ವೀರಾಜಪೇಟೆ, ಮೇ 29: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆಗಳಲ್ಲಿ ನಿನ್ನೆಯಿಂದ ಹುಚ್ಚು ನಾಯಿಯು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಇಂದು ಅಪರಾಹ್ನದ ತನಕ ಸುಮಾರು 21 ಮಂದಿಗೆ ಈ ನಾಯಿ ಕಡಿದಿದ್ದು, ಇಲ್ಲಿನ ಪಟ್ಟಣ ಪಂಚಾಯಿತಿ ನೌಕರರು ಹರ ಸಾಹಸ ಪಟ್ಟು ಅಪರಾಹ್ನ ಸುಮಾರು 2-30 ರ ಸಮಯದಲ್ಲಿ ಇಲ್ಲಿನ ತಾಲೂಕು ಕಚೇರಿ ಬಳಿಯಲ್ಲಿ ನಾಯಿಯನ್ನು ಕಲ್ಲು, ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾರೆ.ಇಂದು ಬೆಳಿಗ್ಗೆ ಇಲ್ಲಿನ ಅಯ್ಯಪ್ಪ ಬೆಟ್ಟ, ಸುಂಕದ ಕಟ್ಟೆಯಿಂದ ಸಂಚರಿಸಿ ಬಂದ ಹುಚ್ಚು ನಾಯಿ ಇಲ್ಲಿನ ಮೊಗರಗಲ್ಲಿಯ ಮೊಹಿಸಿನ್ (30), ಉಮೇಶ್ (21), ಶ್ರೀನಿವಾಸ (42), ಅಮೀನ್, ಚಂದ್ರು (60), ಶಾಹಿದಾ (40), ಅಜ್ಮೀರ್ (53) ಸೇರಿದಂತೆ ಚಿಕ್ಕಪೇಟೆ, ಮೀನುಪೇಟೆ, ಗೋಣಿಕೊಪ್ಪ ರಸ್ತೆಯ ವಿದ್ಯಾನಗರ, ಗೋಣಿಕೊಪ್ಪ ರಸ್ತೆಯಲ್ಲಿಯೂ ಒಟ್ಟು 21 ಮಂದಿಗೆ ಹುಚ್ಚುನಾಯಿ ಕಚ್ಚಿದೆ.ಇಂದು ಅಪರಾಹ್ನ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆವರಣ ದಲ್ಲಿದ್ದ ಮಹಿಳಾ ಪೊಲೀಸ್ ಪೇದೆ, ಶುಶ್ರೂಷಕಿ ಹಾಗೂ 12 ವರ್ಷದ ಬಾಲಕಿಗೂ ಹುಚ್ಚು ನಾಯಿ ಕಡಿದಿರು ವುದರಿಂದ (ಮೊದಲ ಪುಟದಿಂದ) ವೀರಾಜಪೇಟೆ ಪಟ್ಟಣದ ನಿವಾಸಿಗಳು ಆತಂಕಗೊಂಡಿದ್ದಾರೆ. ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳು ಕೊರೊನ ವೈರಸ್ ಭೀತಿಯ ನಡುವೆಯೂ ನಾಯಿ ಕಡಿತದ ರೋಗಿಗಳಿಗೆ ಚಿಕಿತ್ಸೆ ನೀಡುವಂತಾಗಿದೆ ಕೆಲಸದ ಒತ್ತಡವೂ ಹೆಚ್ಚಿದೆ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಹುಚ್ಚು ನಾಯಿಯನ್ನು ಹಿಡಿಯಲು ಪಟ್ಟಣ ಪಂಚಾಯಿತಿಯ ಸುಮಾರು 7 ಮಂದಿ ಸ್ವಚ್ಛತಾ ನೌಕರರು, ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಬೀದಿಗಳಲ್ಲಿ ಶೋಧ ನಡೆಸಿದ್ದು ಅಪರಾಹ್ನದ ವೇಳೆಗೆ ಹುಚ್ಚು ನಾಯಿ ಇಲ್ಲಿನ ತಾಲೂಕು ಕಚೇರಿ ಬಳಿ ಪತ್ತೆಯಾಗಿದೆ.

ನಿನ್ನೆ ದಿನ ಬೆಳಿಗ್ಗೆಯೇ ಸುಮಾರು 5 ಮಂದಿಗೆ ಹುಚ್ಚು ನಾಯಿ ಕಡಿದಿದೆ ಎಂದು ಸಾರ್ವಜನಿಕರು ಪಟ್ಟಣ ಪಂಚಾಯಿತಿಗೆ ಮೌಖಿಕ ದೂರು ನೀಡಿದ್ದರು. ಹುಚ್ಚು ನಾಯಿಯಿಂದ ಕಡಿತಕ್ಕೊಳಗಾದ ಎಲ್ಲರೂ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವರ್ಷಂಪ್ರತಿಯಂತೆ ಈ ವರ್ಷ ಪಟ್ಟಣದಲ್ಲಿ ಅನಾವಶ್ಯಕವಾಗಿ ಸಂಚರಿಸುವ ಅಲೆಮಾರಿ ನಾಯಿಗಳನ್ನು ಹಿಡಿಯಲು ವಿಫ¯ಗೊಂಡಿದ್ದಾರೆ. ಪಟ್ಟಣದಲ್ಲಿ ಹುಚ್ಚು ನಾಯಿಯ ಸಂಚಾರವಿರುವುದಾಗಿ ಮೂರು ದಿನಗಳ ಹಿಂದೆ ಸಾರ್ವಜನಿಕರು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸದಸ್ಯರಾದ ಸಿ.ಕೆ. ಪೃಥ್ವಿನಾಥ್ ದೂರಿದ್ದಾರೆ.

ಪಟ್ಟಣದಲ್ಲಿರುವ ಅಲೆಮಾರಿ ನಾಯಿಗಳನ್ನು ಹಿಡಿಯಲು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿಯೇ ನಾಯಿ ಹಿಡಿಯುವ ತಂಡಕ್ಕೆ ತಿಳಿಸಲಾಗಿದೆ ಆದರೆ ಕೋವಿಡ್ 19 ನಿರ್ಬಂಧದ ಹಿನ್ನೆಲೆಯಲ್ಲಿ ಈ ತಂಡ ಪಟ್ಟಣಕ್ಕೆ ಬರಲು ಸಾಧ್ಯವಾಗಲಿಲ್ಲ. ಈಗ ನಾಳೆ ಬೆಳಗಿನಿಂದಲೇ ವೀರಾಜಪೇಟೆ ಪಟ್ಟಣದಾದ್ಯಂತ ನಾಯಿ ಹಿಡಿಯುವ ಕಾರ್ಯ ನಡೆಯಲಿದೆ ಎಂದು ಪ.ಪಂ. ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಪ್ರತಿಕ್ರಿಯಿಸಿದ್ದಾರೆ.