ಮಡಿಕೇರಿ, ಮೇ 26: ಕೊಡಗು ಜಿಲ್ಲೆಯಲ್ಲಿ ಜೀವನ ನಿರ್ವಹಣೆಗಾಗಿ ಬಂದು ನೆಲೆಸಿರುವ ವಲಸಿಗರಿಗೆ ಆತ್ಮ ನಿರ್ಭರ್ ಭಾರತ್ ಯೋಜನೆ ಅಡಿಯಲ್ಲಿ ವಲಸಿಗರಿಗೆ ಮೇ ಮತ್ತು ಜೂನ್ 2020ರ ಪ್ರತೀ ಮಾಹೆಗೆ 5 ಕೆ.ಜಿ. ಅಕ್ಕಿ ಹಾಗೂ 1 ಕೆ.ಜಿ. ಕಡಲೆಕಾಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ಹೊರ ರಾಜ್ಯ, ಹೊರ ಜಿಲ್ಲೆ, ಹೊರ ತಾಲೂಕಿನಿಂದ ಜೀವನ ನಿರ್ವಹಣೆಗಾಗಿ ಬಂದು ನೆಲೆಸಿರುವ ವಲಸಿಗರು ಈ ಯೋಜನೆಯ ಸದುಪಯೋಗಪಡೆದು ಕೊಳ್ಳಬಹುದು.
ಕೇಂದ್ರ ಸರ್ಕಾರದ ಆದೇಶದಂತೆ ಈ ಯೋಜನೆಯಡಿ ಬರುವ ಫಲಾನುಭವಿಗಳಿಗೆ ರಾಜ್ಯದಲ್ಲಿ ಅಥವಾ ಬೇರಾವುದೇ ರಾಜ್ಯಗಳಲ್ಲಿ ಪಡಿತರ ಚೀಟಿ ಹೊಂದಿರಬಾರದು. ಇದನ್ನು ಪರಿಶೀಲಿಸಿ ಖಾತ್ರಿಪಡಿಸಲು ಎಲ್ಲಾ ಫಲಾನುಭವಿಗಳಿಂದಲೂ ಅವರ ಆಧಾರ್ ಸಂಖ್ಯೆಯನ್ನು ಪಡೆದು ಆನ್‍ಲೈನ್ ತಂತ್ರಾಂಶದಲ್ಲಿ ಪರಿಶೀಲಿಸಿ ವಿತರಿಸಲಾಗುತ್ತದೆ. ಹಾಗಾಗಿ ಪ್ರತಿ ಫಲಾನುಭವಿಯು ಆಧಾರ್ ಸಂಖ್ಯೆಯ ಮುಖಾಂತರ ಪರಿಶೀಲಿಸಿ ಅವರ ಆಧಾರ್ ಸಂಖ್ಯೆಗೆ ಜೋಡಣೆಯಾಗಿ ರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬಂದ ನಂತರ, ಈ ಓಟಿಪಿಯನ್ನು ದಾಖಲಿಸಿ ಪಡಿತರ ವಿತರಣೆಗೆ ಕ್ರಮವಹಿಸಲಾಗುವುದು ಅಥವಾ ಬಯೋಮೆಟ್ರಿಕ್ ಮುಖಾಂತರ ಪಡಿತರ ವಿತರಣೆಗೆ ಕ್ರಮವಹಿಸಲಾಗುವುದು.
ತಾ. 27 ರಿಂದ 31 ರವರೆಗೆ 2020ರ ಮೇ ಮಾಹೆಯ ಅಕ್ಕಿ ವಿತರಿಸಲಾಗುವುದು. ಜೂನ್ 1 ರಿಂದ ಜೂನ್ 10 ರವರೆಗೆ ಜೂನ್ ಮಾಹೆಯ ಅಕ್ಕಿ ಮತ್ತು ಮೇ ಮತ್ತು ಜೂನ್ ಮಾಹೆಗಳ ಕಡಲೆಕಾಳನ್ನು ವಿತರಣೆ ಮಾಡಲಾಗುವುದು.
ಕೋವಿಡ್-19 ವೈರಸ್ ಹರಡುವ ಭೀತಿ ಇರುವುದರಿಂದ ಫಲಾನುಭವಿ ಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನೂಕು ನುಗ್ಗಲಿಗೆ ಅವಕಾಶ ನೀಡದೆ ಆಹಾರ ಧಾನ್ಯಗಳನ್ನು ಪಡೆದುಕೊಳ್ಳಲು ಕೋರಿದೆ.
ಹೆಚ್ಚಿನ ಮಾಹಿತಿಗೆ ತಾಲೂಕು ಆಹಾರ ಶಿರಸ್ತೆದಾರರು ಆಹಾರ ನಿರೀಕ್ಷಕ ಮಡಿಕೇರಿ ತಾಲೂಕಿಗೆ ಜಿ.ಜಿ. ಪ್ರಭುಶಂಕರ್ ಮೊ.ಸಂ. 9972364303, ಸೋಮವಾರಪೇಟೆ ತಾಲೂಕಿಗೆ ಎಲ್. ಮಂಜುನಾಥ್ 9164272144, ಕೆ.ಸಿ.ರಾಮಚಂದ್ರ 8553869697 ಮತ್ತು ವೀರಾಜಪೇಟೆ ತಾಲೂಕಿಗೆ ಎಸ್.ಚಂದ್ರನಾಯಕ 9900598522ನ್ನು ಸಂಪರ್ಕಿಸ ಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.