ಸುಂಟಿಕೊಪ್ಪ, ಮೇ 25: ರಾಜ್ಯದ ಗುತ್ತಿಗೆ ಆಯುಷ್ ವೈದ್ಯರುಗಳ ಆಯುಷ್ ಶಿಷ್ಯ ವೇತನ ತಾರತಮ್ಯ ನೀತಿ ಖಾಸಗಿ ಆಯುಷ್ ವೈದ್ಯರುಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.
ಎನ್ಆರ್ಎಚ್ಎಂ,ಎನ್ಎಚ್ಎಂ, ಆರ್ಬಿಎಸ್ಕೆ ಹಾಗೂ ಎಗೆಸ್ಟ್ ಪೋಸ್ಟ್ ಆಯುಷ್ ವೈದ್ಯರುಗಳ ವೇತನ ಹೆಚ್ಚಿಸುವ ಕುರಿತು ಈಗಾಗಲೇ ಮನವಿ ಪತ್ರಗಳನ್ನು ನೀಡಿದ್ದು, ಸಾಂಕೇತಿಕವಾಗಿ ತಾ.5ರಿಂದ ಕಪ್ಪುಬಟ್ಟೆ ಧರಿಸಿ ಕರ್ತವ್ಯ ನಿರ್ವಹಿಸಿದ್ದರೂ ಸರಕಾರ ಸ್ಪಂದಿಸದಿರುವುದರಿಂದ ಶನಿವಾರದಿಂದ ಎಲ್ಲಾ ವಿಭಾಗದ ಗುತ್ತಿಗೆ ಆಯುಷ್ ವೈದ್ಯರುಗಳು ರಾಜ್ಯಾದ್ಯಂತ ಸಾಮೂಹಿಕವಾಗಿ ತಮ್ಮ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಶಿಷ್ಯ ವೇತನದಲ್ಲೂ ಆಯುಷ್ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶಿಷ್ಯ ವೇತನ ನೀಡುತ್ತಿದ್ದು ಹಲವು ಬಾರಿ ನೀಡಲಾಗಿದ್ದರೂ, ಸರಕಾರ ಪರಿಗಣಿಸದಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ತಾ.23 ರಿಂದ ಆಯುಷ್ ವಿದ್ಯಾರ್ಥಿಗಳು ಕೂಡ ಸಾಮೂಹಿಕವಾಗಿ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.
ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯರ್ನಿಹಿಸುತ್ತಿರುವ ಆಯುಷ್ ವೈದ್ಯರುಗಳಿಗೆ ತುರ್ತು ಸಂದರ್ಭಗಳಲ್ಲಿ ಮತ್ತು ಅವಶ್ಯವಿದ್ದಲ್ಲಿ ರೋಗಿಗಳಿಗೆ ಅಲೋಪತಿ ಜೌಷಧಿಗಳನ್ನು ನೀಡುವುದರ ಮೂಲಕ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಿಗಳು ಹಾಗೂ ನವಜಾತ ಶಿಶು ಸುರಕ್ಷಾ ಕಾರ್ಯಕ್ರಮದಲ್ಲಿ ಷರತ್ತುಗಳಿಗೆ ಒಳಪಟ್ಟು ಅನುಮತಿ ನೀಡಿದೆ. ದೇಶದಲ್ಲಿ 11 ರಾಜ್ಯಗಳಲ್ಲಿ ಮಹಾರಾಷ್ಟ್ರ, ಚಂಢಿಗಡ, ಪಂಜಾಬ್, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಈಗಾಗಲೇ ಪರವಾನಾಗಿ ನೀಡಿದ್ದು, ಅದೇ ಆದೇಶವನ್ನು ರಾಜ್ಯದಲ್ಲಿನ ಖಾಸಗಿ ವೈದ್ಯರುಗಳಿಗೆ ವಿಸ್ತರಿಸಬೇಕೆಂದು ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಕೋವಿಡ್ -19 ತುರ್ತು ಸಮಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಖಾಸಗಿ ಆಯುಷ್ ವೈದ್ಯರುಗಳು ಜ್ವರದ ಕ್ಲಿನಿಕ್ ಹಾಗೂ ಕ್ವಾರಂಟೈನ್ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅತಿ ಹೆಚ್ಚು ಗ್ರಾಮೀಣ ಪ್ರದೇಶ ಹಾಗೂ ಹಿಂದುಳಿದ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಸರ್ಕಾರಿ ಆಯುಷ್ ವೈದ್ಯರಿಗೆ ನೀಡಿರುವ ಆದೇಶವನ್ನು ಖಾಸಗಿ ವೈದ್ಯರಿಗೂ ವಿಸ್ತರಿಸಬೇಕೆಂದು ಬೇಡಿಕೆಯಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಸಂಬಂಧಿಸಿದ ಸಚಿವರುಗಳಿಗೆ ಹಾಗೂ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದರಿಂದ ತಮ್ಮ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ ಎಂದು ಆಯುಷ್ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಮನನೊಂದು ಈ ನಿರ್ಧಾರ ಕೈಗೊಳ್ಳಲಾಗಿದ್ದು ಇದರಿಂದ ಸಾರ್ವಜನಿಕರಿಗೆ ಆಗುವ ತೊಂದರೆ ಗಳಿಗೆ ಸರ್ಕಾರವೇ ಹೊಣೆಯಾಗಿ ರುತ್ತದೆ ಎಂದು ಆಯುಷ್ ವೈದ್ಯರ ಸಂಘದ ಪದಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾ. 23 ರಿಂದ ಎಲ್ಲಾ ಸರಕಾರಿ ಗುತ್ತಿಗೆ ಆಯುಷ್ ವೈದ್ಯರು ಹಾಗೂ ಖಾಸಗಿ ಆಯುಷ್ ವೈದ್ಯರುಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದ್ದು, ಸರ್ಕಾರ ಆಯುಷ್ ವೈದ್ಯರ ವಿಭಾಗದ ಎಲ್ಲಾ ಬೇಡಿಕೆಗಳನ್ನು ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಡಾ.ಪ್ರಾಣೇಶ್, ಡಾ. ಆರ್ಚನ, ಡಾ. ಭರತ್ ಇತರರು ಮನವಿ ಮಾಡಿಕೊಂಡಿದ್ದಾರೆ.