ಶನಿವಾರಸಂತೆ, ಮೇ 22: ಸೊಪ್ಪು ತರಕಾರಿ ತುಂಬಿಸಿಕೊಂಡ ಮಾರಾಟಕ್ಕೆ ಹೋಗುವ ವಾಹನವಲ್ಲ. ಸುಮಾರು 3 ವರ್ಷಗಳಿಂದ ನಿಂತಲ್ಲೇ ನಿಂತಿರುವ (ಕೆಟ್ಟುಹೋದ) ವಾಹನದ ಒಳಭಾಗ ಹಾಗೂ ಹೊರಭಾಗ ಸೊಪ್ಪಿನಿಂದ ಆವೃತವಾಗಿದೆ.

ಶನಿವಾರಸಂತೆಯ ಕಾವೇರಿ ರಸ್ತೆಯಲ್ಲಿರುವ ಮಕ್ಕಳ ಕಟ್ಟೆ ಕೆರೆಯ ದಡದಲ್ಲಿ ಯಾರೋ ಬಿಟ್ಟುಹೋದ ಸುಮಾರು 3 ವರ್ಷಗಳಿಂದ ಬಿಸಿಲು - ಮಳೆಗೆ ಮೈಯೊಡ್ಡಿ ನಿಂತಿದೆ. ಈ ಹಿಂದೆ ಈ ವಾಹನದಲ್ಲಿ ರಾತ್ರಿ ಯಾರೋ ಮಲಗಿದ್ದು, ಬೆಳಿಗ್ಗೆ ಎದ್ದು ಹೋಗುತ್ತಿದ್ದರು. ಇದೀಗ ಈ ವಾಹನ ಸೊಂಪಾಗಿ ಬೆಳೆದ ಸೊಪ್ಪಿನ ಗಿಡಗಳಿಂದ ಮುಚ್ಚಿಹೋಗಿದೆ. ಮಳೆಗಾಲದಲ್ಲಿ ವಾಹನದೊಳಗಡೆ ನೀರು ನಿಂತು ಸೊಳ್ಳೆಗಳ ವಾಸಸ್ಥಾನವಾಗಿ ಡೆಂಗ್ಯೂ ರೋಗ ಹರಡುವ ಸಾಧ್ಯತೆ ಇದೆ. ಸಂಬಂಧಪಟ್ಟ ಇಲಾಖೆಯಾಗಲಿ, ಪೊಲೀಸ್ ಠಾಣೆ ಅಥವಾ ಗ್ರಾಮ ಪಂಚಾಯಿತಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತಾಗಲಿ ಎಂದು ಇಲ್ಲಿನ ಸುತ್ತಮುತ್ತ ವಾಸಿಸುವ ನಾಗರಿಕರು ಪತ್ರಿಕೆಯೊಂದಿಗೆ ದೂರಿಕೊಂಡಿದ್ದಾರೆ.