ಮಡಿಕೇರಿ, ಮೇ. 30 : ಮನೆಯೊಂದರ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಾಪೋಕ್ಲು ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಡಾ. ಸುಮನ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ನಾಪೋಕ್ಲು ಬಳಿಯ ಯವಕಪಾಡಿ ಗ್ರಾಮದ ಕರ್ತಂಡ ಎಂ. ಮಾಚವ್ವ ಎಂಬವರು ತಾ. 19ರಂದು ಮನೆಯ ಬೀಗ ಹಾಕಿಕೊಂಡು ಮಗನೊಂದಿಗೆ ಮಗನ ಮನೆ ಗೋಣಿಕೊಪ್ಪಕ್ಕೆ ತೆರಳಿದ್ದು, ತಾ. 26ರಂದು ಮರಳಿ ಮನೆಗೆ ಬಂದಾಗ ಮನೆಯ ಮುಂಭಾಗದ ಬೀಗವನ್ನು ಮುರಿದು ಮನೆಯ ಮಲಗುವ ಕೋಣೆಯ ವಾರ್ಡ್‍ರೋಬ್‍ನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಒಂದು ವಾಚನ್ನು ಕಳ್ಳರು ದೋಚಿರುವುದು ಪತ್ತೆಯಾಗಿತ್ತು.ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಾದ ವೀರಾಜಪೇಟೆ ಬೊಳ್ಳುಮಾಡುವಿನ ಕೂಲಿ ಕಾರ್ಮಿಕರಾದ ಹೆಚ್.ಕೆ. ಮಹೇಶ್ ಅಲಿಯಾಸ್ ನವೀನ್ ಹಾಗೂ ಈ.ಎಂ. ಭರತ್ ಎಂಬವರುಗಳನ್ನು ಬಂಧಿಸಿದ್ದಾರೆ.ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ., ಪೊಲೀಸ್ ಉಪ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಮಾರ್ಗದರ್ಶನದಲ್ಲಿ ನಾಪೋಕ್ಲು ಠಾಣಾ ಪಿಎಸ್‍ಐ ಆರ್. ಕಿರಿಣ್, ಸಿಬ್ಬಂದಿಯವರಾದ ಫ್ರಾನ್ಸಿಸ್, ಮಧುಸೂದನ್, ನವೀನ್, ಹರ್ಷ, ಕಾಳಿಯಪ್ಪ, ಪ್ರೇಂ ಕುಮಾರ್, ದೇವರಾಜು, ಎ.ಎಸ್.ಐ. ಜ್ಯೋತಿಕುಮಾರ್, ಕುಶಾಲಪ್ಪ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಆರೋಪಿಗಳಿಂದ ಸುಮಾರು ರೂ. 1,94,200 ಮೌಲ್ಯದ ಚಿನ್ನಾಭರಣ ಮತ್ತು

ಒಂದು ವಾಚನ್ನು ವಶಪಡಿಸಿ ಕೊಳ್ಳಲಾಗಿದ್ದು, ತನಿಖಾ ತಂಡಕ್ಕೆ ನಗದು ಬಹುಮಾನ ನೀಡುವುದಾಗಿ ಎಸ್ಪಿ ಹೇಳಿದರು.