ಗೋಣಿಕೊಪ್ಪಲು, ಮೇ 29: ಮಾದಕ ಗಾಂಜಾ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಸ್ವಾಸ್ತ್ಯ ಹಾಳು ಮಾಡುವ ಮೂಲಕ ಯುವಕರನ್ನು ಅಡ್ಡ ದಾರಿ ಹಿಡಿಯುವತ್ತ ಪ್ರೋತ್ಸಾಹಿಸುತ್ತಿದ್ದ ಯುವಕರನ್ನು ಗೋಣಿಕೊಪ್ಪಲುವಿನ ಶಾಫಿ ಮುಸ್ಲಿಂ ಜಮಾಅತ್ ಜಿಲ್ಲೆಯಲ್ಲಿ ಮೊದಲ ಬಾರಿಗೆ ಜಮಾಅತ್‍ನ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸುವ ಮೂಲಕ ವಿನೂತನ ಕ್ರಮ ಕೈಗೊಂಡಿದೆ. ಮುಸ್ಲಿಂ ಸಮುದಾಯದ ಯುವಕರು ಗಾಂಜಾ ದಂಧೆಯಲ್ಲಿ ತೊಡಗಿಸಿಕೊಂಡ ಹಿನ್ನೆಲೆ ಗಮನಿಸಿದ ಗೋಣಿಕೊಪ್ಪಲುವಿನ ಶಾಫಿ ಮುಸ್ಲಿಂ ಜಮಾಅತ್ ಸಮಿತಿ ಇಂತಹ ದಂಧೆಗೆ ಕಡಿವಾಣ ಹಾಕಲು ಹೊಸ ಯೋಜನೆ ರೂಪಿಸಿದೆ. ಆಡಳಿತ ಮಂಡಳಿಯು ವ್ಯಾಪಕ ಚರ್ಚೆ ನಡೆಸುವ ಮೂಲಕ ಇಂತಹ ದಿಟ್ಟ ನಿರ್ಧಾರ ಕೈಗೊಂಡಿದೆ. ಆರಂಭದಲ್ಲಿ ಗೋಣಿಕೊಪ್ಪಲುವಿನ ಇಬ್ಬರು ಯುವಕರ ಮೇಲೆ ಇಂತಹ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆ ಸಮುದಾಯದಿಂದ ಇವರನ್ನು ಹೊರ ಇಟ್ಟಿದ್ದಾರೆ. ಇದರಿಂದ ಮುಸ್ಲಿಂ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡುವ ನಿರ್ಧಾರ ಕೈಗೊಂಡಿರುವ ಆಡಳಿತ ಮಂಡಳಿಯ ಕ್ರಮಕ್ಕೆ ಮುಸ್ಲಿಂ ಸಮುದಾಯ ಹಾಗೂ ಇತರ ಸಮುದಾಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ಕ್ರಮಗಳ ಬಗ್ಗೆ ಕೆಲವು ಗಾಂಜಾ ವ್ಯಸನಿಯ ಯುವಕರಿಂದ ಅಪಸ್ವರಗಳು ಹೊರತುಪಡಿಸಿದರೆ, ಬಹುತೇಕ ಮಂದಿ ಕ್ರಮವನ್ನು ಶ್ಲಾಘಿಸಿದ್ದಾರೆ.

ಇತ್ತೀಚೆಗೆ ಕೊಡಗು ಪೊಲೀಸ್ ತಂಡ ಕೆಲವು ಯುವಕರನ್ನು ಬಂಧಿಸುವ ಮೂಲಕ ದೊಡ್ಡ ಗಾಂಜಾ ದಂಧೆಯನ್ನು ಬಯಲಿಗೆ ತಂದಿದ್ದರು. ಈ ತಂಡದಲ್ಲಿ ಗೋಣಿಕೊಪ್ಪಲುವಿನ ಇಬ್ಬರು ಯುವಕರು ಗುರುತಿಸಿಕೊಂಡ ಕಾರಣ ಗಾಂಜಾ ದಂಧೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಗೋಣಿಕೊಪ್ಪ ಜಮಾಅತ್ ಸಮಿತಿ ಅಂತಿಮವಾಗಿ ಇಂತಹ ನಿರ್ಧಾರಕ್ಕೆ ಬಂದಿದೆ. ಯುವಕರ ಪೋಷಕರಿಗೆ ಜಮಾಅತ್ ಸಮಿತಿಯಿಂದ ನೋಟೀಸ್ ಜಾರಿ ಗೊಳಿಸಲಾಗಿದ್ದು, ಜಮಾಅತ್‍ನ ಎಲ್ಲ ಕಾರ್ಯಕ್ರಮಕ್ಕೆ ನಿಷೇಧ ಹೇರಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೇ ಮುಖ್ಯ ಗುರಿಯಾಗಿರಿಸಿಕೊಂಡು ತಮ್ಮ ವ್ಯಾಪಾರ ಕುದುರಿಸುತ್ತಿದ್ದ ಯುವಕರು ಮೈ ಬಗ್ಗಿಸಿ ದುಡಿಯಲಾರದೆ ಗಾಂಜಾ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ವಿದ್ಯಾರ್ಥಿ ಸಮೂಹವನ್ನು ಹಾದಿ ತಪ್ಪಿಸುತ್ತಿದ್ದ ಇಂತಹ ಯುವಕರು ಇದರಲ್ಲಿಯೇ ಜೀವನ ಸಾಗಿಸುತ್ತಿದ್ದರು.

(ಮೊದಲ ಪುಟದಿಂದ) ಆಯಾಕಟ್ಟಿನ ಪ್ರದೇಶಗಳಲ್ಲಿ ಯುವಕರನ್ನು ಬರಮಾಡಿಕೊಂಡು ಗಾಂಜಾ ಸರಬರಾಜು ಮಾಡುತ್ತಿದ್ದರು. ಗಾಂಜಾವನ್ನು ಜಿಲ್ಲೆಯ ವಿವಿಧ ಕಡೆಗಳಿಗೆ ವಿತರಿಸುವ ಸಲುವಾಗಿ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದ್ದರು. ಮೈಸೂರು ಸೇರಿದಂತೆ ಇತರ ಪ್ರದೇಶಗಳಿಂದ ಗಾಂಜಾವನ್ನು ಕಾನೂನು ಬಾಹಿರವಾಗಿ ಸಗಟು ರೂಪದಲ್ಲಿ ತರುವ ಮೂಲಕ ಇವುಗಳನ್ನು ಸಣ್ಣ ಪ್ಯಾಕೇಟ್‍ಗಳನ್ನಾಗಿಸಿ ಮಾರಾಟ ಮಾಡುತ್ತಿದ್ದರು. ಈ ದುಷ್ಕøತ್ಯಕ್ಕೆ ಕೆಲವು ಯುವಕರು ನೇರವಾಗಿ ಬಲಿಯಾಗುತ್ತಿದ್ದರು. ಹೆತ್ತವರು ಇಂತಹ ಮಕ್ಕಳಿಂದ ಸಮಾಜದಲ್ಲಿ ತಲೆ ತಗ್ಗಿಸಿ ನಡೆದಾಡುವಂತ ಪರಿಸ್ಥಿತಿ ಎದುರಾಗಿತ್ತು.

ಗಾಂಜಾ ಖರೀದಿಸಲು ಮನೆಯಲ್ಲಿರುವ ವಸ್ತುಗಳನ್ನು ಅಪಹರಿಸಿ ನಗರ ಪ್ರದೇಶಗಳಲ್ಲಿ ಇವುಗಳನ್ನು ಮಾರಾಟ ಮಾಡುವ ಮೂಲಕ ಬಂದ ಹಣದಿಂದ ಗಾಂಜಾ ಖರೀದಿಸುತ್ತಿದ್ದರು. ಶಾಲಾ-ಕಾಲೇಜುಗಳಿಗೆ ತೆರಳದೆ ಗಾಂಜಾ ವ್ಯಸನಿಗಳಾಗಿ ನಗರದಲ್ಲಿ ಅಡ್ಡಾಡುವುದು ಸಾಮಾನ್ಯವಾಗಿತ್ತು. ಪೊಲೀಸ್ ಇಲಾಖೆ ಇಂತಹ ಗಾಂಜಾ ಮಾರಾಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಯಾರ ಗಮನಕ್ಕೂ ಬಾರದ ರೀತಿಯಲ್ಲಿ ಈ ದಂಧೆ ನಡೆಯುತ್ತಿತ್ತು. ಬಹುತೇಕ ಯುವ ಸಮುದಾಯ ಇದಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದೆ. ಇಂತಹ ದಂಧೆಯಲ್ಲಿ ತೊಡಗಿಕೊಂಡ ಯುವಕರಿಗೆ ಪೊಲೀಸರು ಹಲವು ಬಾರಿ ತಮ್ಮ ಬದುಕನ್ನು ಬದಲಾಯಿಸಿಕೊಳ್ಳುವಂತೆ ಸೂಚನೆ ನೀಡಿದ್ದರೂ ಯುವಕರು ಮಾತ್ರ ಈ ದಂಧೆಯನ್ನು ಮುಂದುವರೆಸುತ್ತಲೇ ಬಂದಿದ್ದರು.

ಗಾಂಜಾ ವ್ಯಸನಿಗಳ ಬಗ್ಗೆ ಪೋಷಕರು ವಿಶೇಷ ಗಮನ ಹರಿಸಬೇಕು. ತಮ್ಮ ಮಕ್ಕಳು ದಿನನಿತ್ಯ ನಡೆಸುವ ಚಟುವಟಿಕೆಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಗಾಂಜಾ ಮಾರಾಟದ ಸುಳಿವು ಸಿಕ್ಕಲ್ಲಿ ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸುವ ಕೆಲಸ ನಡೆದಲ್ಲಿ ಇಂತಹ ದಂಧೆಯನ್ನು ನಿಗ್ರಹಿಸಲು ಪೊಲೀಸರಿಗೆ ಅನುಕೂಲವಾಗುತ್ತದೆ.

- ಹೆಚ್.ಕೆ. ಜಗದೀಶ್