ಮಡಿಕೇರಿ, ಮೇ 22 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸೂಕ್ಷ್ಮಾಣು ಜೀವಿ ವಿಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೋವಿಡ್ ಪರೀಕ್ಷೆಯ ಪ್ರಯೋಗಾಲಯ ವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ಉದ್ಘಾಟಿಸಿದರು. ಹಿರಿಯ ವೈದ್ಯರಾದ ಡಾ. ಮನೋಹರ್ ಜಿ. ಪಾಟ್ಕರ್ ಕೂಡ ಕೈಜೋಡಿಸಿದರು.

ವಿಪತ್ತು ನಿಧಿಯಡಿ ಸುಮಾರು ರೂ. 1.06 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕೋವಿಡ್ ಪರೀಕ್ಷಾ ಪ್ರಯೋಗಾಲಯವನ್ನು ಡಾ. ಪಾಟ್ಕರ್ ಟೇಪ್ ಕತ್ತರಿಸಿ ಚಾಲನೆ ನೀಡಿದರು. ಇದೇ ವೇಳೆ ಸಚಿವರು ಪ್ರಯೋಗಾಲಯವು ಕಾರ್ಯ ನಿರ್ವಹಿಸುವ ಬಗ್ಗೆ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಮಾಹಿತಿ ಪಡೆದರು.

ಶಾಸಕರಾದ ಕೆ.ಜಿ ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ, ಜಿ.ಪಂ ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ., ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಮೋಹನ್, ಕೊಡಗು ವೈದ್ಯಕೀಯ ಕಾಲೇಜಿನ ಡೀನ್ ಡಾ. ಕಾರ್ಯಪ್ಪ, ಅಧೀಕ್ಷಕ ಡಾ. ಲೋಕೇಶ್ ಇತರರು ಇದ್ದರು.

ಪ್ರಯೋಗಾಲಯದಲ್ಲಿ ಒಂದು ಬಾರಿಗೆ 100 ಮಂದಿಯ ಮೂಗು, ಗಂಟಲು ದ್ರವ ಮಾದರಿ ಪರೀಕ್ಷಿಸಬಹುದಾಗಿದೆ. ಇಲ್ಲಿಯವರೆಗೆ ಕೊಡಗು ಜಿಲ್ಲೆಯಿಂದ ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿತ ಮಾದರಿಗಳನ್ನು ಮೈಸೂರಿನ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗುತ್ತಿತ್ತು. ಇನ್ನು ಮುಂದೆ ಕೋವಿಡ್ ಪರೀಕ್ಷಾ ಸೌಲಭ್ಯವು ಜಿಲ್ಲೆಯಲ್ಲಿಯೇ ಲಭ್ಯವಾಗಲಿದೆ. ಮುಂದಿನ ಒಂದು ವಾರದಲ್ಲಿ ಪೂರ್ಣ ಪ್ರಮಾಣದ ಪರೀಕ್ಷೆಯು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಯೋಗಾಲಯದಲ್ಲಿ ಪ್ರಾರಂಭವಾಗಲಿದೆ. ಮುಂದಿನ ದಿನಗಳಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Iಅಒಖ) ಯಿಂದ ಅನುಮತಿ ಪಡೆದು ಈ ಪ್ರಯೋಗಾಲಯವನ್ನು ಇತರೆ ವೈರಾಣುಗಳಿಂದ ಹರಡುವ ರೋಗಗಳ ಪರೀಕ್ಷೆಗೂ ಬಳಸಬಹುದಾಗಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಿಬ್ಬಂದಿಗಳು ಸಚಿವರಿಗೆ ಮಾಹಿತಿ ನೀಡಿದರು.