ಸೋಮವಾರಪೇಟೆ,ಮೇ 24: ಶನಿವಾರಸಂತೆ ಮತ್ತು ಸೋಮವಾರಪೇಟೆಯಲ್ಲಿ ನಡೆದಿರುವ ಘಟನೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸೇರಿದಂತೆ ಪದಾಧಿಕಾರಿಗಳು ಕ್ಷುಲ್ಲಕ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಎಂ.ಬಿ. ಅಭಿಮನ್ಯುಕುಮಾರ್ ಶನಿವಾರಸಂತೆ ಯಲ್ಲಿ ರೌಡಿಶೀಟರ್ ಗಳಿಂದ ದರ್ಶನ್ ಎಂಬಾತನ ಮೇಲೆ ಹಲ್ಲೆ ನಡೆದಿದೆ. ತಾ. 18ರಂದು ರಾತ್ರಿ 8 ಗಂಟೆಗೆ ಈ ಬಗ್ಗೆ ಶನಿವಾರಸಂತೆ ಠಾಣೆಗೆ ದೂರು ನೀಡಿದ್ದರೂ ಮೊಕದ್ದಮೆ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯ ಸಂಬಂಧಿಕರು ಠಾಣೆಗೆ ತೆರಳಿ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, ಹಾಸನ ಜಿಲ್ಲೆಯಿಂದ ಸಂಘಪರಿವಾರದವರು ಬಂದು ಗೂಂಡಾಗಿರಿ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿರುವದು ಖಂಡನೀಯ ಎಂದರು.

ಶನಿವಾರಸಂತೆಯಲ್ಲಿ ನಡೆದಿರು ವದು ವೈಯುಕ್ತಿಕ ಘಟನೆ. ಈ ಬಗ್ಗೆ ಆತನ ಸಂಬಂಧಿಕರು ಠಾಣೆಗೆ ತೆರಳಿ ಪ್ರಶ್ನಿಸಿದ್ದಾರೆ. ದರ್ಶನ್‍ನ ಸಂಬಂಧಿಕರಾದ ರಘು ಅವರು ಭಜರಂಗದಳದ ಮುಖಂಡರಾಗಿದ್ದು, ತಮ್ಮ ಸಂಬಂಧಿಕರ ನೆರವಿಗೆ ಬಂದಿದ್ದಾರೆ. ಇದರಲ್ಲಿ ಸಂಘ ಪರಿವಾರ, ಬಿಜೆಪಿ, ಜೆಡಿಎಸ್, ಕಾಂಗ್ರೆಸ್‍ನವರು ಎಂದು ಬೊಟ್ಟು ಮಾಡುವದು ಸರಿಯಲ್ಲ. ಇದಕ್ಕೆ ಕೋಮು ಬಣ್ಣವನ್ನು ಹಚ್ಚಲು ಕಾಂಗ್ರೆಸ್ ಯತ್ನಿಸುತ್ತಿರುವದು ಖಂಡನೀಯ ಎಂದು ಅಭಿಮನ್ಯುಕುಮಾರ್ ಹೇಳಿದರು.

ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ ಹಾಗೂ ಹುಲ್ಲೂರಿಕೊಪ್ಪ ಗ್ರಾಮದಲ್ಲಿ ಲಾರಿ ಸುಟ್ಟ ಪ್ರಕರಣಕ್ಕೂ ಬಿಜೆಪಿ ಹಾಗೂ ಸಂಘ ಪರಿವಾರಕ್ಕೂ ಯಾವದೇ ಸಂಬಂಧವಿಲ್ಲ ಎಂದ ಅವರು, ಲಾರಿ ಸುಟ್ಟ ದುಷ್ಕರ್ಮಿಗಳನ್ನು ಪೊಲೀಸರು ಶೀಘ್ರವಾಗಿ ಬಂಧಿಸಲಿ ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿದ್ದ ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ ಮಾತನಾಡಿ, ಅಂದು ರಾತ್ರಿ 8 ಗಂಟೆಗೆ ದೂರು ನೀಡಿದ್ದರೂ, ಮಾರನೇ ದಿನ 12 ಗಂಟೆಯವರೆಗೂ ಎಫ್‍ಐಆರ್ ದಾಖಲಿಸಿರಲಿಲ್ಲ. ಇದನ್ನು ಕೇಳಲು ತೆರಳಿದವರ ವೀಡಿಯೋ ಮಾಡಿರುವ ಸ್ಥಳೀಯರು ‘ದಾಂಧಲೆ ನಡೆಸಿದ್ದಾರೆ’ ಎಂದು ಆರೋಪಿಸುತ್ತಿದ್ದಾರೆ. ಶನಿವಾರಸಂತೆ ಭಾಗದ ಬಿಜೆಪಿ ಮುಖಂಡರ ಲಾರಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಘಟನೆಯೂ ನಡೆದಿದ್ದು, ಪೊಲೀಸರು ಆದಷ್ಟು ಶೀಘ್ರ ಆರೋಪಿಗಳನ್ನು ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಶರತ್, ಪಟ್ಟಣ ಪಂಚಾಯಿತಿ ಸದಸ್ಯರಾದ ಪಿ.ಕೆ. ಚಂದ್ರು, ಬಿ.ಆರ್. ಮಹೇಶ್ ಉಪಸ್ಥಿತರಿದ್ದರು.