಯಮುನೆಗೆ ಗೋಚರಳಾದಳು. ವಿಷ್ಣುಪಾದದಿಂದ ಉತ್ಪನ್ನಳಾದವಳೂ, ಹರನ ಶಿರದಲ್ಲಿ ಮನೆ ಮಾಡಿಕೊಂಡ ಕಲ್ಯಾಣ ಸ್ವರೂಪಳೂ, ಮನೋಹರೆಯೂ, ಶಿವನ ಪಾದಪೂಜೆಯಲ್ಲಿ ಆಸಕ್ತಳಾಗಿರುವವಳೂ ದೇವನದಿಯೂ ಆದ ಗಂಗೆಯ ಪಾದವನ್ನು ಸೂರ್ಯ ಕುವರಿಯಾದ ಯಮುನೆಯು ಭಾಷ್ಪಾಂಜಲಿಯಿಂದ ಚಿಮುಕಿಸುತ್ತಾ ಕೇಳಿದಳು: ಮಹಾ ಭಾಗ್ಯಶಾಲಿನಿಯೂ, ಮೋಕ್ಷದಾಯಿನಿಯೂ ಆದ ಗಂಗೆಯೇ, ನೀನು ಎಲ್ಲಿಗೆ ಹೋಗಿದ್ದಿ? ನನ್ನನ್ನು ಬಿಟ್ಟು ಹೊರಡಲು ಏನು ಕಾರಣ? ನಿನ್ನ ವಸ್ತ್ರ ಮತ್ತು ಕೂದಲುಗಳು ಏಕೆ ತೋಯ್ದಿವೆ ? ನಿನಗೂ ಇತರ ನದಿಗಳಿಗೂ ಎಲ್ಲಿ ಸಂಗಮವಾಯಿತು ಎಂದು ಪ್ರಶ್ನಿಸಿದಳು. ಗಂಗೆ ಹೀಗೆ ಉತ್ತರಿಸುತ್ತಾಳೆ:-ನಾನು ನನ್ನ ಸಹಚರ ನದಿಗಳೊಡನೆ ಶ್ರೇಷ್ಠವಾದ ಕಾವೇರಿ ತೀರ್ಥವನ್ನು ದರ್ಶನ ಮಾಡಿ, ಪವಿತ್ರವಾದ ಆ ಕಾವೇರಿ ಜಲದಲ್ಲಿ ಸ್ನಾನ ಮಾಡಿ ಮತ್ತೆ ನಾವೆಲ್ಲ ಸ್ವಸ್ಥಾನದತ್ತ ಹಿಂತಿರುಗಿದ್ದೇವೆ. ಆ ಕಾರಣದಿಂದಲೇ ನನ್ನ ವಸ್ತ್ರವು ಒದ್ದೆಯಾಗಿರು ವದು. ಪಾವನೆಯಾದ ಯಮುನೆಯೇ, ಕಾವೇರಿಯ ಪ್ರಭಾವದಿಂದ ನೀನು ದುಃಖವನ್ನು ಬಿಟ್ಟು ಸದಾಕಾಲದಲ್ಲಿಯೂ ಸುಖಿಯಾಗಿರು ಎಂದು ಹೇಳಿದಳು. ಭಾಗೀರಥಿಯ ಮಾತನ್ನು ಕೇಳಿ ಯಮುನೆ ಪ್ರಶ್ನಿಸುತ್ತಾಳೆ:-ಜಾಹ್ನವಿಯೇ, ನೀನು ನದಿಗಳಲ್ಲಿ ಶ್ರೇಷ್ಠಳೆಂದು ಪ್ರಸಿದ್ಧಳಾಗಿರುವೆ. ನಿನ್ನ ಜಲದಿಂದ ನಾವೆಲ್ಲರೂ ಪವಿತ್ರರಾಗಿರುವೆವು, ಅಲ್ಲದೆ ಪುಣ್ಯ ದೇವತೆಗಳೂ ಆಗಿರುವೆವು. ಮಹರ್ಷಿಗಳೂ, ಸಿದ್ಧಗಣಗಳೂ ಹಗಲು ರಾತ್ರಿಯೆನ್ನದೆ ನಿನ್ನನ್ನು ಪ್ರಾರ್ಥಿಸುವರು. ಬ್ರಹ್ಮಾಂಡ ಮಧ್ಯದಲ್ಲಿರುವ ತೀರ್ಥಗಳು ನಿನ್ನ ಸ್ವರೂಪಗಳಾಗಿರುವವು. ಹಾಗಿದ್ದರೂ ನೀನು ಮಹಾ ಭಾಗ್ಯಶಾಲಿನಿಯಾದ ಕಾವೇರಿಯನ್ನು ನೋಡಲು ಅಪೇಕ್ಷಿಸುವಿ. ನಾನು ಈ ವಿಷಯದಲ್ಲಿ ಸಂದೇಹ ಹೊಂದಿದ್ದೇನೆ. ನನಗೆ ನಿಜಸ್ಥಿತಿಯನ್ನು ತಿಳಿಸಿ ಸಂದೇಹವನ್ನು ನಿವಾರಿಸು. ಕಾವೇರಿಯು ಯಾರ ಪುತ್ರಿಯು ? ಕಾವೇರಿಯು ಪವಿತ್ರಳಾಗಿರಳು ಕಾರಣವೇನು ? ನಿನ್ನಿಂದ ಕಾವೇರಿ ತೀರ್ಥದ ಮಾಹಾತ್ಮೈಯನ್ನು ಕೇಳಿ ತಿಳಿಯಲು ಅಪೇಕ್ಷಿಸುವೆನು ಎಂದು ಯಮುನೆಯು ಕೇಳಿಕೊಂಡಳು. ಗಂಗೆ ಹೀಗೆ ಉತ್ತರಿಸುತ್ತಾಳೆ:-ಪುತ್ರಿ ಸಮಾನಳಾದ ಯಮುನೆಯೇ, ನಿನಗೆ ನನ್ನ ವಿಷಯವನ್ನೂ, ಜೊತೆಗೆ ಧರ್ಮಾರ್ಥ ಕಾಮಮೋಕ್ಷಗಳನ್ನು ನೀಡುವ ಕಾವೇರಿಯ ಮಾಹಾತ್ಮೈಯನ್ನೂ ಸಂಕ್ಷಿಪ್ತವಾಗಿ ಕ್ಷಿಪ್ರವಾಗಿ ಹೇಳುತ್ತೇನೆ. ಪೂರ್ವಕಾಲದಲ್ಲಿ ನಾನು ಬ್ರಹ್ಮ ಕಮಂಡಲುವಿನಲ್ಲಿನ ತೀರ್ಥವಾಗಿದ್ದೆ. ಬಳಿಕ ಆ ತೀರ್ಥವು ವಿಷ್ಣುವಿನ ಪಾದದಿಂದ ಹುಟ್ಟಿತು. ಅದನ್ನು ಭಗೀರಥನು ಪರಮೇಶ್ವರನ ಜಡೆಯ ಮಧ್ಯಕ್ಕೆ ಒಯ್ದನು. ಆ ಬಳಿಕ ಅದನ್ನು ಹಸ್ತಿಶೃಂಗಿಗಳು ಬಿಡಲು ನಾನು ಹಿಮತ್ಪರ್ವತವನ್ನು ಸೇರಿದೆನು. ಅಲ್ಲಿಂದ ನಾನು ಜಹ್ನು ಮುನಿಯ ಉದರವನ್ನು ಸೇರಿದೆನು. ಅಲ್ಲಿಂದ ಹೊರಬಂದು ತರುವಾಯ ನದೀಶ್ವರನಾದ ಸಮುದ್ರವನ್ನು ಸೇರಿದೆನು. ನನ್ನ ರಭಸದ ಹರಿಯುವಿಕೆಯ ಜಲದಿಂದ ಪಾತಾಳ ಲೋಕ ಪರ್ಯಂತ ಭೂಮಿಯು ಸೀಳಲ್ಪಟ್ಟಿತು. ಈ ಭೂಮಿ ಸೀಳುವಿಕೆಯಿಂದುಂಟಾದ ದೋಷದಿಂದ ನನ್ನ ಶರೀರವನ್ನು ಆ ದೋಷವು ಬಿಟ್ಟುಹೋಗಲೊಲ್ಲದು. ಹಾಗಾಗಿ ಈ ದೋಷದ ಶುದ್ಧಿಗಾಗಿ ನಾನು ಸೂರ್ಯನು ತುಲಾರಾಶಿಗೆ ಪ್ರವೇಶಿಸುವ ಸಂಕ್ರಮಣ ಮುಹೂರ್ತದಲ್ಲಿ ದಾರಿದ್ರ್ಯವನ್ನು ನಾಶ ಮಾಡುವ ದೋಷಗಳನ್ನು ಕ್ಷೀಣಗೊಳಿಸುವವಳಾದ ಕಾವೇರಿಯ ಸನಿಹಕ್ಕೆ ಪ್ರತಿವರ್ಷ ಹೋಗುವೆನು.
(ಮುಂದಿನ ಸಂಚಿಕೆಯಲ್ಲಿ ಅಷ್ಟಮ ಅಧ್ಯಾಯ ಮುಂದುವರಿಯಲಿದೆ. ಕೃಪೆ; ಸ್ಕಾಂದ ಪುರಾಣಾಂತರ್ಗತ ಶ್ರೀ ಕಾವೇರಿ ಮಾಹಾತ್ಮೈ ಅನುವಾದಕರು: ದಿ.ಟಿ.ಪಿ ನಾರಾಯಣಾಚಾರ್ಯರು)