ವೀರಾಜಪೇಟೆ, ಮೇ 26: ಕೊಡಗು-ಕೇರಳ ಗಡಿ ಪ್ರದೇಶ ಮಾಕುಟ್ಟದ ಕಾಕೇತೋಡಿನ ಶ್ರೀ ಭಗವತಿ ದೇವಾಲಯದಲ್ಲಿ ಮದುವೆಗಾಗಿ ಸಿದ್ಧತೆ ಮಾಡಿಕೊಂಡು ಬಂದಿದ್ದ ಕೇರಳ ರಾಜ್ಯದ ಇರಿಟ್ಟಿಯ ವರ ಹಾಗೂ ಸುಂಟಿಕೊಪ್ಪದ ವಧುವಿನ ಕಡೆಯವರು ಸೇರಿದಂತೆ ಎರಡು ಕಡೆಯ ಮದುವೆ ದಿಬ್ಬಣವನ್ನು ಮಾಕುಟ್ಟ ಚೆಕ್‍ಪೋಸ್ಟ್‍ನಲ್ಲಿ ಪೊಲೀಸರು, ಅಧಿಕಾರಿಗಳು ಹಿಂದಕ್ಕೆ ಕಳುಹಿಸಿದ್ದಾರೆ.

ಕೊರೊನಾ ವೈರಸ್ ಲಾಕ್‍ಡೌನ್ ನಿರ್ಬಂಧದ ಮೊದಲೇ ಸುಂಟಿಕೊಪ್ಪದ ವಧು ಹಾಗೂ ಕೇರಳದ ಇರಿಟ್ಟಿಯ ವರನಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ ಮಾರ್ಚ್ 22 ರಿಂದ ಲಾಕ್‍ಡೌನ್ ನಿರಂತರವಾಗಿ ಮುಂದುವರೆಯುತ್ತಿರುವ ಹಿನ್ನೆಲೆ ವಿವಾಹದ ದಿನಾಂಕ ಗೊತ್ತುಪಡಿಸಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ಲಾಕ್‍ಡೌನ್ ಸಡಿಲಗೊಂಡಿದ್ದರಿಂದ ಎರಡು ಕಡೆಯವರು ನಿನ್ನೆ ದಿನಾಂಕ ನಿಗದಿಪಡಿಸಿ ಮಾಕುಟ್ಟದ ಕಾಕೇತೋಡಿನ ಭಗವತಿ ದೇವಸ್ಥಾನದಲ್ಲಿ ಮದುವೆಗೆ ಮುಂದಾಗಿದ್ದರು.

ಸುಂಟಿಕೊಪ್ಪದ ವಧುವಿನ ಕಡೆಯವರನ್ನು ಪೆರುಂಬಾಡಿ ಚೆಕ್‍ಪೋಸ್ಟ್‍ನಲ್ಲಿ ತಡೆದು ಹಿಂದಕ್ಕೆ ಕಳಿಸಿದರೆ, ಕೇರಳದ ಇರಿಟ್ಟಿಯ ವರನ ಕಡೆಯವರನ್ನು ಮಾಕುಟ್ಟ ಚೆಕ್‍ಪೋಸ್ಟ್‍ನಲ್ಲಿಯೇ ತಡೆದು ಹಿಂದಕ್ಕೆ ಕಳಿಸಲಾಗಿದೆ.

ಕಂದಾಯ ಇಲಾಖೆಯ ಅಧಿಕಾರಿಗಳ ಪ್ರಕಾರ ಈ ಎರಡು ಕಡೆಯವರು ಮದುವೆಗೂ ಅನುಮತಿ ಪಡೆದಿರಲಿಲ್ಲ ಎಂದು ಗೊತ್ತಾಗಿದೆ.