ಶ್ರೀಮಂಗಲ, ಮೇ 27: ಕೊಡಗಿನಲ್ಲಿರುವ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಪ್ರಮುಖರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರನ್ನು ಮಡಿಕೇರಿಯಲ್ಲಿ ಭೇಟಿ ಮಾಡಿ ಖಾಸಗಿ ಶಾಲೆಗಳು ಕೋವಿಡ್ -19ರ ಪರಿಸ್ಥಿತಿಯಲ್ಲಿ ಸಮಸ್ಯೆಗೆ ಸಿಲುಕಿದ್ದು, ಇವುಗಳ ಪರಿಹಾರಕ್ಕೆ ಮನವಿ ಮಾಡಿದರು.

ಕೋವಿಡ್-19ರ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳು ಶಾಲೆ ನಿರ್ವಹಣೆ, ಸಿಬ್ಬಂದಿ ವೇತನ ಹಾಗೂ ಇತರ ವಿಷಯಗಳಿಂದ ಹಲವಾರು ತೊಂದರೆ ಅನುಭವಿಸುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ವೇತನ ನೀಡಲಾಗದ ಪರಿಸ್ಥಿತಿ ಒದಗಿರುವುದರಿಂದ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವಂತೆ, ವಿದ್ಯುಚ್ಛಕ್ತಿ ಬಿಲ್ ಹಾಗೂ ಕಟ್ಟಡ ತೆರಿಗೆ ವಿನಾಯಿತಿ ನೀಡಬೇಕಾಗಿ ಮನವಿ ಮಾಡಿದರು. ಖಾಸಗಿ ಶಾಲೆಗಳಿಗೆ ನೀಡಲಾಗುತ್ತಿರುವ ಆರ್.ಟಿ.ಇ. ಕಂತಿನ ಹಣ ಬಿಡುಗಡೆ ಮಾಡಬೇಕಾಗಿ, 2019-20ನೇ ಸಾಲಿನ ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳ ಶುಲ್ಕ ವಸೂಲು ಮಾಡಲು ಅನುಮತಿ ನೀಡ ಬೇಕಾಗಿಯೂ ಮನವಿ ಮಾಡಲಾಗಿದೆ. ಸರ್ಕಾರದ ಆದೇಶದಂತೆ 2020-21ರಿಂದ ಶಾಲಾ ವೇಳೆ ಬದಲಾವಣೆಯನ್ನು ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಅನುಕರಿಸುವುದು ಕಷ್ಟವಾಗಿರುವು ದರಿಂದ ಇದನ್ನು ಮರು ಪರಿಶೀಲಿಸಬೇಕಾಗಿ ಕೋರಲಾಗಿದೆ.

ಎಲ್ಲಾ ವರ್ಗದ ಕಾರ್ಮಿಕರಿಗೆ ಪರಿಹಾರ ನೀಡಿದಂತೆ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಪರಿಹಾರ ನೀಡಬೇಕಾಗಿ ಖಾಸಗಿ ಶಾಲಾ ಆಡಳಿತ ಮಂಡಳಿ ಪರವಾಗಿ ಆಡಳಿತ ಮಂಡಳಿ ಅಧ್ಯಕ್ಷ ಕೋಳೇರ ಝರು ಗಣಪತಿ ಹಾಗೂ ಕಾರ್ಯದರ್ಶಿ ಕೋಟ್ರಂಗಡ ತಿಮ್ಮಯ್ಯ ಅವರು ಮನವಿ ಪತ್ರದಲ್ಲಿ ಕೋರಿದ್ದು, ಇದರ ಬಗ್ಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸುವುದಾಗಿ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಹಾಗೂ ಇತರರು ಹಾಜರಿದ್ದರು.