ಮಡಿಕೇರಿ, ಮೇ 24: ಪ್ರಸ್ತುತದ ಸನ್ನಿವೇಶದಲ್ಲಿ ಎಲ್ಲಾ ತುರ್ತು ಸಂದರ್ಭಗಳೂ ಸೇರಿದಂತೆ ದೈನಂದಿನ ಚಟುವಟಿಕೆಗಳು ಸಹಜವಾಗಿ ಮುಂದುವರಿಯುವ ನಿಟ್ಟಿನಲ್ಲಿ ಅತ್ಯಗತ್ಯವಾಗಿ ಬೇಕಾಗಿರುವದು ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ಎಂಬದು ವಾಸ್ತವವಾಗಿದೆ. ಆದರೆ, ಈ ಎರಡು ಇಲಾಖೆಗಳಲ್ಲಿಯೂ ಮಳೆಗಾಲದಲ್ಲಿ ಗಂಭೀರ ಸಮಸ್ಯೆ ತಲೆದೋರುವ ಸನ್ನಿವೇಶ ಕಂಡು ಬಂದಿದೆ. ಏಕೆಂದರೆ, ಎರಡು ಇಲಾಖೆಗಳೂ ಒಂದಕ್ಕೊಂದು ಹೊಂದಾಣಿಕೆಯಲ್ಲಿ ನಡೆದರೆ ಮಾತ್ರ ಮಳೆಗಾಲದಲ್ಲಿ ವಿದ್ಯುತ್ ಹಾಗೂ ದೂರವಾಣಿ ಗ್ರಾಹಕರುಗಳಿಗೆ ಸಮಸ್ಯೆಯುಂಟಾಗುವದಿಲ್ಲ.
ಅದು ಹೇಗೆ ಎನ್ನುವ ಆಶ್ಚರ್ಯ ಮೂಡುವದು ಸಹಜ. ವಿದ್ಯುತ್ ವ್ಯತ್ಯಯವಾದರೆ ವಿನಿಮಯ ಕೇಂದ್ರ ಅಥವ ಟವರ್ ಸ್ಥಗಿತಗೊಳ್ಳುತ್ತದೆ. ಇದನ್ನು ಜನರೇಟರ್ ಬಳಸಿ ಚಾಲನೆಯಲ್ಲಿಡಲು ನಿರಂತರವಾಗಿ ಬಿ.ಎಸ್.ಎನ್.ಎಲ್.ಗೆ ಸಾಧ್ಯವಿಲ್ಲವಂತೆ. ಕೆಲಹೊತ್ತು ಮಾತ್ರ ಇದು ಸಾಧ್ಯ ಎಂಬದು ಅಧಿಕಾರಿಗಳ ವಿವರ. ಆದರೆ ಜನತೆ ಹೇಳುವಂತೆ ಇಲ್ಲಿ ಜನರೇಟರ್ಗೆ ಡೀಸೆಲ್ ಸಂಗ್ರಹ ಇರುವುದಿಲ್ಲ. ಇದಕ್ಕೆ ಹಲವು ಸಮಸ್ಯೆಗಳಿವೆ. ಇದರಲ್ಲಿ ಹಣದ ಕೊರತೆಯೂ ಒಂದೆನ್ನಲಾಗಿದೆ. ಹಾಗಾಗಿ ಈ ಇಲಾಖೆಗೆ ನಿರಂತರ ವಿದ್ಯುತ್ ಸರಬರಾಜು ಅತ್ಯಗತ್ಯ. ವಿದ್ಯುತ್ ಇಲಾಖೆಗೆ ಅಗತ್ಯ ಸಾಮಗ್ರಿ, ಸಿಬ್ಬಂದಿ ಕೊರತೆಯಿಲ್ಲ. ಈಗಾಗಲೇ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಆದರೆ, ತುರ್ತು ಸಂದರ್ಭ ದೂರವಾಣಿ ಸಂಪರ್ಕ ಅದು ಸ್ಥಿರ ದೂರವಾಣಿ ಇರಬಹುದು ಮೊಬೈಲ್ ಇರಬಹುದು ಸಂಪರ್ಕ ಅತ್ಯಗತ್ಯ. ದೂರವಾಣಿ ಸಂಪರ್ಕ ಕಡಿತಗೊಂಡರೆ ತಕ್ಷಣ ವಿದ್ಯುತ್ ಸಮಸ್ಯೆಗಳನ್ನು ಸಿಬ್ಬಂದಿಗೆ ಕಚೇರಿಯಿಂದ ಮಾಹಿತಿ ನೀಡಲು ತೊಡಕುಂಟಾಗಲಿದೆ ತುರ್ತು ದುರಸ್ತಿಗೆ ಧಕ್ಕೆಯುಂಟಾಗಲಿದೆ. ಸಮಸ್ಯೆಗಳ ಕುರಿತು ಪರಸ್ಪರ ತಿಳಿಸಲೂ ಕಷ್ಟವಾಗುತ್ತದೆ. ಮಳೆಗಾಲದ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ತೊಂದರೆ ಕಂಡುಬಂದರೆ ಅದನ್ನು ತಿಳಿಸಲು ಮುಖ್ಯ ಕಚೇರಿಗೇ ಆಗಮಿಸಬೇಕಾಗುತ್ತದೆ ಸಿಬ್ಬಂದಿಗಳು.
ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ಡಿಆರ್ಎಫ್) ಬೀಡುಬಿಟ್ಟು ಸ್ಥಳೀಯ ಆಡಳಿತದೊಂದಿಗೆ ಕೈಜೋಡಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಮಾತ್ರವಲ್ಲ ಈ ವರ್ಷದ ಮಳೆಗಾಲವನ್ನು ಎದುರಿಸಲೂ ಜಿಲ್ಲಾಡಳಿತ ಎನ್ಡಿಆರ್ಎಫ್ ತಂಡವನ್ನು ಜಿಲ್ಲೆಗೆ ಕಳುಹಿಸಲು ಮನವಿ ಮಾಡಿದೆ. ಇದರೊಂದಿಗೆ ಪೊಲೀಸ್ ಇಲಾಖೆಯೂ ಸಜ್ಜುಗೊಳ್ಳುತ್ತಿದೆ. ಪ್ರಸಕ್ತ ವರ್ಷ ಮಳೆಗಾಲದೊಂದಿಗೆ ಕೊರೊನಾದ ಆತಂಕವಿರುವದು ಮತ್ತೊಂದು ಸಂದಿಗ್ಧತೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಸೆಸ್ಕ್ನೊಂದಿಗೆ ದೂರಸಂಪರ್ಕ ಇಲಾಖೆಯಾದ ಬಿಎಸ್ಎನ್ಎಲ್ ಕೂಡ ಸಜ್ಜಾಗಬೇಕಿದೆ.
ಕಳೆದ ವರ್ಷದಲ್ಲಿ
ಕಳೆದ ವರ್ಷದ ಭಾರೀ ಮಳೆ-ಗಾಳಿಯಿಂದಾಗಿ ಜಿಲ್ಲೆ ಅಕ್ಷರಶಃ ನಲುಗಿ ಹೋಗಿತ್ತು. ಈ ಸಂದರ್ಭದಲ್ಲಿ ನಗರ, ಪಟ್ಟಣ ಪ್ರದೇಶಗಳೂ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕಗಳು ದಿನಗಟ್ಟಲೆ ಇಲ್ಲದಂತಾಗಿ ಜನತೆ ಬಹುಶಃ ಪರಸ್ಪರ ಸಂಪರ್ಕವನ್ನೇ ಕಡಿದುಕೊಳ್ಳುವಂತಾಗಿತ್ತಲ್ಲದೆ ಹೊರ ಜಗತ್ತಿನಲ್ಲಿ ಏನಾಗುತ್ತಿದೆ ಎಂಬ ಮಾಹಿತಿಗಳು ಕೂಡ ಅಲಭ್ಯದಂತಾಗಿತ್ತು.
ಬಿಎಸ್ಎನ್ಎಲ್ನಲ್ಲಿ
ಜಿಲ್ಲೆಯಲ್ಲಿ ಬಹುತೇಕ ದೂರವಾಣಿ ವಿನಿಮಯ ಕೇಂದ್ರಗಳು ವಿದ್ಯುತ್ ಕಡಿತಗೊಂಡ ಪರಿಣಾಮ ನಿರಂತರವಾಗಿ ನಿಷ್ಕ್ರಿಯಗೊಂಡಿದ್ದವು. ಈ ಕೇಂದ್ರಗಳಿಗೆ ಜನರೇಟರ್ಗಳಿಗೆ ಡೀಸೆಲ್ ಕೂಡ ಇಲ್ಲದಂತಾಗಿದ್ದು, ಈ ಬಗ್ಗೆ ವ್ಯಾಪಕ ಅಸಮಾಧಾನಗಳು ಕೇಳಿ ಬಂದಿದ್ದವು. ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಆಕ್ಷೇಪಿಸಿದ್ದರು. ಕೇಂದ್ರ ಸಚಿವರಾದ ಸದಾನಂದಗೌಡ, ಸಂಸದ ಪ್ರತಾಪ್ಸಿಂಹ ಅವರುಗಳು ಈ ಕುರಿತು ಪ್ರತಿಕ್ರಿಯಿಸಿ ಅಗತ್ಯ ವ್ಯವಸ್ಥೆಗೆ ಕ್ರಮಕೈಗೊಳ್ಳುವದಾಗಿ ಹೇಳಿದ್ದರು. ಆದರೆ ಎಲ್ಲವೂ ಅದೇ ಸ್ಥಿತಿಯಲ್ಲಿದೆ. ಮಾತ್ರವಲ್ಲ ಬಿಎಸ್ಎನ್ಎಲ್ ಸಂಸ್ಥೆ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿತಗೊಳಿಸುವ ಈ ಬಾರಿ ಜಾರಿಗೆ ತಂದ ಸ್ವಯಂ ನಿವೃತ್ತಿ ಯೋಜನೆ (ವಿಆರ್ಎಸ್)ಯಲ್ಲಿ ಜನವರಿ 31ಕ್ಕೆ ಜಿಲ್ಲೆಯಲ್ಲಿ ಸುಮಾರು 131 ಸಿಬ್ಬಂದಿ ನಿವೃತ್ತರಾಗಿದ್ದಾರೆ.
ಇದರಿಂದ ಪ್ರಸ್ತುತ ಜಿಲ್ಲೆಯಲ್ಲಿ ಶೇ. 70 ರಷ್ಟು ಸಿಬ್ಬಂದಿಗಳು ಇಳಿಮುಖರಾಗಿದ್ದಾರೆ. ಅದರಲ್ಲೂ ಫೀಲ್ಡ್ ಸ್ಟಾಫ್ಗಳು ತೀರಾ ಕಡಿಮೆಯಿದ್ದಾರೆ. ಅಂಕಿ ಅಂಶದಂತೆ ಇದೀಗ ಐದಾರು ವಿನಿಮಯ ಕೇಂದ್ರಗಳಿಗೆ ಕೇವಲ ಒಬ್ಬ ಫೀಲ್ಡ್ ಸ್ಟಾಫ್ ಇದ್ದಾರೆ. ಮಳೆಗಾಲದ ತುರ್ತು ಸಂದರ್ಭದಲ್ಲಿ ಇವರು ಕಾರ್ಯನಿರ್ವಹಿಸುವದು ಹೇಗೆ ಎಂಬದು ಸಾರ್ವಜನಿಕರ ಪ್ರಶ್ನೆಯಾಗಿದೆ. ಪ್ರಸ್ತುತ ಬಹುತೇಕ ಕಡೆಗಳಲ್ಲಿ ಸ್ಥಿರ ದೂರವಾಣಿ ಸಂಪರ್ಕ ಇಲ್ಲವಾದರೂ ಮೊಬೈಲ್ ಟವರ್ಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ಅದರಲ್ಲೂ ವಿದ್ಯುತ್ ಕಡಿತಗೊಂಡರೆ ಟವರ್ಗಳ ಕಾರ್ಯ ಸ್ಥಗಿತಗೊಳ್ಳುತ್ತದೆ.
ಟಿಡಿಎಂ ಹೇಳುವದು
ಈ ಕುರಿತು ‘ಶಕ್ತಿ’ ಜಿಲ್ಲಾ ಪ್ರಬಂಧಕ ಪೊನ್ನುರಾಜ್ ಅವರಿಂದ ಪ್ರತಿಕ್ರಿಯೆ ಬಯಸಿದಾಗ ಪ್ರಸ್ತುತ ಎಲ್ಲವೂ ಆಧುನಿಕ ತಂತ್ರಜ್ಞಾನವಾಗಿದೆ. ಇಲಾಖೆ 24x7 ಕಾರ್ಯನಿರ್ವಹಿಸುತ್ತದೆ. ಸಿಬ್ಬಂದಿಗಳಿಲ್ಲದಿದ್ದರೂ ಕಾರ್ಯನಿರ್ವಹಣೆ ಸಹಜ ವಾಗಿರುತ್ತದೆ. ಪ್ರಾಕೃತಿಕ ದುರಂತಗಳ ಸಂದರ್ಭ ಏನೂ ಮಾಡಲಾಗದು. ವಿದ್ಯುತ್ ಇಲಾಖೆ ವಿನಿಮಯ ಕೇಂದ್ರಕ್ಕೆ ವಿದ್ಯುತ್ ಪೂರೈಸಬೇಕಾಗುತ್ತದೆ. ಹಿಂದಿನಂತೆ ಡೀಸಲ್ ಬಳಸಿ ನಿರಂತರವಾಗಿ ಕೇಂದ್ರ ಚಾಲನೆಯಲ್ಲಿರಿಸಲು ಸಾಧ್ಯವಿಲ್ಲ. ‘ವಿ ಕಾಂಟ್ ಡು ಎನಿಥಿಂಗ್’ ಎನ್ನುತ್ತಾರೆ. ನಿರಂತರ ವಿದ್ಯುತ್ ಯೋಜನೆಯಂತೆ ಸೆಸ್ಕ್ ವಿದ್ಯುತ್ ಪೂರೈಸಬೇಕೆಂದು ಪೊನ್ನುರಾಜ್ ಹೇಳಿದರು.
ಸೆಸ್ಕ್ನ ಸಮಸ್ಯೆಯೇ ಬೇರೆ
ಸೆಸ್ಕ್ನ ಜಿಲ್ಲಾ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಅವರಿಂದ ಮಾಹಿತಿ ಬಯಸಿದಾಗ ತಮ್ಮ ಇಲಾಖೆಗೂ ಮಳೆಗಾಲದ ಸಂದರ್ಭ ದೂರವಾಣಿ ವ್ಯತ್ಯಯದಿಂದಾಗಿ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ನೆಟ್ವರ್ಕ್ ಇಲ್ಲದಿರುವದರಿಂದ, ತುರ್ತು ಸಂದರ್ಭಗಳಲ್ಲಿ ಲೈನ್ಮ್ಯಾನ್ಗಳು ಮುಖ್ಯ ಕಚೇರಿಗೆ ಮಾಹಿತಿ ನೀಡಲು, ವಿದ್ಯುತ್ ತಂತಿಗಳು ತುಂಡರಿಸಿದಂತಹ ಅಪಾಯ ಉಂಟಾದರೆ ತಕ್ಷಣ ವಿದ್ಯುತ್ ಸ್ಥಗಿತಗೊಳಿಸಲು ಮಾಹಿತಿ ಕೊರತೆ ಎದುರಾಗುತ್ತದೆ. ಮರ ಬೀಳುವದು, ಬರೆ - ಬೆಟ್ಟ ಕುಸಿತವಾದಾಗ ವಿದ್ಯುತ್ ವ್ಯವಸ್ಥೆ ಒದಗಿಸುವದು ಕಷ್ಟಸಾಧ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಕನಿಷ್ಟ ಮಳೆಗಾಲದಲ್ಲಾದರೂ ಅಗತ್ಯ ಡೀಸೆಲ್ ಸಂಗ್ರಹಿಸಿಕೊಂಡು ದೂರವಾಣಿ ಸಂಪರ್ಕಕ್ಕೆ ಟವರ್ಗಳನ್ನು ಚಾಲನೆಯಲ್ಲಿರಿಸಿದಲ್ಲಿ ವಿದ್ಯುತ್ ಇಲಾಖೆಗೂ, ಸಾರ್ವಜನಿಕರಿಗೂ ಅನುಕೂಲ ವಾಗುತ್ತದೆ ಎಂದು ಅವರು ಹೇಳುತ್ತಾರೆ. ಈ ಕುರಿತು ಸಂಬಂಧಿಸಿದವರಿಗೆ ಈ ಹಿಂದೆಯೂ ಹೇಳಲಾಗಿದ್ದರೂ ಸಮಸ್ಯೆಗಳು ಮುಂದುವರಿಯುತ್ತಿವೆ ಎಂಬದು ಅವರ ಅಭಿಪ್ರಾಯವಾಗಿದೆ. ಜಿಲ್ಲೆಯಲ್ಲಿ ನಿರಂತರ ವಿದ್ಯುತ್ ಸ್ಕೀಂ ಇಲ್ಲ ಎಂದು ಸೋಮಶೇಖರ್ ನುಡಿದರು.
ಮೇಲ್ನೋಟಕ್ಕೆ ಕಂಡು ಬರುವಂತೆ ಕೊಡಗಿನ ಮಳೆಗಾಲದ ಸಂದರ್ಭಕ್ಕೆ ವಿದ್ಯುತ್ ಇಲಾಖೆ ಹಾಗೂ ಬಿಎಸ್ಎನ್ಎಲ್ ನಡುವೆ ಸಮನ್ವಯತೆ ಕಂಡು ಬರುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲೆಯ ಜನಪ್ರತಿನಿಧಿಗಳು ಅದರಲ್ಲೂ ಕೇಂದ್ರ ಸರಕಾರದೊಂದಿಗೆ ಓರ್ವರಾಗಿರುವ ಸಂಸದ ಪ್ರತಾಪ್ಸಿಂಹ ಅವರು ಹೆಚ್ಚು ಮುತುವರ್ಜಿ ವಹಿಸಬೇಕಿದೆ.