ಮಡಿಕೇರಿ, ಮೇ 30: ಜಾಗತಿಕ ಕೊರೊನಾ ಭೀತಿಯ ನಡುವೆ ಯಾರೊಬ್ಬರೂ ಹಸಿವಿನಿಂದ ಬಳಲದಂತೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಳಜಿ ವಹಿಸಿ, ಕಡು ಬಡವರಿಗೆ ಉಚಿತ ಆಹಾರ ದಾನ್ಯ ಕಲ್ಪಿಸಿದ್ದು, ಆಹಾರ ಇಲಾಖೆ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಈ ಸಂದರ್ಭ ಯಾವದೇ ರೀತಿಯ ಅಕ್ರಮ ನಡೆಸಲು ಅವಕಾಶ ನೀಡುವದಿಲ್ಲ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಗೋಪಾಲಯ್ಯ ಘೋಷಿಸಿ ದ್ದಾರೆ. ಇಂದು ಕೊಡಗಿಗೆ ಪ್ರಥಮ ಭೇಟಿಯೊಂದಿಗೆ, ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಕಾರದ ಯೋಜನೆಗಳನ್ನು ಪರಿಣಾಮಕಾರಿ ಯಾಗಿ ಜಾರಿಗೊಳಿಸಿ ಜನತೆಯ ಹಸಿವು ನೀಗಿಸಬೇಕೆಂದು ಅಧಿಕಾರಿ ಗಳಿಗೆ ತಿಳಿಹೇಳಿದರು.ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಮನೆಗಳು ಇರುವುದರಿಂದ ಜೊತೆಗೆ ಬೆಟ್ಟಗುಡ್ಡಗಳಿಂದ ಕೂಡಿರುವುದರಿಂದ ಅಂತಹ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಸಲಹೆಯನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು ಎಂದರಲ್ಲದೆ ಕೋವಿಡ್-19 ಹಿನ್ನೆಲೆ ಲಾಕ್‍ಡೌನ್ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರತೀ ಕುಟುಂಬಕ್ಕೂ ಪಡಿತರ ವಿತರಿಸಲು ಸರ್ಕಾರ ಕ್ರಮವಹಿಸಿದೆ. ಅದರಂತೆ ಶೇ.94 ರಷ್ಟು ಪಡಿತರ ತಲುಪಿಸಲಾಗಿದೆ ಎಂದು ಸಚಿವರು ಹೇಳಿದರು.

ಲಾಕ್‍ಡೌನ್ ಸಂದರ್ಭದಲ್ಲಿ ಯಾವ ಕುಟುಂಬವೂ ಸಹ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಸರ್ಕಾರ ಎಲ್ಲಾ ಕುಟುಂಬಗಳಿಗೂ ಪಡಿತರ ವಿತರಿಸಿದೆ. ಹಾಗೆಯೇ ಜೂನ್ ತಿಂಗಳಲ್ಲಿಯೂ ಸಹ ಪಡಿತರ ವಿತರಿಸಲಾಗುವುದು ಎಂದು ನುಡಿದರು.

ಕಡ್ಡಾಯ ಪೂರೈಕೆಗೆ ಸೂಚನೆ

ರಾಜ್ಯದ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕೆಲವು ಮಲೆನಾಡು ಭಾಗದಲ್ಲಿ ಅಂತರ್ಜಾಲ ಸಂಪರ್ಕ ತಲುಪದಿರುವ ಕಡೆಗಳಲ್ಲಿ ಸಂಚಾರಿ ನ್ಯಾಯಬೆಲೆ ಅಂಗಡಿ ಮೂಲಕ ಕಡ್ಡಾಯವಾಗಿ ಪಡಿತರ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಡಿತರ ಚೀಟಿ ಇಲ್ಲದ ವಲಸೆ ಕುಟುಂಬಗಳಿಗೂ ಕಡ್ಡಾಯವಾಗಿ ಪಡಿತರ ತಲುಪಿಸಬೇಕು. ಮುಂದಿನ ಜೂನ್ ತಿಂಗಳಲ್ಲಿ ಅಕ್ಕಿ ಜೊತೆಗೆ ಕಡ್ಲೆಕಾಳು ವಿತರಿಸಲಾಗುವುದು. ಈ ಪ್ರಕ್ರಿಯೆಯು ಜೂನ್, 11 ರಿಂದ ಆರಂಭವಾಗಲಿದೆ. ಕಡುಬಡವರು ಮತ್ತು ಕಟ್ಟಕಡೆಯ ಜನರಿಗೆ ಪಡಿತರ ತಲುಪಿಸಬೇಕು. ಯಾರೂ ಸಹ ಹಸಿವಿನಿಂದ ಬಳಲಬಾರದು ಎಂದು ಸಚಿವರು ಹೇಳಿದರು. ಪ್ರಧಾನಮಂತ್ರಿ ಉಜ್ವಲ ಯೋಜನೆ ಮತ್ತು ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಹಲವು ಕುಟುಂಬಗಳಿಗೆ ಅಡುಗೆ ಅನಿಲ ವಿತರಿಸಲಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಕಡ್ಡಾಯವಾಗಿ ತಲುಪಿಸಬೇಕು ಎಂದು ಸಚಿವರು ಸೂಚಿಸಿದರು.

ತೂಕದಲ್ಲಿ ಎಚ್ಚರಿಕೆ

ಪಡಿತರ ಕಳಪೆ ಕಂಡುಬಂದಲ್ಲಿ ಮಾಹಿತಿ ನೀಡಬೇಕು. ಜೊತೆಗೆ 24 ಗಂಟೆಯೊಳಗೆ ಸರಿಪಡಿಸುವ ಕಾರ್ಯವಾಗಬೇಕು. ತೂಕ ಮತ್ತು ಅಳತೆಯಲ್ಲಿ ಮೋಸ ಮಾಡಬಾರದು. ಈ ಬಗ್ಗೆ ಆಗಾಗ ಪರಿಶೀಲನೆ ನಡೆಸಬೇಕು ಎಂದು ಸಚಿವರು ಹೇಳಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಲೋಪ ಕಂಡುಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರಲ್ಲದೆ, ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು ಎಂದು ಸೂಚಿಸಿದರು. ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಅಂತರ್ಜಾಲ ಸಂಪರ್ಕ ಇಲ್ಲದ ಕಡೆಗಳಲ್ಲಿ ಸಂಚಾರಿ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಮಳೆಗಾಲದ ಸಂದರ್ಭದಲ್ಲಿ ಗೋಧಿ ಕೆಟ್ಟು ಹೋಗುವ ಸಾಧ್ಯತೆ ಇದೆ. ಆದ್ದರಿಂದ ಗುಣಮಟ್ಟದ ಗೋಧಿ ಪೂರೈಸಬೇಕು. ಅಂಗನವಾಡಿಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಿದರು. ಕೊಡಗು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಹಲವು ಕುಟುಂಬಗಳು ನಾಲ್ಕು ಚಕ್ರದ ವಾಹನಗಳನ್ನು ಇಟ್ಟುಕೊಂಡಿದ್ದು, ಈ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಚಿವರ ಗಮನ ಸೆಳೆದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಮಾತನಾಡಿ ಪಡಿತರ

ವಹಿಸಬೇಕಿದೆ ಎಂದು ಸಲಹೆ ಮಾಡಿದರು.

ಆಹಾರ ಇಲಾಖೆ ಉಪ ನಿರ್ದೇಶಕ ಗೌರವ ಕುಮಾರ್ ಶೆಟ್ಟಿ ಮಾಹಿತಿ ನೀಡಿ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪ್ರತೀ ಕುಟುಂಬಕ್ಕೂ ಪಡಿತರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಮಡಿಕೇರಿ ತಾಲೂಕಿನಲ್ಲಿ 61, ಸೋಮವಾರಪೇಟೆ ತಾಲೂಕಿನಲ್ಲಿ 116, ವೀರಾಜಪೇಟೆ ತಾಲೂಕಿನಲ್ಲಿ 100 ಸೇರಿದಂತೆ ಒಟ್ಟು 277 ನ್ಯಾಯಬೆಲೆ ಅಂಗಡಿಗಳಿದ್ದು, ಜಿಲ್ಲೆಯಲ್ಲಿ 6 ಸಗಟು ಗೋದಾಮುಗಳಿವೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 1,38,034 ಕುಟುಂಬಗಳು ಪಡಿತರ ಚೀಟಿ ಹೊಂದಿದ್ದು, ಬಿಪಿಎಲ್ 99,520, ಅಂತ್ಯೋದಯ ಅನ್ನ ಯೋಜನೆ (ಎಎವೈ) 10,043, ಏಪಿಎಲ್ ಕಾರ್ಡು 28,471 ಕುಟುಂಬದವರು ಪಡಿತರ ಚೀಟಿ ಹೊಂದಿದ್ದಾರೆ. ಎಪಿಎಲ್ ಪಡಿತರ ಚೀಟಿದಾರರಿಗೂ ಆಹಾರ ವಿತರಿಸಲಾಗಿದೆ. ಅಕ್ಕಿ, ಗೋಧಿ, ತೊಗರಿ ಬೇಳೆಯನ್ನು ಉಚಿತವಾಗಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಶೇ. 93 ಸಾಧನೆ

ಜಿಲ್ಲೆಯ ಮುಟ್ಲು, ಹಮ್ಮಿಯಾಲ, ಸೂರ್ಲಬ್ಬಿ, ಕಾಂಡನಕೊಲ್ಲಿ ಮತ್ತಿತರ ಕಡೆಗಳಲ್ಲಿ ಮೊಬೈಲ್ ಸಂಚಾರಿ ವಾಹನದ ಮೂಲಕ ಆಹಾರ ಪೂರೈಸಲಾಗುತ್ತಿದ್ದು, ಶೇ.93.4ರಷ್ಟು ಪಡಿತರ ವಿತರಿಸಲಾಗಿದೆ. ಪಡಿತರ ಚೀಟಿಗಾಗಿ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಹೊಸದಾಗಿ ಸಲ್ಲಿಕೆ ಯಾಗಿದ್ದು, ಅವುಗಳನ್ನು ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲೆಯಲ್ಲಿ 124 ಅನರ್ಹ ಪಡಿತರ ಕುಟುಂಬಗಳನ್ನು ಗುರುತಿಸಿದ್ದು, ಅವುಗಳನ್ನು ಅರ್ಹ ಕುಟುಂಬಗಳನ್ನಾಗಿ ಮಾಡಿ ಎಪಿಎಲ್ ಕಾರ್ಡ್ ನೀಡಲಾಗಿದೆ ಎಂದು ಗೌರವ್ ಕುಮಾರ್ ಶೆಟ್ಟಿ ತಿಳಿಸಿದರು. ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ, ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ವಿತರಿಸಲಾಗುತ್ತಿದೆ. ಪ್ರತೀ ಕ್ವಿಂಟಾಲ್ 1,815 ರೂ.ನಲ್ಲಿ ಬೆಂಬಲ ಬೆಲೆಯಡಿ ಭತ್ತ ಖರೀದಿಸಲಾಗಿದೆ. 590 ರೈತರು ಹೆಸರು ನೋಂದಾಯಿಸಿದ್ದಾರೆ ಎಂದರು.

ತೂಕ ಮತ್ತು ಅಳತೆ ಇಲಾಖೆಯ ಸಹಾಯಕ ನಿಯಂತ್ರಕ ಲಿಂಗರಾಜು ಅವರು ಮಾಹಿತಿ ನೀಡಿದರು. ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಪಿ.ಸುಮನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ನಾನಾ ಇಲಾಖೆ ಅಧಿಕಾರಿಗಳು ಇದ್ದರು.