ಗುಡ್ಡೆಹೊಸೂರು, ಮೇ 29: ಹೈನುಗಾರಿಕೆಯನ್ನೇ ನಂಬಿಕೊಂಡು ಹಸುಗಳನ್ನು ಸಾಕಿಕೊಂಡು ಹಾಲು ಮಾರಾಟ ಮಾಡಿ ಜೀವನ ಸಾಗಿಸಿಕೊಂಡು ಬರುತ್ತಿರುವ ರೈತರ ಬಾಳಿಗೆ ಸಂಕಷ್ಟ ಬಂದೊದಗಿದೆ. ಪರಿಶ್ರಮದಿಂದ ಹಸುಗಳನ್ನು ಸಾಕಿ ಸಲಹಿ, ಹಾಲು ಕರೆದು ತಂದು ಮಾರಾಟ ಮಾಡುವ ಸಂದರ್ಭದಲ್ಲಿ ಹಾಲಿನ ಗುಣಮಟ್ಟ ಕಡಿಮೆ ಇದೆ ಎಂಬ ಕಾರಣದಿಂದ ತಿರಿಸ್ಕರಿಸಲ್ಪ ಡುತ್ತಿದ್ದು, ಬೇರೆ ವಿಧಿ ಇಲ್ಲದೆ ರೈತ ತಾನು ಕರೆದ ಹಾಲನ್ನು ನದಿ ನೀರಿಗೆ ಸುರಿದು ಚಿಂತೆಯೊಂದಿಗೆ ‘ಆಲ್ಕೋಹಾಲ್’ (ಮದ್ಯ) ಕುಡಿದು ಮನೆಗೆ ತೆರಳುತ್ತಿರುವ ಪರಿಸ್ಥಿತಿ ಕಂಡು ಬಂದಿದೆ. ಇದು ಗುಡ್ಡೆಹೊಸೂರು ಸುತ್ತಮುತ್ತಲಿನ ರೈತರ ಗೋಳಿನ ಕಥೆ...ಗುಡ್ಡೆಹೊಸೂರು ಸುತ್ತಮುತ್ತಲ ಗ್ರಾಮಗಳಲ್ಲಿ ನೂರಾರು ಮಂದಿ ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದು, ಪ್ರತಿನಿತ್ಯ ಕರೆಯುವ ಹಾಲನ್ನು ಇಲ್ಲಿನ ಹಾಲು ಉತ್ಪಾದಕರ ಸಂಘಕ್ಕೆ ತಂದು ಹಾಕುತ್ತಾರೆ. ಸಂಘದಿಂದ ಅನೇಕರು ಹಾಲನ್ನು ಖರೀದಿಸುತ್ತಾರೆ. ಉಳಿಕೆ ಯಾದ ಹಾಲನ್ನು ಸಂಘದವರು ಕೂಡಿಗೆ ಹಾಲಿನ ಡೈರಿಗೆ ಸರಬರಾಜು ಮಾಡುತ್ತಾರೆ.ಆದರೆ, ಕಳೆದ ಒಂದು ವಾರದಿಂದ ರೈತರು ತರುತ್ತಿರುವ ಹಾಲಿನ ದ್ರವಾಂಶ (ಗಟ್ಟಿ) ಕಡಿಮೆ ಇದೆ ಎಂಬ ಕಾರಣಕ್ಕಾಗಿ ವಾಪಸ್ ಕಳುಹಿಸಲಾಗುತ್ತಿದೆ. ಕೆ.ಎಂ.ಎಫ್. ಸಂಸ್ಥೆಯ ನಿಯಮಾನುಸಾರ ಹಾಲಿನ ಗಟ್ಟಿ ಅಂಶ ಶೇ. 29 ರಷ್ಟು ಇರಬೇಕು. ಆದರೀಗ ರೈತರು ತರುತ್ತಿರುವ ಹಾಲಿನಲ್ಲಿ ಈ ಅಂಶ ಕಡಿಮೆ ಎಂದು ವಾಪಸ್ ಕಳುಹಿಸಲಾಗುತ್ತಿದೆ.

(ಮೊದಲ ಪುಟದಿಂದ) ಸಾಮಾನ್ಯವಾಗಿ ಆರಂಭಿಕ ಮಳೆ ಬಿದ್ದ ಸಂದರ್ಭದಲ್ಲಿ ಚಿಗುರುವ ಹುಲ್ಲು ಸೇವನೆಯಿಂದ, ಹವಾಮಾನ ವೈಪರೀತ್ಯಗಳಿಂದಾಗಿ ಅಥವಾ ಪಶು ಆಹಾರದ ವ್ಯತ್ಯಾಸಗಳಿಂದಾಗಿ ಹಸುವಿನ ಹಾಲು ಕೊಂಚ ನೀರಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಹಾಲಿನ ದ್ರವಾಂಶ ಕಡಿಮೆಯಾಗುವ ಸಾಧ್ಯತೆಗಳಿವೆ. ಶೇಕಡವಾರು ಅಂಶ ಕಡಿಮೆ ಇದ್ದ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಹಾಲು ಕೊಂಡುಕೊಳ್ಳಲು ಅವಕಾಶವಿದೆ. ಆದರೆ, ಗುಡ್ಡೆಹೊಸೂರು ಸಂಘದಲ್ಲಿ ಹಾಲನ್ನು ಕೊಂಡುಕೊಳ್ಳದೆ ವಾಪಸ್ ಕಳುಹಿಸುತ್ತಿರುವುದು ಕಂಡುಬರುತ್ತಿದೆ. ಪ್ರತಿದಿನ 5 ರಿಂದ 35 ಲೀಟರ್‍ವರೆಗೆ ಹಾಲು ಕರೆಯುವ ರೈತರು ತಮ್ಮ ಹಾಲು ಖರೀದಿಯಾಗದೆ ಅದನ್ನು ರಸ್ತೆ ಬದಿ ಅಥವಾ ನದಿ ನೀರಿಗೆ ಸುರಿದು ಕಣ್ಣೀರಿನೊಂದಿಗೆ ಮನೆಗೆ ಮರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಇತರ ಬೆಳೆ, ಸಾಮಗ್ರಿಗಳಾದರೆ ಅವುಗಳನ್ನು ಕೊಂಚ ದಿನಗಳ ಕಾಲ ಸಂಗ್ರಹಿಸಿಟ್ಟುಕೊಳ್ಳಬಹುದು. ಆದರೆ ಹಾಲನ್ನು ಏನು ಮಾಡೋದು ಎಂಬದೇ ರೈತರ ಚಿಂತೆಯಾಗಿದ್ದು, ಶ್ರಮ ವಹಿಸಿ ಸಂಪಾದಿಸಿದ ಉತ್ಪನ್ನವನ್ನು ವಿಧಿಯಿಲ್ಲದೆ ಮಣ್ಣಿಗೆ, ನೀರಿಗೆ ಸುರಿಯುವಂತಾಗಿದೆ. ಈ ಹಿಂದೆಯಾಗಿದ್ದರೆ ಸಿಕ್ಕುವ ಬೆಲೆಗೆ ಹೊಟೇಲ್‍ಗಳಿಗಾದರೂ ನೀಡಬಹುದಿತ್ತು. ಆದರೀಗ ಕೊರೊನಾದಿಂದಾಗಿ ಹೊಟೇಲ್‍ಗಳು ಬಂದ್ ಆಗಿದ್ದು, ಆ ದಾರಿಯೂ ಇಲ್ಲದಾಗಿದೆ.

ದುಡಿದದ್ದು ಕೈಗೆ ಸಿಗಲಿಲ್ಲ ಎಂಬ ಚಿಂತೆಯಲ್ಲಿ ಹಲವು ಮಂದಿ ರೈತರು ತಮ್ಮ ಹಸುಗಳನ್ನು ಮಾರಾಟ ಮಾಡುತ್ತಿರುವ ಬೆಳವಣಿಗೆ ಕೂಡ ಕಂಡುಬರುತ್ತಿದೆ. ಕಳೆದ 6 ವರ್ಷಗಳಿಂದ ಪ್ರತಿನಿತ್ಯ 35 ಲೀಟರ್‍ನಷ್ಟು ಹಾಲನ್ನು ತಂದು ಹಾಕುತ್ತಿದ್ದ ರೈತರೋರ್ವರು ಕಳೆದ ಮೂರು ದಿನಗಳಿಂದ ಹಾಲು ತಿರಸ್ಕರಿಸಲ್ಪಟ್ಟಿದ್ದರಿಂದ ಮನನೊಂದು ಹಾಲನ್ನು ನದಿಗೆ ಸುರಿದು ಬೇಜಾರಿನಲ್ಲಿ ಕೈಯಲ್ಲಿದ್ದ ಹಣದಲ್ಲಿ ಮದ್ಯ ಸೇವಿಸಿ ಮನೆಗೆ ಮರಳಿದ್ದಲ್ಲದೆ, ಇದ್ದ ಮೂರು ಹಸುಗಳ ಪೈಕಿ ಎರಡನ್ನು ಮಾರಾಟ ಮಾಡಿ ಕಣ್ಣೀರಿಡುತ್ತಿರುವ ವಿಚಾರ ತಿಳಿದು ಬಂದಿದೆ.

ಇತ್ತ ಸಂಘದ ವತಿಯಿಂದ ಕಳೆದ ತಿಂಗಳು ರೈತರಿಂದ ರೂ. 23 ಹಣ ನೀಡಿ (ಲೀಟರಿಗೆ) ಖರೀದಿಸಿದ ಹಾಲನ್ನು ಹಾಸನ ಹಾಲು ಒಕ್ಕೂಟದವರು ಕೇವಲ ರೂ. 9ಕ್ಕೆ ಖರೀದಿಸಿದ್ದು, ಸಂಘಕ್ಕೆ ರೂ. 1.25 ಲಕ್ಷ ನಷ್ಟ ಸಂಭವಿಸಿದೆ ಎಂದು ಸಂಘದ ಕಾರ್ಯದರ್ಶಿ ಬಿ.ಪಿ. ಗುರುಬಸಪ್ಪ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇದೀಗ ಕೆಎಂಎಫ್‍ನ ವಿಸ್ತರಣಾಧಿಕಾರಿಗಳು ಗುಡ್ಡೆಹೊಸೂರು ಸಂಘದಲ್ಲಿ ಹಾಲನ್ನು ಪರೀಕ್ಷಿಸಿ, ಗುಣಮಟ್ಟವಿಲ್ಲದ್ದನ್ನು ವಾಪಸ್ ಕಳುಹಿಸುತ್ತಿರುವ ಬೆಳವಣಿಗೆಯಾಗಿದೆ. ಇದರಿಂದಾಗಿ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ’ ಎಂಬ ನಾಣ್ಣುಡಿಯಂತೆ ಇಲ್ಲಿನ ರೈತರ ಪರಿಸ್ಥಿತಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿ ರೈತರ ಸಂಕಷ್ಟ ಪರಿಹರಿಸಬೇಕಾಗಿದೆ.

-ಕುಡೆಕಲ್ಲು ಗಣೇಶ್