ಕರಿಕೆ, ಮೇ 30: ಇಲ್ಲಿಗೆ ಸಮೀಪದ ಚೆತ್ತುಕಾಯ ಎಂಬಲ್ಲಿ ಮೀಸಲು ಅರಣ್ಯದಿಂದ ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಆರೋಪದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ನಾಲ್ಕು ಮಂದಿ ಬೇಟೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ದೇವರಾಜ್ ನೇತೃತ್ವದ ತಂಡ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಕೆ.ಸಿ. ಸುಂದರ, ಪಿ.ಕೆ. ರಾಮ, ಜೋಷಿ ಜಾರ್ಜ್, ಎಂ.ಆರ್. ಕೃಷ್ಣನ್ ಎಂಬ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಮತ್ತೋರ್ವ ಆರೋಪಿ ಕೆ.ಕೆ. ನಿರ್ಮಾಲನಂದಗೆ ಸೇರಿದ ಒಂಟಿ ನಳಿಕೆ ಕೋವಿ ಹಾಗೂ ಬೇಟೆಯಾಡಿದ್ದ ಕೆಂಜಳಿಲು, ಮುಷ್ಯ ಸೇರಿದಂತೆ ಇತರ ವನ್ಯಪ್ರಾಣಿಗಳ ಮಾಂಸವನ್ನು ವಶಪಡಿಸಿಕೊಂಡಿದ್ದು, ಐದು ಜನರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತ್ತೋರ್ವ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಮುಂದಿನ
ಕ್ರಮ ಕೈಗೊಂಡಿದ್ದಾರೆ. ಬಂಧಿತರಲ್ಲಿ ಪ್ರಥಮ ಆರೋಪಿಯಾದ ಸುಂದರ ಎಂಬಾತನ ಮೇಲೆ
ಎರಡು ವರ್ಷಗಳ ಹಿಂದೆ ತಲಕಾವೇರಿ ವನ್ಯಧಾಮದ ಸರಹದ್ದಿನ ಅರಣ್ಯ ಪ್ರದೇಶದಲ್ಲಿ ಸಿಂಗಳಿಕ ಬೇಟೆಯಾಡಿದ್ದ ಪ್ರಕರಣದಲ್ಲಿ ಮಾಂಸ ಹಾಗೂ ಜೋಡುನಳಿಕೆ ಬಂದೂಕನ್ನು ವಶಪಡಿಸಿ ಪ್ರಕರಣ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಕಾರ್ಯಾಚರಣೆಯಲ್ಲಿ ಕರಿಕೆ
ಉಪ ವಲಯರಣ್ಯಾಧಿಕಾರಿ ಸಚಿನ್ ಬೀರಾದಾರ್, ಅರಣ್ಯ ರಕ್ಷಕ ಸದಾನಂದ ಹಿಪ್ಪರಗಿ, ಉತ್ತಯ,
ಅರಣ್ಯ ವೀಕ್ಷಕರಾದ ಚಂದ್ರು, ಪ್ರವೀಣ್ ಪಾಲ್ಗೊಂಡಿದ್ದರು. - ಸುಧೀರ್.