ಶನಿವಾರಸಂತೆ, ಮೇ 24: ಪಟ್ಟಣದಲ್ಲಿ ಶನಿವಾರಸಂತೆ ಹೊರಗೆ ಬೀದಿ ಬದಿಯಲ್ಲಿ ತರಕಾರಿ ಮಾರುವವರಿಂದ ರೂ. 100 ಸುಂಕ ವಸೂಲಿ ಮಾಡುತ್ತಿದ್ದುದನ್ನು ಕರವೇ (ಶಿವರಾಮೇಗೌಡ ಬಣ) ಕಾರ್ಯಕರ್ತರು ಖಂಡಿಸಿ, ವಿರೋಧ ವ್ಯಕ್ತಪಡಿಸಿದ್ದಾರೆ. ಕೋವಿಡ್ -19 ಲಾಕ್‍ಡೌನ್ ಹಿನ್ನೆಲೆ ಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ಶನಿವಾರಸಂತೆ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಸಂತೆಯನ್ನು ರದ್ದುಪಡಿಸಲಾಗಿದೆ. ಆದರೆ ಕೆಲವು ಸಣ್ಣ ರೈತರು ತಾವು ಗದ್ದೆಯಲ್ಲಿ ಮನೆ ಹಿತ್ತಲಿನಲ್ಲಿ ಬೆಳೆದಿರುವ ತರಕಾರಿಯನ್ನು ತಂದು ಮಾರುಕಟ್ಟೆ ಹೊರಭಾಗದ ರಸ್ತೆಯಲ್ಲಿ ಕುಳಿತು ಮಾರುತ್ತಾರೆ. ಸುಂಕ ವಸೂಲಿ ವಹಿಸಿಕೊಂಡಿರುವ ವ್ಯಕ್ತಿ ಸಂತೆ ನಡೆಯದಿದ್ದರೂ ರೈತರಿಂದ ಸುಂಕ ವಸೂಲಿ ಮಾಡುತ್ತಿರುವುದನ್ನು ಕಂಡು ಕಾರ್ಯಕರ್ತರು ವಿರೋಧಿಸಿದರು.

ಲಾಕ್‍ಡೌನ್ ಸಂಪೂರ್ಣ ತೆರವುಗೊಂಡು ಸಂತೆ ಪುನರಾರಂಭ ಆಗುವವರೆಗೆ ಗ್ರಾಮ ಪಂಚಾಯಿತಿ ಸುಂಕ ವಸೂಲಿಯನ್ನು ನಿಲ್ಲಿಸಬೇಕು ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಫಾನ್ಸಿಸ್ ಡಿಸೋಜ, ಕಾರ್ಯದರ್ಶಿ ಪ್ರವೀಣ್, ಹೋಬಳಿ ಘಟಕದ ಅಧ್ಯಕ್ಷ ಆನಂದ್ ಹಾಗೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.